Monday, March 30, 2020

ಅಕ್ರಮ ಮದ್ಯ ಮಾರಟ ಓರ್ವನ ಬಂಧನ



ಅಕ್ರಮವಾಗಿ ಮದ್ಯಮಾರಟ ನಡೆಯುತ್ತಿದ್ದ ಮನೆಯ ಮೇಲೆ ದಾಳಿ ನಡೆಸಿದ ಕಳಸ ಠಾಣೆ ಪೊಲೀಸರು ಒಬ್ಬನನ್ನು ಬಂಧಿಸಿ ಸುಮಾರು 2000ಕ್ಕೂ ಅಧಿಕ ಮೌಲ್ಯದ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ.
ಇಡಕಣಿ ಗ್ರಾಮದ ಸಿಡ್ಲಾರ್ ಮಕ್ಕಿಯ ಜಯರಾಜ್ ( 36) ಬಂಧಿತ ವೈಕ್ತಿ . ಈತನು ತನ್ನ ಮನೆಯಲ್ಲಿ ಅಕ್ರಮವಾಗಿ 
 ಬೆಂಗಳೂರು ವಿಸ್ಕಿ ಪ್ಯಾಕೆಟ್ ಗಳನ್ನು ಇಟ್ಟುಕೊಂಡು ಹೆಚ್ಚಿನ ಬೆಲೆಗೆ ಮಾರಟ ಮಾಡುತಿದ್ದ ಬಗ್ಗೆ ಪೊಲೀಸರು ಖಚಿತ ಮಾಹಿತಿ ಸಂಗ್ರಹಿಸಿದ್ದರು. ಭಾನುವಾರ ಸಂಜೆ ಕಳಸ ಠಾಣೆ ಪೊಲೀಸರು ದಾಳಿ ನಡೆಸಿ ಸುಮಾರು 2000ಕ್ಕೂ ಅಧಿಕ ಮೌಲ್ಯದ ಬೆಂಗಳೂರು ವಿಸ್ಕಿ ಪ್ಯಾಕೆಟ್ ಗಳನ್ನು ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.
ಈ ಕಾರ್ಯಚರಣೆಯಲ್ಲಿ ಕಳಸ ಠಾಣೆಯ ಸಿಬ್ಬಂದಿಗಳಾದ ಪಿಎಸ್ಐ ಮಂಜಣ್ಣ, ಎಎಸೈ ಮುರಳೀಧರ, ಎಎಸೈ ಗೋವಿಂದ್ ನಾಯ್ಕ್, ಪೊಲೀಸ್ ಕಾನ್ಸ್ಟೇಬಲ್ ಪ್ರದೀಪ್ ಮತ್ತು ತಿಪ್ಪೇಶ್ ಪಾಲ್ಗೊಂಡಿದ್ದರು.


ಕೊರೋನಾದಿಂದಾಗಿ ಜೈಲುವಾಸ ತಪ್ಪಿಸಿಕೊಂಡ ಆರೋಪಿ.

ಈ ನಡುವೆ ಕೊರೋನಾ ಭೀತಿ ಹಿನ್ನಲೆಯಲ್ಲಿ ಆರೋಪಿಯ ಮೇಲೆ ಎಫ್ಐಆರ್ ದಾಖಲಾಗಿದ್ದರೂ ಕೂಡ ಆರೋಪಿಯನ್ನು ಕೋರ್ಟ್ ಗೆ ಹಾಜರು ಪಡಿಸಿದಂತೆ ನ್ಯಾಯಾಧೀಶರು ಠಾಣಾಧಿಕಾರಿಗೆ ತಿಳಿಸಿದ್ದು, ಆರೋಪಿಗೆ ಯಾರಾದರೂ ಜಾಮೀನು ನೀಡಿದರೆ ಅವರನ್ನು ಬಿಡುಗಡೆಗೊಳಿಸುವಂತೆ ಮೂಡಿಗೆರೆ ತಾಲ್ಲೂಕು ನ್ಯಾಯಾಧೀಶರು ಠಾಣಾಧಿಕಾರಿಗೆ ತಿಳಿಸಿದ್ದಾರೆ.

Friday, March 27, 2020

ಕಳಸದ ಪಾಂಡವ ಉಪ್ಪರಿಗೆಯಲ್ಲಿದೆ ಬೃಹತ್ ಶಿಲಾ ಸಂಸ್ಕೃತಿಯ ನೆಲೆ





ಚಿಕ್ಕಮಗಳೂರು ಜಿಲ್ಲೆಗೆ ಹೊಸದಾಗಿ ಸೇರ್ಪಡೆಯಾದ ಕಳಸ ತಾಲೂಕು ಹಚ್ಚ ಹಸಿರಿನ ಪ್ರಕೃತಿಯೊಂದಿಗೆ ಐತಿಹಾಸಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಶ್ರೀಮಂತವಾಗಿದೆ. ಕ್ರಿ. ಶ. 1154 ರಿಂದ 18ನೇ ಶತಮಾನದವರೆಗೂ ಅನೇಕ ರಾಜಮನೆತನಗಳ ಆಳ್ವಿಕೆಗೆ ಒಳಪಟ್ಟಿತ್ತು ಎಂಬುದಕ್ಕೆ ಇಲ್ಲಿ ದೊರೆತಿರುವ ಹಲವು ಶಾಸನ ಮತ್ತು ಸ್ಮಾರಕಗಳು ಪ್ರಮುಖ ಆಕರಗಳಾಗಿವೆ. ಹೊಂಬುಜದ ಸಾಂತರಸರು, ಕಳಸ-ಕಾರ್ಕಳ ಭೈರರಸರು, ವಿಜಯನಗರ ಅರಸರು, ಕೆಳದಿ ಅರಸರು, ಮೈಸೂರು ಒಡೆಯರು ಇಲ್ಲಿ ಆಳ್ವಿಕೆ ನಡೆಸಿದ ಪ್ರಮುಖ ರಾಜಮನೆತನಗಳು.

 “ಇತಿಹಾಸ ಮರೆತವನು ಇತಿಹಾಸವನ್ನು ಸೃಷ್ಟಿಸಲಾರರು” ಎಂಬ ಅಂಬೇಡ್ಕರ್ ಅವರ ಮಾತಿನಂತೆ ಸ್ಥಳ, ವ್ಯಕ್ತಿ, ವಸ್ತು ಎಲ್ಲಾ ವಿಷಯಕ್ಕೂ ತನ್ನದೇಯಾದ ಇತಿಹಾಸವಿರುತ್ತದೆ. ಇದನ್ನು ಮರೆತರೆ ಯಾವುದೇ ಕ್ಷೇತ್ರಕ್ಕೂ ಮಹತ್ವವಿರುವುದಿಲ್ಲ. ದೇಶದ ಇತಿಹಾಸದೊಂದಿಗೆ ಆಯಾ ಊರಿನ ಸ್ಥಳೀಯ ಚರಿತ್ರೆಯು ಮುಖ್ಯವಾಗಿದ್ದು, ಅವುಗಳ ಅಧ್ಯಯನ ಅಗತ್ಯ. ಆದರೆ ಅನೇಕ ಸಂದರ್ಭದಲ್ಲಿ ಸ್ಥಳೀಯ ಚರಿತ್ರೆಗಳ ಅಧ್ಯಯನ ನಿಲ್ರ್ಯಕ್ಷಕ್ಕೆ ಒಳಗಾಗಿವೆ. ಭಾರತದ ಇತಿಹಾಸದ ಪತದಲ್ಲಿ ಮೌರ್ಯ, ಶಾತವಾಹನ, ಚೋಳ, ಚೇರ, ಚಾಲುಕ್ಯ, ಪಲ್ಲವ, ಕದಂಬ, ಕಾಕತೀಯ, ಹೊಯ್ಸಳ, ವಿಜಯನಗರ ಅರಸುಮನೆತನಗಳು ಪ್ರಮುಖ ಸ್ಥಾನದಲ್ಲಿದ್ದು, ಇವುಗಳ ಇತಿಹಾಸದ ಕುರಿತು ಪ್ರಾಥಮಿಕ ಶಿಕ್ಷಣದಿಂದಲೂ ತಿಳಿದುಕೊಂಡಿರುತ್ತೇವೆ. ಆದರೆ ನಮ್ಮ ಊರಿನ ಇತಿಹಾಸವನ್ನೇ ಮರೆತಿರುತ್ತೇವೆ. ದೇಶದ ಇತಿಹಾಸದ ಜೊತೆಯಲ್ಲೇ ಸ್ಥಳೀಯ ಚರಿತ್ರೆಯ ಕುರಿತು ತಿಳುವಳಿಕೆ ಅತ್ಯಗತ್ಯ. ಸ್ಥಳೀಯವಾಗಿಯೇ ಕೆಲವೊಂದು ರಾಜಮನೆತನವಾಗಲೀ, ಪಾಳೆಗಾರರಾಗಲೀ ತಮ್ಮ ಗಡಿಯನ್ನು ರಕ್ಷಿಸುವ ಹೊಣೆಯೊಂದಿಗೆ ಹೋರಾಡುತ್ತಿರುತ್ತಾರೆ.

ವಲೆನಾಡಿನ ಕಾನನಗಳ ನಡುವೆ ಇರುವ ಚಿಕ್ಕಮಗಳೂರು ಜಿಲ್ಲೆಯ ಕಳಸವು ಕೂಡ ಸ್ಥಳೀಯ ಅರಸು ಮನೆತನವಾದ ಕಳಸ-ಕಾರ್ಕಳ ಭೈರರಸರ ಆಳ್ವಿಕೆಗೆ ಒಳಪಟ್ಟಿತ್ತು ಎಂಬುದಕ್ಕೆ ಅವರ ಆಳ್ವಿಕೆಗೆ ಸಂಬಂಧ ಪಟ್ಟಿರುವ ಶಾಸನಗಳು ಸಾಕ್ಷಿಯಾಗಿವೆ. ಈ ಎಲ್ಲಾ ಐತಿಹಾಸಿಕ ಸ್ಮಾರಕಗಳು ಒಂದು ಊರಿನ ಕಾಲಮಾನವನ್ನು ಇನ್ನಷ್ಟು ಹಿಂದಕ್ಕೆ ಕರೆದೊಯ್ಯುತ್ತವೆ. ಕಳಸದಲ್ಲಿ ದೊರೆತಿರುವ ಇತಿಹಾಸ ಕಾಲಕ್ಕೆ ಸಂಬಂಧಿಸಿದ ಪ್ರಾಥಮಿಕ ಆಕರಗಳನ್ನು ಗಮನಿಸಿದಾಗ ಕ್ರಿ. ಶ. 11 ಮತ್ತು 12ನೇ ಶತಮಾನದಿಂದ ಇಲ್ಲಿನ ರಾಜಕೀಯ, ಸಾಂಸ್ಕೃತಿಕ, ಆರ್ಥಿಕ, ಸಾಮಾಜಿಕ ಜೀವನದ ಕುರಿತು ಮಾಹಿತಿ ದೊರೆಯುತ್ತದೆ. ಇದರ ಜೊತೆಯಲ್ಲಿ ಕಳಸ ಪರಿಸರದ ಇತಿಹಾಸವನ್ನು ಕ್ರಿ. ಪೂರ್ವಕ್ಕೆ ಕರೆದೊಯ್ಯುವ ಬೃಹತ್ ಶಿಲಾಯುಗ ಸಂಸ್ಕೃತಿ ನೆಲೆಯೊಂದು ಕ್ಷೇತ್ರಕಾರ್ಯ ಸಂದರ್ಭದಲ್ಲಿ ದೊರೆತಿವೆ.
ಬೃಹತ್ ಶಿಲಾಯುಗ ಸಂಸ್ಕೃತಿ ಯುಗವೆಂದರೆ, ಈ ಸಂಸ್ಕøತಿಗೆ ಸೇರಿದ ಜನರು ವಿವಿಧ ಮಾಧರಿಯ ಶಿಲಾ ಗೋರಿಗಳನ್ನು ನಿರ್ಮಿಸುತ್ತಿದ್ದರಿಂದ ಈ ಸಂಸ್ಕೃತಿಯನ್ನು ಬೃಹತ್ ಶಿಲಾ ಸಂಸ್ಕೃತಿ ಎಂದು ಕರೆಯಲಾಗಿದೆ. ಶಿಲಾ ಸಮಾಧಿಗಳು ಅಂದಿನ ಜನರ ಪಾರಂಪರಿಕ ನಂಬಿಕೆಗಳ ತಳಹಾದಿಯ ಮೇಲೆ ರೂಪಿತವಾದವುಗಳಾಗಿವೆ.. ಕ್ರಿ. ಪೂರ್ವದಿಂದಲೇ ವ್ಯಕ್ತಿಯು ಸತ್ತ ನಂತರ ಸ್ವರ್ಗ, ನರಕಕ್ಕೆ ಹೋಗುತ್ತಾನೆ ಎಂಬ ಕಲ್ಪನೆಯೊಂದಿಗೆ ದೊಡ್ಡ-ದೊಡ್ಡಕಲ್ಲುಗಳ ಮೂಲಕ ಸಮಾಧಿಗಳನ್ನು ಮಾಡುವ ಜೊತೆಯಲ್ಲಿ ಸಮಾಧಿಯೊಂದಿಗೆ ವ್ಯಕ್ತಿಯು ಬಳಸುತ್ತಿದ್ದ ವಸ್ತಗಳನ್ನು ಇಡುತ್ತಿದ್ದರು. ಇಂತಹ ಸಮಾಧಿಗಳು ಜಗತ್ತಿನಾದ್ಯಂತ ದೊರೆತಿದ್ದು, ಇವುಗಳ ಉತ್ಖನನದಿಂದ ಸಮಾಧಿಗಳ ಕಲ್ಪನೆಗೆ ಖಚಿತ ಮಾಹಿತಿಯನ್ನೊದಗಿಸಿದೆ. ಬೃಹತ್ ಶಿಲಾಯುಗಕ್ಕೆ ಸಂಬಂದಿಸಿದಂತೆ ಅನೇಕ ಮಾದರಿಯ ಸಮಾಧಿಗಳಿವೆ. ಅವುಗಳ ರಚನೆಯ ಆಧಾರದ ಮೇಲೆ ವಿಂಗಡಿಸಲಾಗಿದೆ, ಅವುಗಳೆಂದರೆ ಹಾದಿಕೋಣೆ, ಕಿಂಡಿಕೋಣೆ, ಆಯತಾಕಾರದ ಅಂತರ್ಗತ ಶವ ಪೆಟ್ಟಿಗೆ, ಕಲ್ಗುಪ್ಪೆ, ಕುಣಿ ದಫನ ದಿನ್ನೆ, ಅಸ್ತಿ ಪಾತ್ರೆ ದಫನ, ಕೊಡೆಕಲ್, ಟೋಪಿಕಲ್, ದಫನ ದಿನ್ನೆ, ನಿಲುಸುಗಲ್ಲು.

ಈ ಸಂಸ್ಕೃತಿ ಯ ಕಾಲಮಾನವು ಉತ್ತರ ಕರ್ನಾಟಕದಲ್ಲಿ ಕ್ರಿ. ಪೂ. 1200-100ರ ಸುಮಾರಿಗೆ ಆರಂಭವಾಗಿ ಕ್ರಿ. ಪೂ. 3-2ನೇ ಶತಮಾನದವರೆಗೆ ಪ್ರವರ್ಧಮಾನದಲ್ಲಿ ಇತ್ತೆಂದು ತಿಳಿಯುತ್ತದೆ. ದಕ್ಷಿಣ ಕರ್ನಾಟಕದಲ್ಲಿ ಈ ಸಂಸ್ಕøತಿಯು ಕ್ರಿ. ಪೂ. 1200-25ರ ವರೆಗೆ ಪ್ರವರ್ದಮಾನಕ್ಕೆ ಬಂದಿದ್ದು, ಕಬ್ಬಿಣವನ್ನು ಬಳಸಿಕೊಂಡು ದೊಡ್ಡ-ದೊಡ್ಡ ಬಂಡೆಗಳನ್ನು ಸೀಳಿ ಶವಸಂಸ್ಕಾರಕ್ಕೆ ಬಳಸಿಕೊಂಡಿರುವ ಸಂಗತಿ ತಿಳಿದು ಬರುತ್ತದೆ.ಅ. ಸುಂದರ ಅವರು 1975ರಲ್ಲಿ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಕ್ಷೇತ್ರಕಾರ್ಯ ಶೋಧನೆ ನಡೆಸಿದ್ದಾರೆ. ಸರ್ ಮಾರ್ಟಿಮರ್ ವೀಲ್ಹರ್ ಅವರು ಕ್ರಿ. ಶ. 1947ರಲ್ಲಿ ಚಿತ್ರದುರ್ಗ ಜಿಲ್ಲೆಯ ಬ್ರಹ್ಮಗಿರಿಯಲ್ಲಿ ಬೃಹತ್ ಶಿಲಾಯುಗದ ಸಮಾಧಿಯ ಉತ್ಖನನ ಮಾಡಿದ್ದಾರೆ. ಕರ್ನಾಟಕದ ಅನೇಕ ಭಾಗಗಳಲ್ಲಿ ವಿವಿಧ ಮಾದರಿಯ ಬಗ್ಗೆ ಅಧ್ಯಯನವಾಗಿದೆ. ಆದರೆ ಮಲೆನಾಡು ಭಾಗದಲ್ಲಿ ಇವುಗಳ ಅಧ್ಯಯನದ ಕೊರೆತೆಯನ್ನು ಕಾಣಬಹುದು ಕಾರಣ ಅತಿ ಹೆಚ್ಚು ಮಳೆ ಮತ್ತು ಅರಣ್ಯ ಪ್ರದೇಶವು ಏತ್ತೇಚ್ಚವಾಗಿರುವುದು. ಇಂತಹ ಮಲೆನಾಡು ಪ್ರದೇಶವಾಗಿರುವ ಕಳಸದ ಪಾಂಡವರ ಉಪ್ಪರಿಗೆಯಲ್ಲಿ ಬೃಹತ್ ಶಿಲಾಯುಗ ಸಂಸ್ಕೃತಿಗೆ ಸೇರಿದ ಕೊಡೆಕಲ್, ನಿಲುಸುಗಲ್ಲು, ಕಂಡಿಕೋಣೆ ಮಾದರಿಯ ಸಮಾಧಿಗಳು ಮತ್ತು ಕಲ್ಗುಳಿಗಳು ದೊರೆತಿರುವುದು ವಿಶೇಷವೆನಿಸಿದೆ.  ಮೂಡಿಗೆರೆ ತಾಲೂಕಿನಲ್ಲಿ ಕಗ್ಗನಹಳ್ಳ, ಬಣಕಲ್ ಮತ್ತು ಕೊಟ್ಟಿಗೆಹಾರದಲ್ಲಿ ಪ್ರಾಗೀತಿಹಾಸ ಕಾಲಕ್ಕೆ ಸಂಬಂಧಿಸಿದ ನೆಲೆಗಳು ದೊರೆತಿದ್ದು ಇವುಗಳನ್ನು ಕೆ. ಪಿ. ಪೊಣಚ್ಚ ಅವರ ಮಹಾಪ್ರಬಂಧವಾದ ಆಕ್ರ್ಯಿಯಾಲಜಿ ಆಫ್ ಕರ್ನಾಟಕ(ಪ್ರಿ ಆಂಡ್ ಪೋಸ್ಟ್ ಹಿಸ್ಟರಿ ಆಫ್ ಸೌತ್ ವೆಸ್ಟರ್ನ ರಿಜಿಯನ್) ಮತ್ತು ಆರ್. ಬಿ. ಫೂಟ್ ಅವರ ಇಂಡಿಯನ್ ಪ್ರೀ ಹಿಸ್ಟಾರಿಕ್ ಆಂಡ್ ಪ್ರೋಟೋ ಹಿಸ್ಟಾರಿಕ್ ಆಂಟಿಕ್ಯುಟೀಸ್‍ನಲ್ಲಿ ಪ್ರಕಟಿಸಿದ್ದಾರೆ.

ಪ್ರೊ. ಅ. ಸುಂದರ ಅವರ ಉಪನ್ಯಾಸ ಸಂದರ್ಭದಲ್ಲಿ ಪಾಂಡವರ ಮನೆ, ಪಾಂಡವರ ದಿಬ್ಬ, ಮೊರೆಯರ ಮನೆ, ಕಲ್ಮನೆ ಇಂತಹ ಹೆಸರುಗಳುಳ್ಳ ಪ್ರದೇಶದಲ್ಲಿ ಹೆಚ್ಚಿನದಾಗಿ ಬೃಹತ್ ಶಿಲಾಸಂಸ್ಕøತಿಯ ನೆಲೆಗಳು ದೊರೆತಿವೆ ಎಂಬುದನ್ನು ಈಗಾಗಲೇ ದೊರೆತಿರುವ ನೆಲೆಗಳನ್ನು ಉದಾಹರಣೆ ನೀಡುವ ಮೂಲಕ ವಿವರಿಸುವಾಗ ನೆನಪಾಗಿದ್ದು, ಕಳಸದಿಂದ ಸುಮಾರು 9 ಕಿ. ಮೀ. ದೂರದಲ್ಲಿರುವ ಪಾಂಡವರ ಉಪ್ಪರಿಗೆ. ಈ ಸ್ಥಳದಲ್ಲಿ ಐದು ಗುಹೆಗಳಿದ್ದು, ಸ್ಥಳೀಯರು ಇಲ್ಲಿ ಪಾಂಡವರು ವಾಸವಾಗಿದ್ದರು ಎಂಬ ನಂಬಿಕೆಯನ್ನು ಹೊಂದಿದ್ದಾರೆ. ಈ ಕೂತುಹಲದಿಂದ ಸ್ಥಳಕ್ಕೆ ಕ್ಷೇತ್ರಕಾರ್ಯಗೊಂಡಾಗ ಮೂರು ಮಾದರಿಯ ಸಮಾಧಿಗಳು ದೊರೆತ್ತಿದ್ದು, ಇವು ಆದಿಮಾನವನ ಚಟುವಟಿಕೆಗೆ ಒಳಪಟ್ಟ ಪ್ರದೇಶವೆಂದು ತಿಳಿದುಬರುತ್ತದೆ.

ಕೊಡೆಕಲ್ ಸಮಾಧಿ: 
ದಕ್ಷಿಣ ಭಾರತದ ಎಲ್ಲೆಡೆ ವೈವಿಧ್ಯಮಯವಾದ ಬೃಹತ್ ಶಿಲಾಯುಗದ ಸಮಾಧಿಗಳು ಕಂಡುಬರುತ್ತವೆ. ಕರ್ನಾಟಕದಲ್ಲಿಯೂ ಸಹ ಅಸಂಖ್ಯಾತ ಮಾದರಿಯ ಬೃಹತ್ ಶಿಲಾಯುಗ ಸಮಾಧಿಗಳು ಕಂಡುಬಂದಿವೆ. ಆದರೆ, ಕೇರಳ ರಾಜ್ಯದಲ್ಲಿ ಕೆಲವು ವಿಶಿಷ್ಟ ಮಾದರಿಯ ಸಮಾಧಿಗಳು ಕಂಡು ಬಂದಿದ್ದು, ಅವುಗಳನ್ನು ಟೋಪಿಕಲ್ಲು ಸಮಾಧಿ, ಕೊಡೆಕಲ್ ಸಮಾಧಿಗಳೆಂದು ಕರೆಯಲಾಗುತ್ತದೆ. ಕಳಸದ ಪಾಂಡವರ ಉಪ್ಪರಿಗೆಯಲ್ಲಿ ದೊಡ್ಡ ಶಿಲಾವೃತ್ತದ ನಡುವೆ ಕೊಡೆ ಆಕಾರದ ಬೃಹತ್ ಶಿಲೆಯನ್ನು ಇರಿಸಲಾಗಿದೆ. ಕಳಸದಲ್ಲಿ ಕಂಡು ಬಂದ ಕೊಡೆಕಲ್ ಸಮಾಧಿಯು ಕರ್ನಾಟಕದಲ್ಲಿ ಕಂಡು ಬಂದ ಹೊಸ ಮಾದರಿಯ ಸಮಾಧಿಯಾಗಿದೆ. ಕೇವಲ ಕೇರಳಕ್ಕೆ ಸೀಮಿತವಾದ ಮಾದರಿಯೆಂದು ಭಾವಿಸಲಾಗಿದ್ದ ಕೊಡೆಕಲ್ ಮಾದರಿ ಸಮಾಧಿ ಅಧ್ಯಯನ ಪ್ರದೇಶವಾದ ಕಳಸದಲ್ಲಿಯೂ ಪತ್ತೆಯಾಗಿದೆ.
ಕ್ಷೇತ್ರ ಅಧ್ಯಯನದಲ್ಲಿ ಎರಡು ಕೊಡೆಕಲ್ ಸಮಾಧಿಗಳು ಪತ್ತೆಯಾಗಿದ್ದು, ಒಂದು ಸಮಾಧಿಯಿಂದ ಇನ್ನೊಂದು ಸಮಾಧಿಗೆ ಸುಮಾರು 0.5 ಕಿ.ಮೀ ಅಂತರವಿದೆ. ಇದರಲ್ಲಿ ಒಂದು ಸಮಾಧಿಯು ಟೋಪಿಯಾಕಾರದಲ್ಲಿದ್ದು, ನೆಲಕ್ಕೆ ಸಮವಾಗಿದೆ. ಇನ್ನೊಂದು ಸಮಾಧಿಯನ್ನು ಎರಡು ಹಾಸುಗಲ್ಲಿನ ಮೇಲೆ ಕೊಡೆಯಾಕಾರದಲ್ಲಿ ನಿಲ್ಲಿಸಲಾಗಿದೆ. ಈ ನೆಲೆಗೆ ಸಂಬಂಧಿಸಿದಂತೆ Joanna Sudyaka “The megalithic iron age culture in south india some general remarks ಲೇಖನವನ್ನು ಗಮನಿಸಿದಾಗ ದಕ್ಷಿಣ ಭಾರತದಲ್ಲಿ ದೊರೆಯುವ ಬೃಹತ್ ಶಿಲಾಯುಗ ಸಂಸ್ಕೃತಿಯ ಸಮಾಧಿಗಳ ಕುರಿತು ಚರ್ಚಿಸಿದ್ದಾರೆ. ಇದರಲ್ಲಿ ಕೊಡೆಕಲ್, ಟೋಪಿಕಲ್‍ಗಳನ್ನು ವಿವರಿಸುವಾಗ ಹ್ಯಾಟ್, ಕ್ಯಾಪ್, ಹುಡ್‍ಸ್ಟೋನ್ ಮಾದರಿಗಳೆಲ್ಲವು ಒಂದೇ ಮಾದರಿಯವೆಂದು ತಿಳಿಸಿದ್ದಾರೆ. ಟೋಪಿಕಲ್ ಮಾದರಿ ಸಮಾಧಿ ಎಂದರೆ ಲಂಬವಾಗಿ ಇಟ್ಟಿರುವ ಮೂರು ಕಲ್ಲುಗಳ ಮೇಲೆ ಟೋಪಿಯಾಕಾರದ ಕಲ್ಲನ್ನು ಇಡುವುದು. ಹಾಗೆಯೇ ಅರ್ಧಾಕಾರದ ಕಲ್ಲನ್ನು ನೆಲದ ಮಟ್ಟಕಿಡುವುದನ್ನು ಟೋಪಿಕಲ್ಲು ಅಥವಾ ‘ಹುಡ್‍ಸ್ಟೋನ್’ಎಂದು ಕರೆಯುತ್ತಾರೆ ಎಂದು ಲೇಖನದಲ್ಲಿ ಸ್ಪಷ್ಟಪಡಿಸಿದ್ದಾರೆ. B. K. Gururaj Rao ಅವರ ‘Megalithic Culture in South India ಕೃತಿಯಲ್ಲಿ ಕೊಡೆಕಲ್ಲು, ಹುಡ್‍ಸ್ಟೋನ್‍ಗಳ ಕುರಿತು ಹೇಳುವಾಗ ಎರಡು ಒಂದೇ ಮಾದರಿಯವೆಂದು ತಿಳಿಸಿದ್ದಾರೆ. ಇಂತಹ ಸಮಾಧಿಗಳು ಕೊಚ್ಚಿನ್, ಮಲ್ಬಾರ್, ಪಶ್ಚಿಮ ಘಟ್ಟ, ಕೊಯಮುತ್ತೂರ್, ನೊಯರ್ ನದಿ ಕಣಿವೆ ಪ್ರದೇಶ ಹಾಗೂ ಕೇರಳದಲ್ಲಿ ಹೇರಳವಾಗಿ ದೊರೆಯುತ್ತದೆ ಎಂಬುದಾಗಿ ತಿಳಿಸಿದ್ದಾರೆ. ಈ ಪ್ರಕಾರದ ಶಿಲಾ ಸಮಾಧಿಗಳು ಕರ್ನಾಟಕದಲ್ಲಿ ಅಪರೂಪವಾಗಿದ್ದು, ಕಳಸದ ಪಾಂಡವರ ಉಪ್ಪರಿಗೆಯಲ್ಲಿ ಕಂಡು ಬಂದಿರುವುದು ವಿಶೇಷವೆನಿಸಿದೆ.

ನಿಲುಸುಗಲ್ಲು ಸಮಾಧಿ:
ಕರ್ನಾಟಕದಾದ್ಯಂತ ಬಹಳ ಜನಪ್ರಿಯವಾಗಿ ಕಂಡುಬರುವ ಬೃಹತ್ ಶಿಲಾಯುಗದ ಸಮಾಧಿಗಳಲ್ಲಿ ನಿಲಿಸುಗ¯್ಲು ಸಮಾಧಿ ಮಾದರಿಯು ಒಂದು. ಅ. ಸುಂದರ ಅವರು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ನಗರದ ಸಮೀಪದ ಪ್ರದೇಶ ಮತ್ತು ಬೈಸೆಗಳಲ್ಲಿ ಅನೇಕ ನಿಲುಸುಗಲ್ಲು ಸಮಾಧಿಗಳನ್ನು ಸಂಶೋಧಿಸಿದ್ದಾರೆ. ಉಡುಪಿ ಜಿಲ್ಲೆಯ ಕುರ್ಕಾಲು, ಬುದ್ದನಜೆಡ್ಡು ಹಾಗೂ ನಿಟ್ಟೂರುಗಳಲ್ಲಿ, ಹಾಸನ ಜಿಲ್ಲೆ ಅರಸಿಕೆರೆಯಲ್ಲಿ, ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಅರಶಿನಗುಪ್ಪೆಯಲ್ಲಿ ಈ ಮಾದರಿಯ ನೆಲೆಗಳು ಪತ್ತೆಯಾಗಿವೆ. ಅಧ್ಯಯನ ಪ್ರದೇಶವಾದ ಪಾಂಡವರ ಉಪ್ಪರಿಗೆಯಲ್ಲಿ ಮೊದಲ ಬಾರಿಗೆ ಎರಡು ನಿಲುಸುಗಲ್ಲು ಸಮಾಧಿಗಳು ಪತ್ತೆಯಾಗಿವೆ. ಇಲ್ಲಿನ ಎರಡು ಸಮಾಧಿಗಳಲ್ಲಿ ಭೂಮಿಗೆ ಲಂಬವಾಗಿ ಪಶ್ಚಿಮಕ್ಕೆ ವಾಲಿದಂತೆ ನಿಲ್ಲಿಸಲಾಗಿದೆ. ಈ ಕಲ್ಲುಗಳು ತ್ರಿಕೋನಾಕಾರದಲ್ಲಿ ಕಂಡು ಬರುತ್ತವೆ. ಇವುಗಳ ಎತ್ತರ ಸುಮಾರು 9 ಅಡಿ ಉದ್ದ ಮತ್ತು ತಳ ಭಾಗದಲ್ಲಿ ಸುಮಾರು 6ಅಡಿ ಅಗಲವಾಗಿದೆ.

ಕಂಡಿಕೋಣಿ ಸಮಾಧಿ:
ಇದೇ ಪ್ರದೇಶದಲ್ಲಿ ಕಲ್ಮನೆ ಅಥವಾ ಕಂಡಿಕೋಣೆ ಸಮಾಧಿ ಅಥವಾ ಡಾಲ್ಮೆನ್ ಎಂದು ಕರೆಯಲಾಗುವ ಸಮಾಧಿ ಪತ್ತೆಯಾಗಿದ್ದು, ಪ್ರಸ್ತುತ ಈ ಸಮಾಧಿಯ ಕಲ್ಲು ಚಪ್ಪಡಿಗಳು ನೆಲಕ್ಕುರುಳಿದೆ. ಒಂದು ಕಲ್ಲು ಚಪ್ಪಡಿಯ ಮಧ್ಯಭಾಗದಲ್ಲಿ ವೃತ್ತಾಕಾರದ ರಂಧ್ರವನ್ನು ಮಾಡಲಾಗಿದೆ. ಆದ್ದರಿಂದ ಈ ಚಪ್ಪಡಿಗಳು ಬಹುಶಃ ಕಲ್ಮನೆ ಮಾದರಿ ಸಮಾಧಿಯ ಅವಶೇಷಗಳಿರಬೇಕೆಂದು ಊಹಿಸಲಾಗಿದೆ.

ಕಲ್ಗುಳಿಗಳು:
ಪಾಂಡವರ ಉಪ್ಪರಿಗೆಯಲ್ಲಿ ದೊರೆತಿರುವ ಕಲ್ಗುಳಿಗಳು:
ಆಫ್ರಿಕಾ, ಉತ್ತರ ಅಮೇರಿಕಾ ರಾಷ್ಟ್ರಗಳಲ್ಲಿ ‘ಮಂಕಾಲ’ (Mancala)ಎಂದು ಕರೆಯಲ್ಪಡುವ ಆಟವು ಭಾರತದ ಅಳಿಗುಳಿ ಮನೆ ಅಥವಾ ಚನ್ನಮಣೆ ಆಟದ ಹೋಲಿಕೆಯನ್ನು ಹೋಲುತ್ತದೆ. ಮಂಕಾಲ ಆಟವನ್ನು ಏಷ್ಯಾ ಮತ್ತು ಆಫ್ರಿಕಾದಾದ್ಯಂತ 7000 ವರ್ಷಗಳ ಹಿಂದಿನಿಂದ ಆಡಿರುವ ಇತಿಹಾಸವಿದೆ. ಈ ಆಟವು ಪ್ರಪಂಚದಾದ್ಯಂತ ನೂರಾರು ಹೆಸರುಗಳು ಮತ್ತು ವಿವಿಧ ಮಾದರಿಯ ರೂಪಾಂತರಗಳಿಂದ ಬಳಕೆಯಲ್ಲಿರುವುದು ಗಮನಾರ್ಹ. ಕಲ್ಲು, ಮರ, ಜೇಡಿಮಣ್ಣಿನಿಂದ ಈ ಆಟದ ಮಣೆಗಳನ್ನು ಮಾಡುತ್ತಿದ್ದರು. ಮೂಲತಃ ಇದು ಈಜಿಪ್ಟ್ ಆಟವಾಗಿದೆ. ‘ಮಂಕಾಲ’ಎಂಬ ಪದವು ಅರೇಬಿಕ್ ಪದವಾದ ‘ನಕಲಾ’ದಿಂದ ಬಂದಿದೆ. ಅಂದರೆ ‘ಚಲಿಸು’ಎಂಬ ಅರ್ಥವನ್ನು ನೀಡುತ್ತದೆ. ಬ್ರಿಟೀಷ್ ಮ್ಯೂಸಿಯಂನಲ್ಲಿರುವ ಪ್ರಾಚೀನ ಆಟಗಳ ತಜ್ಞ ‘ಇರ್ವಿಂಗ್ ಪಿಂಕೆರ್ಲ’ಅವರು ನೀಡಿದ ಮಾಹಿತಿಯನ್ನು ಅನ್ವಯಿಸಿ ಪುರಾತತ್ವಶಾಸ್ತ್ರಜ್ಞರು ಈ ಅರ್ಥವನ್ನು ನೀಡಿದ್ದಾರೆ. ಈ ಆಟ ಆಫ್ರಿಕಾದ ರಾಷ್ಟ್ರೀಯ ಆಟವು ಆಗಿದೆ. ಇಸ್ರೇಲ್‍ನ ಗೆಡೆರಾ ನಗರದಲ್ಲಿ ಉತ್ಖನನ ಮಾಡಿದಾಗ ರೋಮನ್ ಸ್ನಾನಗೃಹದಲ್ಲಿ ಅಳಿಗುಳಿಮನೆ ಆಟದ ಪುರಾವೆಗಳು ದೊರೆತಿದ್ದು, ಇವುಗಳ ಕಾಲವನ್ನು ಕ್ರಿ. ಶ. 2 ಮತ್ತು 3ನೇ ಶತಮಾನವೆಂದು ಹೇಳಲಾಗಿದೆ. ಕ್ರಿ. ಪೂ. 6000ರ ಕಾಲಮಾನಕ್ಕೆ ಸಂಬಂಧಿಸಿದ ಆಟದ ಮನೆ ಜೋರ್ಡಾನ್ನಲ್ಲಿ ಕಂಡುಬಂದಿದ್ದು, ಪುರಾತತ್ವಶಾಸ್ತ್ರಜ್ಞರು ಇದನ್ನು ವಿಶ್ವದ ಅತ್ಯಂತ ಹಳೆಯ ಆಟ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಮಂಕಾಲ ಆಟವು ಇಂಗ್ಲೆಂಡ್, ಸರ್ಬಿಯಾ, ಗ್ರೀಸ್ ಮತ್ತು ದಕ್ಷಿಣ ಜರ್ಮನಿಯ ವೀಕರ್ಶೀಮ್ ಕ್ಯಾನಲ್ಲಿಯು ಕಂಡುಬರುತ್ತದೆ. ಇಂತಹ ಕಲ್ಗುಳಿಗಳು ಪಾಂಡವರ ಉಪ್ಪರಿಗೆಯ ಬೃಹತ್ ಶಿಲಾಯುಗ ಸಮಾಧಿಗಳ ಆಸು ಪಾಸಿನಲ್ಲಿರುವ ನೈಸರ್ಗಿಕ ಬಂಡೆಗಳ ಮೇಲೆ ಕಂಡುಬರುತ್ತವೆ. ಅಧ್ಯಯನ ಪ್ರದೇಶದಲ್ಲಿ ಸುಮಾರು ಏಳುಕಡೆ ಕಲ್ಗುಳಿಗಳು ಕಂಡುಬಂದಿದ್ದು, ಅದರಲ್ಲಿ ಐದು ಕಲ್ಗುಳಿಗಳು ಜಾನಪದೀಯ ಅಳಿಗುಳಿ ಮನೆ ಅಥವಾ ಚೆನ್ನೆಮಣೆಯನ್ನು ಹೋಲುತ್ತವೆ. ತುಳುನಾಡಿನ ಜಾನಪದೀಯ ಆಟಗಳಲ್ಲಿ ಚೆನ್ನಮಣೆ ಆಟವು ಪ್ರಮುಖ ಆಟವಾಗಿದೆ. ತುಳು ಜಾನಪದದಲ್ಲಿ ಚೆನ್ನಮಣೆ ಸಾವಿನ ಸಂಕೇತವಾಗಿದೆ. ಇಲ್ಲಿನ ಐತಿಹ್ಯದ ಪ್ರಕಾರ ಅಕ್ಕ-ತಂಗಿಯರು ಆಟವನ್ನು ಆಡುವಾಗ ಮಣೆಯಲ್ಲಿ ಹೊಡೆದುಕೊಂಡು ಸಾಯುತ್ತಾರೆ. ಆದರಿಂದ ಅಕ್ಕ-ತಂಗಿಯರು, ಅಣ್ಣ-ತಮ್ಮಂದಿರು ಆಟವನ್ನು ಆಡಬಾರದೆಂದಿದೆ. “ಚೆನ್ನೆ”ಎಂದರೆ “ಸುಂದರ”ಎಂಬ ಅರ್ಥವನ್ನು ಹೊಂದಿದೆ. ತುಳು ನಾಡಿನಲ್ಲಿ ಈ ಆಟದ ಮಣೆಯು ಪ್ರಮುಖವಾಗಿ 14 ಕೋಣೆಗಳನ್ನು ಹೊಂದಿದ್ದು, ಇತರ ಪ್ರದೇಶಗಳಲ್ಲಿ ಅವುಗಳ ಸಂಖ್ಯೆಯಲ್ಲಿ ವ್ಯತ್ಯಾಸವನ್ನು ಕಾಣಬಹುದಾಗಿದೆ. ಕರಾವಳಿಯ ಜಾನಪದ ಮತ್ತು ಧಾರ್ಮಿಕ ಕಾರ್ಯಗಳಲ್ಲಿ ಚೆನ್ನೆಮಣೆ ಇಂದಿಗೂ ಬಹುಮುಖ್ಯವಾದ ಕಲಾಪವಾಗಿದೆ.
ಕಳಸದಲ್ಲಿ ಕಂಡುಬಂದಿರುವ ಕಲ್ಗುಳಿಗಳು ಎರಡು ಸಮಾನಾಂತರ ಸಾಲುಗಳಲ್ಲಿ 7+7 ಒಟ್ಟು 14 ಗುಳಿಗಳು ಕಂಡುಬರುತ್ತವೆ. ಕೆಲವು ಕಡೆ 18 ಗುಳಿಗಳನ್ನು ಒಳಗೊಂಡಿವೆ. ಈ ಮೊದಲೇ ವಿವರಿಸಿದಂತೆ ಪಾಂಡವರ ಉಪ್ಪರಿಗೆಯಲ್ಲಿ ಐದು ಗುಹೆಗಳು ಮತ್ತು ಐದು ಸಮಾಧಿಗಳು ಕಂಡುಬರುತ್ತವೆ. ಆದರಿಂದ ಈ ಐದು ಕಲ್ಗುಳಿಗಳು ಐದು ಸಮಾಧಿಗಳ ಅಥವಾ ಐದು ಸಾವಿನ ಸಂಕೇತವಾಗಿರಬಹುದು ಎಂಬ ಊಹೆಯನ್ನು ಮಾಡಬಹುದು.


ಸುಪ್ರೀತ ಕೆ. ಎನ್.
ಪಿಹೆಚ್.ಡಿ ಸಂಶೋಧನಾರ್ಥಿ
ಪ್ರಾಚೀನ ಇತಹಾಸ ಮತ್ತು ಅಧ್ಯಯನ ವಿಭಾಗ
ಕನ್ನಡ ವಿಶ್ವವಿದ್ಯಾಲಯ, ಹಂಪಿ

Saturday, March 14, 2020

ನ್ಯಾಯಾಲಯದ ಆದೇಶಕ್ಕೆ ಗೌರವ ಕೊಡದ ಅರಣ್ಯ ಇಲಾಖೆ – ರಂಗನಾಥ್


 ಜಯಪುರ: ಉಚ್ಚ ನ್ಯಾಯಾಲಯದ ತಡೆಯಾಜ್ಞೆ ಇದ್ದರೂ, ನ್ಯಾಯಾಲಯದ ಆದೇಶಕ್ಕೆ ಗೌರವ ನೀಡದೆ ಕಾಫೀ ಬೆಳಗಾರ ದಿನೇಶ್ ಹೆಬ್ಬಾರ್‍ರವರ 3 ಎಕರೆ ಕಾಫಿ ತೋಟವನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಖುಲ್ಲಾ ಮಾಡಿದ್ದಾರೆ.  ಇದು ಬೆಳೆಗಾರರ ಮೇಲೆ ಇಲಾಖೆ ಏಸಗಿರುವ ದೌರ್ಜನ್ಯವಾಗಿದ್ದು ಸಹ್ಯಾದ್ರಿ ಕಾಫಿ ಬೆಳೆಗಾರರ ಸಂಘ ಇದನ್ನು ಖಂಡಿಸುತ್ತದೆ ಎಂದು ಸಂಘದ ಅಧ್ಯಕ್ಷ ರಂಗನಾಥ್ ಹೇಳಿದರು.
ಹೇರೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಮೇದಕ್ಕಿಯ ಕೃಷಿಕ ದಿನೇಶ್ ಹೆಬ್ಬಾರ್ ರವರ ಖುಲ್ಲಾ ಮಾಡಿರುವ ಕಾಫಿ ತೋಟಕ್ಕೆ ಭೇಟಿ ನೀಡಿ ಮಾತನಾಡಿದ ಅವರು, ಸುಮಾರು 30 ವರ್ಷಗಳ ಹಿಂದಿನ ಕಾಫಿಗಿಡಗಳನ್ನು  ಮಾಲೀಕರಿಗೆ ತಿಳಿಸದೆ ಕತ್ತರಿಸಿ ಹಾಕಿರುವ ಅರಣ್ಯ ಇಲಾಖೆಯ ದಬ್ಬಾಳಿಕೆಯನ್ನು ಸಹಿಸಲಾಗುವುದಿಲ್ಲ, ಸರ್ಕಾರಿ ಭೂಮಿ ಒತ್ತುವರಿಯಾಗಿದ್ದರೆ ಜಮೀನಿನ ಬೇಲಿಯನ್ನು ತೆರವು ಮಾಡಬಹುದೇ ವಿನಃ ಗಿಡ ಕಡಿಯುವಂತಿಲ್ಲ. ಸುಮಾರು 1500ಕ್ಕೂ ಹೆಚ್ಚು ಹೂ ತುಂಬಿ ನಿಂತ ಗಿಡಗಳನ್ನು ಕತ್ತರಿಸುವ ಮೂಲಕ ಅಮಾನವೀಯ ಕೃತ್ಯ ಎಸಗಿದ್ದಾರೆ. ಒತ್ತುವರಿ ಮಾಡಿರುವ ತೋಟವನ್ನು ತೆರವೂ ಮಾಡದಂತೆ ನ್ಯಾಯಾಲಯದ ತಡೆಯಾಜ್ಞೆ ಇದ್ದರು ಗಿಡಗಳನ್ನು ಕತ್ತರಿಸಿರುವ ಉದ್ದೇಶವೇನು ಎಂಬುದನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಪಷ್ಟಪಡಿಸಬೇಕಿದೆ. ಈ ಬಗ್ಗೆ ಸಹ್ಯಾದ್ರಿ ಬೆಳೆಗಾರರ ಸಂಘ ವಲಯ ಅರಣ್ಯಾಧಿಕಾರಿಗಳ ಕಛೇರಿ ಮುಂದೆ ಪ್ರತಿಭಟನೆ ನಡೆಸಲಿದೆ ಎಂದರು.
ಈ ಸಂದರ್ಭದಲ್ಲಿ ಸಂಘದ ಸದಸ್ಯರಾದ ರಾಮೇಗೌಡ, ಅರ್ಥರ್ ಡಿಸೋಝಾ ಇತರರು ಹಾಜರಿದ್ದರು.

ಆರೋಗ್ಯ ತಪಾಸಣಾ ಶಿಬಿರ


ಕಳಸಕಳಸದ ಆರೋಗ್ಯ ಸಮುದಾಯ ಕೇಂದ್ರದಲ್ಲಿ ಇದೇ 15ರಂದು ವಿಶೇಷ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ. ಭಾನುವಾರ ಬೆಳಿಗ್ಗೆ 9ರಿಂದ ಮಧ್ಯಾಹ್ನ 2ರವರೆಗೆ  ಶಿಬಿರ ನಡೆಯಲಿದ್ದು.ಈ ಶಿಬಿರದಲ್ಲಿ ಹೃದಯರೋಗ ತಜ್ಞಕಿವಿಮೂಗು ಮತ್ತು ಗಂಟಲು ತಜ್ಞಪ್ರಸೂತಿ ಮತ್ತು ಸ್ತ್ರೀರೋಗ ತಜ್ಞಮೂಳೆ ಮತ್ತು ಕೀಲುರೋಗ ತಜ್ಞಕ್ಯಾನ್ಸರ್ ತಜ್ಞಶಸ್ತ್ರ ಚಿಕಿತ್ಸಕಮಕ್ಕಳ ತಜ್ಞ, ನೇತ್ರ ತಜ್ಞ ಮತ್ತು ದಂತ ತಜ್ಞರು ಭಾಗವಹಿಸಲಿದ್ದು, ಎಲ್ಲಾ ಸೇವೆಗಳು ಉಚಿತವಾಗಿದ್ದು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Friday, March 13, 2020

ಖಾಸಗಿ ಬಸ್ ಚಾಲಕ ಆತ್ಮಹತ್ಯೆಗೆ ಶರಣು!



ಕಳಸ: ಕಳೆದ ಹಲವು ವರ್ಷಗಳಿಂದ ಕಳಸದ  ಪ್ರತಿಷ್ಠಿತ ಕೆಕೆಬಿ ಬಸ್ ನ ಚಾಲಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ಹಿರೇಬೈಲ್ ಸಮೀಪದ ಬೂದಿಗುಂಡಿ ನಿವಾಸಿ ಭಾಸ್ಕರ್ ಅವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶುಕ್ರವಾರ ಮಧ್ಯಾಹ್ನ ಮನೆಯಲ್ಲಿದ್ದ ಕಳೆನಾಶಕ ಸೇವಿಸಿದ್ದು,ತಕ್ಷಣ ಅವರನ್ನು ಕಳಸದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಯಿತು. ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದುಕೊಂಡು ಹೋಗುವಾಗ ಮಾರ್ಗ ಮಧ್ಯದಲ್ಲೇ ಭಾಸ್ಕರ್ ಅವರು ಅಸುನೀಗಿದ್ದಾರೆ. ಆತ್ಮಹತ್ಯೆಗೆ ಯಾವುದೇ ಕಾರಣ ತಿಳಿದುಬಂದಿಲ್ಲ. ಈ ಬಗ್ಗೆ ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕರೋನಾ ಭೀತಿ ಹಿನ್ನಲೆ 1 ವಾರಗಳ ಕಾಲ ರಾಜ್ಯಾದ್ಯಂತ ತೀವ್ರ ಕಟ್ಟೆಚ್ಚೆರ!


ಕೊರೋನಾ ಭೀತಿ ಹೆಚ್ಚಾಗಿರುವುದರಿಂದ ಶನಿವಾರದಿಂದ ಕರ್ನಾಟಕದಲ್ಲಿ ಮಾಲ್, ಸಿನಿಮಾ ಟಾಕೀಸ್, ಪಬ್, ನೈಟ್​ ಕ್ಲಬ್ ಬಂದ್ ಆಗಲಿವೆ. 1 ವಾರಗಳ ಕಾಲ ರಾಜ್ಯದಲ್ಲಿ ಮದುವೆ, ಸಾರ್ವಜನಿಕ ಸಮಾರಂಭ, ಜಾತ್ರೆಗಳನ್ನು ನಡೆಸುವಂತಿಲ್ಲ. ಐಟಿ ಬಿಟಿ ಕಂಪನಿಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವಂತೆ ಸಿಎಂ ಬಿ.ಎಸ್. ಯಡಿಯೂರಪ್ಪ ಸೂಚನೆ ನೀಡಿದ್ದಾರೆ.

Thursday, March 12, 2020

ಚಿಕ್ಕಮಗಳೂರಿನಲ್ಲಿ ಕರೋನಾ ಶಂಕೆ!



ಮಂಗಳೂರು ಮೂಲದ ಸುಮಾರು 45 ವರ್ಷದ ವೈಕ್ತಿಯೊಬ್ಬರಿಗೆ ಕರೋನಾ ಸೋಂಕು ಇರುವ ಶಂಕೆ ವ್ಯಕ್ತಿವಾಗಿದ್ದು ಇವರನ್ನು ಚಿಕ್ಕಮಗಳೂರು ಜಿಲ್ಲಾ ಆಸ್ಪತ್ರೆಗೆ ದಾಖಲಾಗಿಸಲಾಗಿದೆ. ಪ್ರಸ್ತುತ ಇವರನ್ನು ಚಿಕ್ಕಮಗಳೂರು ಜಿಲ್ಲಾಸ್ಪತ್ರೆಯ  ಐಸೋಲೇಷನ್ ವಾರ್ಡ್ ನಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಈ  ವೈಕ್ತಿಯು 15 ದಿನಗಳ ಹಿಂದೆ ದುಬೈನಿಂದ ಮಂಗಳೂರಿಗೆ ಆಗಮಿಸಿದ್ದರು. ನಿನ್ನೆ ಇವರು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯಲ್ಲಿರುವ ಅವರ ತಂಗಿ ಮನೆಗೆ ಬಂದಿದ್ದರು ಆದರೆ ಇಂದು ಅವರಿಗೆ ತೀವ್ರ, ಕೆಮ್ಮು, ಶೀತ, ಮತ್ತು ಜ್ವರ ಕಾಣಿಸಿಕೊಂಡಿದ್ದು ಜ್ವರ ನಿಯಂತ್ರಣಕ್ಕೆ ಬಾರದ ಹಿನ್ನಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಶಂಕಿತ ರೋಗಿಯ ರಕ್ತವನ್ನು ಸಂಗ್ರಹಿಸಿ ಹೆಚ್ಚಿನ ಪರೀಕ್ಷೆಗಾಗಿ ಬೆಂಗಳೂರಿಗೆ ರವಾನಿಸಲಾಗಿದೆ.

Saturday, March 7, 2020

ಕಳ್ಳರಕಾಟದಿಂದ ಬೆಚ್ಚಿಬಿದ್ದ ಮಲೆನಾಡು.

ಮಲೆನಾಡಿನ ಸ್ವಚ್ಚಂದ ಹಸಿರು ಪರಿಸರದಲ್ಲಿ ಅಲ್ಲೊಂದು ಇಲ್ಲೊಂದು ಎಂಬಂತೆ ಮನೆಗಳಿರುವುದು ಸಹಜ. ಇಂತಹ ಮಲೆನಾಡಿನ ಶಾಂತಿಯುತ ಪರಿಸರದಲ್ಲಿ ಹದಿನೈದಕ್ಕೂ ಹೆಚ್ಚು ಜನರಿದ್ದ ದರೋಡೆಕೋರರ ಗುಂಪೆÇಂದು ಮನೆ ಮಾಲಿಕ ಹಾಗೂ ಕುಟುಂಬದ ಸದಸ್ಯರನ್ನು ಕಟ್ಟಿಹಾಕಿ ಲಕ್ಷಾಂತರ ರೂಗಳ ನಗನಾಣ್ಯಗಳನ್ನು ದೋಚಿದ ಘಟನೆ ಜಯಪುರ ಪೋಲೀಸ್ ಠಾಣಾ ವ್ಯಾಪ್ತಿಯ ಗುಡ್ಡೇತೋಟ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿದೆ. 

ಗುಡ್ಡೇತೋಟ ಸಣ್ಣಮನೆ ಕೃಷಿಕ ವಿಜಯರಾಘವರ ಮನೆಗೆ ಶುಕ್ರವಾರ ತಡರಾತ್ರಿ  12:30ಕ್ಕೆ ಮನೆಯ ಬಾಗಿಲು ಮುರಿದು ಒಳ ನುಗ್ಗಿದ ದರೋಡೆಕೋರರ ಗುಂಪೊಂದು ಮನೆಯ ಮಾಲಿಕ ಸೇರಿದಂತೆ ಪತ್ನಿ ಹಾಗೂ ಕೆಲಸದವರನ್ನು ಕಟ್ಟಿಹಾಕಿ ಮನೆಯಲ್ಲಿದ್ದ ಲಕ್ಷಾಂತರ ರೂ ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ದೋಚಿ  ಪರಾರಿಯಾಗಿದ್ದಾರೆ.

ಒಂದು ದೊಡ್ಡ ವಾಹನ ಹಾಗೂ ಎರಡು ಕಾರುಗಳಲ್ಲಿ ಬಂದ ಹದಿನೈದಕ್ಕೂ ಹೆಚ್ಚು ಜನರಿದ್ದ ದರೋಡೆಕೋರರ ಗುಂಪೊಂದು ಸುಮಾರು ಎರಡು ಘಂಟೆಗಳ ಕಾಲ ದರೋಡೆ ನಡೆಸಿದ್ದಲ್ಲದೆ, ಈ ಬಗ್ಗೆ ದೂರು ನೀಡಿದರೆ ಕೊಲೆ ಮಾಡುವುದಾಗಿ ಬೆದರಿಸಿ ಪರಾರಿಯಾಗಿದ್ದಾರೆ. ಗುಂಪಿನಲ್ಲಿದ್ದ ಎಲ್ಲರೂ ಜೀನ್ಸ ಪ್ಯಾಂಟ್, ಟೀಶರ್ಟ, ಶೂ ಹಾಗೂ ಮುಖಕ್ಕೆ ಮಂಕಿಕ್ಯಾಪ್ ಕೈಗಳಿಗೆ ಹ್ಯಾಂಡ್ ಗ್ಲೌಸ್ ಧರಿಸಿದ್ದರು. ದರೋಡೆಕೋರರು ಕತ್ತಿ, ಲಾಂಗ್, ಕಿಟಕಿ, ಬಾಗಿಲು ಮುರಿಯುವ ಸಲಕರಣೆಗಳು, ಕಬ್ಬಿಣ ಕತ್ತರಿಸುವ ಕಟ್ಟಿಂಗ್ ಮಿಷನ್ ಹೊಂದಿದ್ದರು ಎಂದು ದೂರಿನಲ್ಲಿ ಮನೆಯ ಮಾಲೀಕರು ತಿಳಿಸಿದ್ದಾರೆ.  ಘಟನಾ ಸ್ಥಳಕ್ಕೆ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ, ವೃತ್ತ ನಿರೀಕ್ಷಕರು, ಡಿವೈಎಸ್ಪಿ, ಜಯಪುರ ಠಾಣೆಯ ಎಸ್.ಐ. ಹಾಗೂ ಸಿಬ್ಬಂದಿಗಳು ಮತ್ತು ಬೆರಳಚ್ಚು ತಜ್ಞರು, ಶ್ವಾನದಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ

ಕಳ್ಳರಕಾ ಮಲೆನಾಡಿನ ಸ್ವಚ್ಚಂದ ಹಸಿರು ಪರಿಸರದಲ್ಲಿ ಅಲ್ಲೊಂದು ಇಲ್ಲೊಂದು ಎಂಬಂತೆ ಮನೆಗಳಿರುವುದು ಸಹಜ. ಇಂತಹ ಮಲೆನಾಡಿನ ಶಾಂತಿಯುತ ಪರಿಸರದಲ್ಲಿ ಹದಿನೈದಕ್ಕೂ ಹೆಚ್ಚು ಜನರಿದ್ದ ದರೋಡೆಕೋರರ ಗುಂಪೆÇಂದು ಮನೆ ಮಾಲಿಕ ಹಾಗೂ ಕುಟುಂಬದ ಸದಸ್ಯರನ್ನು ಕಟ್ಟಿಹಾಕಿ ಲಕ್ಷಾಂತರ ರೂಗಳ ನಗನಾಣ್ಯಗಳನ್ನು ದೋಚಿದ ಘಟನೆ ಜಯಪುರ ಪೋಲೀಸ್ ಠಾಣಾ ವ್ಯಾಪ್ತಿಯ ಗುಡ್ಡೇತೋಟ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿದೆ. 
ಗುಡ್ಡೇತೋಟ ಸಣ್ಣಮನೆ ಕೃಷಿಕ ವಿಜಯರಾಘವರ ಮನೆಗೆ ಶುಕ್ರವಾರ ತಡರಾತ್ರಿ  12:30ಕ್ಕೆ ಮನೆಯ ಬಾಗಿಲು ಮುರಿದು ಒಳ ನುಗ್ಗಿದ ದರೋಡೆಕೋರರ ಗುಂಪೊಂದು ಮನೆಯ ಮಾಲಿಕ ಸೇರಿದಂತೆ ಪತ್ನಿ ಹಾಗೂ ಕೆಲಸದವರನ್ನು ಕಟ್ಟಿಹಾಕಿ ಮನೆಯಲ್ಲಿದ್ದ ಲಕ್ಷಾಂತರ ರೂ ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ದೋಚಿ  ಪರಾರಿಯಾಗಿದ್ದಾರೆ.
ಒಂದು ದೊಡ್ಡ ವಾಹನ ಹಾಗೂ ಎರಡು ಕಾರುಗಳಲ್ಲಿ ಬಂದ ಹದಿನೈದಕ್ಕೂ ಹೆಚ್ಚು ಜನರಿದ್ದ ದರೋಡೆಕೋರರ ಗುಂಪೊಂದು ಸುಮಾರು ಎರಡು ಘಂಟೆಗಳ ಕಾಲ ದರೋಡೆ ನಡೆಸಿದ್ದಲ್ಲದೆ, ಈ ಬಗ್ಗೆ ದೂರು ನೀಡಿದರೆ ಕೊಲೆ ಮಾಡುವುದಾಗಿ ಬೆದರಿಸಿ ಪರಾರಿಯಾಗಿದ್ದಾರೆ. ಗುಂಪಿನಲ್ಲಿದ್ದ ಎಲ್ಲರೂ ಜೀನ್ಸ ಪ್ಯಾಂಟ್, ಟೀಶರ್ಟ, ಶೂ ಹಾಗೂ ಮುಖಕ್ಕೆ ಮಂಕಿಕ್ಯಾಪ್ ಕೈಗಳಿಗೆ ಹ್ಯಾಂಡ್ ಗ್ಲೌಸ್ ಧರಿಸಿದ್ದರು. ದರೋಡೆಕೋರರು ಕತ್ತಿ, ಲಾಂಗ್, ಕಿಟಕಿ, ಬಾಗಿಲು ಮುರಿಯುವ ಸಲಕರಣೆಗಳು, ಕಬ್ಬಿಣ ಕತ್ತರಿಸುವ ಕಟ್ಟಿಂಗ್ ಮಿಷನ್ ಹೊಂದಿದ್ದರು ಎಂದು ದೂರಿನಲ್ಲಿ ಮನೆಯ ಮಾಲೀಕರು ತಿಳಿಸಿದ್ದಾರೆ.  ಘಟನಾ ಸ್ಥಳಕ್ಕೆ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ, ವೃತ್ತ ನಿರೀಕ್ಷಕರು, ಡಿವೈಎಸ್ಪಿ, ಜಯಪುರ ಠಾಣೆಯ ಎಸ್.ಐ. ಹಾಗೂ ಸಿಬ್ಬಂದಿಗಳು ಮತ್ತು ಬೆರಳಚ್ಚು ತಜ್ಞರು, ಶ್ವಾನದಳ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ

ದರೋಡೆಗೊಳಗಾದ ಗುಡ್ಡೇತೋಟ ಸಣ್ಣಮನೆ ಕೃಷಿಕ ವಿಜಯರಾಘವರ ಮನೆ.



ಕಾರ್ ಗಳ ನಡುವೆ ಮುಖಾಮುಖಿ ಡಿಕ್ಕಿ ಇಬ್ಬರ ದಾರುಣ ಸಾವು

ಕೊಪ್ಪ: ಇಲ್ಲಿಗೆ ಸಮೀಪದ ಕುದುರೆಗುಂಡಿ ಗ್ರಾಮದ ತಲಮಕ್ಕಿಯ ಕೈರಾಲಿ ಹೋಟೆಲ್ ಮುಂಭಾಗ ರಾತ್ರಿ 9.30ರ ಸುಮಾರಿಗೆ ಶಿವಮೊಗ್ಗದಿಂದ ಕೊಪ್ಪಕ್ಕೆ ಬರುತ್ತಿದ್ದ ಕ್ವಿಡ್ ಕಾರ್ ಗೆ ಕೊಪ್ಪ ಕಡೆಯಿಂದ ಶಿವಮೊಗ್ಗ ಹಾದಿಯಲ್ಲಿ ಹೋಗುತ್ತಿದ್ದ ಇನ್ನೋವಾ ಕಾರ್ ಗಳ ನಡುವೆ ಪರಸ್ಪರ ಡಿಕ್ಕಿ ಹೊಡೆದಿದೆ.‌ ಡಿಕ್ಕಿ ಹೊಡೆದ ರಭಸಕ್ಕೆ ಒಬ್ಬರು ಸ್ಥಳದಲ್ಲೇ ಮೃತಪಟ್ಟರೆ.ಮತ್ತೊಬ್ಬರು ಆಸ್ಪತ್ರೆಯಲ್ಲಿ ಕೊನೆಯಸಿರೆಳೆದಿದ್ದಾರೆ.ಮೃತ ಪಟ್ಟವರು ಬಾಳಗಡಿಯ ಆರಿಫ್ ಸಾಬ್ ಮತ್ತು ನಾಸಿರ್ ಎಂದು ಗುರುತಿಸಲಾಗಿದೆ. ಆರಿಫ್ ಸಾಬ್ ಮತ್ತು ನಾಸಿರ್ ಕ್ವಿಡ್ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು ಎಂದು ತಿಳಿದು ಬಂದಿದೆ.ಇನ್ನೋವಾ ಕಾರಿನ ಚಾಲಕನಿಗೆ ಗಂಭೀರ ಗಾಯಗಳಾಗಿದ್ದು. ಕೊಪ್ಪದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.ಅಪಘಾತ ಸ್ಥಳಕ್ಕೆ ಪೊಲೀಸರು ಭೇಟಿನೀಡಿದ್ದು, ಈ ಸಂಬಂಧ ಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ .ಮೃತ ದೇಹಗಳನ್ನು ಕೊಪ್ಪದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ.

ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿಯಲ್ಲಿ ಯಡಿಯೂರಪ್ಪ ಭಾಗಿ


 ಬಾಳೆಹೊನ್ನೂರಿನ ರಂಭಾಪುರೀ ಪೀಠದಲ್ಲಿ ನಡೆದ ಶ್ರೀ ಜಗದ್ಗುರು ರೇಣುಕಾಚಾರ್ಯ ಜಯಂತಿ ಯುಗಮಾನೋತ್ಸವ ಹಾಗೂ ಕ್ಷೇತ್ರನಾಥ ಶ್ರೀ ವೀರಭದ್ರಸ್ವಾಮಿ ಮಹಾರಥೋತ್ಸವ ಕಾರ್ಯಕ್ರಮದಲ್ಲಿ  ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್. ಯಡಿಯೂರಪ್ಪ,ರಾಜ್ಯದ ಗೃಹ ಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು, ಸಂಸದೆ ಶೋಭಾ ಕರಂದ್ಲಾಜೆ, ಸಚಿವ ಸಿ.ಟಿ.ರವಿ  ಕೇಂದ್ರ ಸಚಿವರಾದ ಶ್ರೀ ಸುರೇಶ್ ಅಂಗಡಿಯವರು, ಜಿಲ್ಲಾಧಿಕಾರಿಗಳಾದ ಡಾ. ಬಗಾದಿ ಗೌತಮ್ ಮತ್ತಿತರು ಉಪಸ್ಥಿತರಿದ್ದರು.



Thursday, March 5, 2020

ಕಾಂಗ್ರೆಸ್ ಮುಖಂಡನ ಮನೆಯಲ್ಲಿ ಅಕ್ರಮ ಶಸ್ತ್ರಾಸ್ತ್ರ

ಚಿಕ್ಕಮಗಳೂರಿನ ಸಮೀಪ ಆನೆದಂತ ಮಾರಾಟದ ಪ್ರಮುಖ ಆರೋಪಿ ಕಾಂಗ್ರೆಸ್‍ನ ಐ.ಟಿ.ಸೆಲ್‍ನ ಪ್ರಮುಖ ಶಬರೀಶ್ ಅವರನ್ನು ಪೋಲಿಸರು ಬಂಧಿಸಿದ ಹಿನ್ನೆಲೆಯಲ್ಲಿ ಶನಿವಾರ ಅರಣ್ಯ ಇಲಾಖೆಯ ಅಧಿಕಾರಿಗಳು ಅವರ ನಿವಾಸಕ್ಕೆ ದಾಳಿ ಮಾಡಿ ಶಬರೀಶ್ ಅವರ ತಂದೆ ರಮೇಶ್ ಹಾಗೂ ಮತ್ತೊಬ್ಬ ಆರೋಪಿ ಯೋಗೀಶ್ ಅವರ ಸಹೋದರ ರಾಜು ಅವರನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಲಾಯಿತು.ಅವರು ನೀಡಿದ ಮಾಹಿತಿಯಂತೆ ಆರೋಪಿಗಳನ್ನು ಮತ್ತೆ ಶಬರೀಶ್ ಮನೆಗೆ ಕರೆದೊಯ್ಯಲಾಯಿತು.ಅವರ ಮನೆಯಿಂದ 300ಮೀ ದೂರದ ಸರಕಾರಿ ಜಾಗದಲ್ಲಿ ಆಮೆ ಪತ್ತೆಯಾಗಿತ್ತು.
ಸಾರ್ವಜನಿಕರು ನೀಡಿದ ಮಾಹಿತಿಯಂತೆ ಮತ್ತೆ ಆತನ ಮನೆಗೆ ತೆರಳಿದ ಅರಣ್ಯ ಇಲಾಖೆಯ ಸಿಬ್ಬಂದಿ ಅವರು ನಕ್ಷತ್ರ ಆಮೆ,ಏರ್‍ಗನ್,ಏರ್ ಪಿಸ್ತೂಲ್,ಗುಂಡುಗಳು,ಜಿಲೆಟಿನ್ ಕಡ್ಡಿ,ತೋಟದ ಗಂಧಕ ಹಾಗೂ ಬತ್ತಿ,ಎರಡು ಕೆ.ಜಿ ಗಂಧ ಮತ್ತು ಸಂಬಂಧಪಟ್ಟ ಇನ್ನಿತರ ಪರಿಕರಗಳು ಪತ್ತೆಯಾಗಿದೆ.ಪ್ರಥಮ ಆರೋಪಿ ಶಬರೀಶ ಎಂದು ಇಲಾಖೆಯವರು ಪ್ರಕರಣದಲ್ಲಿ ದಾಖಲಿಸಿಕೊಂಡಿದ್ದಾರೆ.ಏರ್‍ಗನ್ ಮತ್ತು ಏರ್ ಪಿಸ್ತೂಲು,ಮದ್ದುಗುಂಡು ಪರಿಕರಗಳನ್ನು ಪೋಲಿಸ್ ಇಲಾಖೆಗೆ ಹಸ್ತಾಂತರಿಸಲಾಗಿದೆ. ಆರೋಪಿಗಳ ಪ್ರಕರಣ ದಾಖಲಿಸಿ ನ್ಯಾಯಾಲಯದಲ್ಲಿ ಹಾಜಾರು ಪಡಿಸಿದರು.
ಸುದ್ಧಿಗಾರರ ಜೊತೆ ಮಾತನಾಡಿದ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಂಬ್ಲೂರು ರಾಮಕೃಷ್ಣ ಮಾತನಾಡಿ "ಈ ಪ್ರಕರಣವನ್ನು ಕಂಡಾಗ ಕ್ಷೇತ್ರದಲ್ಲಿ ಮುಂದಿನ ದಿನಗಳಲ್ಲಿ ಭಯದ ವಾತಾವರಣ ಸೃಷ್ಟಿಯಾಗುವ ಎಲ್ಲಾ ಲಕ್ಷಣಗಳು ಕಂಡು ಬರುತ್ತಿದೆ.ಅಕ್ರಮವಾಗಿ ಮನೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತನು ಶಸ್ತ್ರಾಸ್ತ್ರವನ್ನು ಸಂಗ್ರಹಿಸಿ ಇಟ್ಟ ಬಗ್ಗೆ ಶಾಸಕ ಟಿ.ಡಿ.ರಾಜೇಗೌಡರು ಸಾರ್ವಜನಿಕರಿಗೆ ಉತ್ತರ ನೀಡಬೇಕು.ಈ ಕೃತ್ಯವನ್ನು ಅರಣ್ಯ ಹಾಗೂ ಪೋಲಿಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ ಸೂಕ್ತವಾದ ಕ್ರಮ ತೆಗೆದುಕೊಳ್ಳಬೇಕು ಎಂದರು.

ಈ ಕಾರ್ಯಚರಣೆಯಲ್ಲಿ ಎಸಿಎಫ್ ಸತೀಶ್,ವಲಯಾರಣ್ಯಾಧಿಕಾರಿ ಸಂಪತ್ ಪಟೇಲ್, ನಗರವ್ಯಾಪ್ತಿಯ ಅರಣ್ಯ ವನಪಾಲಕರಾದ ರಘು,ಗಿರೀಶ್, ಅರಣ್ಯ ರಕ್ಷಕರಾದ ಆಶೋಕ್,ದೀಪಾ ಮತ್ತುಸಿಬ್ಬಂದಿಗಳಾದ ಪ್ರಕಾಶ್ ಮುಂತಾದವರು ತನಿಖೆಯಲ್ಲಿ ಭಾಗಿಯಾಗಿದ್ದರು.ಅರಣ್ಯ ಇಲಾಖೆ ಮಾಡಿದ ಕ್ಷಿಪ್ರ ತನಿಖೆಯ ಬಗ್ಗೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಕರ್ತವ್ಯಲೋಪ ಡಿಹೆಚ್ಓ ಅಮಾನತು.

ಚಿಕ್ಕಮಗಳೂರು: ಸರ್ಕಾರದ ಆದೇಶಗಳನ್ನು ಉಲ್ಲಂಘಿಸಿ, ಕರ್ತವ್ಯ ಲೋಪ ಹಿನ್ನೆಲೆಯಲ್ಲಿ ಡಿಹೆಚ್ಓ ಡಾ.ಪ್ರಭು ಅವರನ್ನು ಅಮಾನತುಗೊಳಿಸಿ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತ ಪಂಕಜ್ ಕುಮಾರ್ ಆದೇಶವನ್ನು ಹೊರಡಿಸಿದ್ದಾರೆ.

ಚಿಕ್ಕಮಗಳೂರು ಜಿಲ್ಲಾ ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳಿಗೆ ಸರ್ಕಾರದ ಆದೇಶಾನುಸಾರ ಆಯ್ಕೆಯಾದ ಅಭ್ಯರ್ಥಿಗಳನ್ನು ಕೌನ್ಸಿಲಿಂಗ್ ಮೂಲಕ ನಿಯುಕ್ತಗೊಳಿಸದೆ ಆದೇಶವನ್ನು ಉಲ್ಲಂಘಿಸಿದ ಬಗ್ಗೆ ಸಾರ್ವಜನಿಕರ ದೂರು ಬಂದಿದ್ದು, ಡಿಹೆಚ್ಓ ರವರ ಕರ್ತವ್ಯ ಲೋಪ ದೃಢಪಟ್ಟ ಹಿನ್ನೆಲೆ ಅಮಾನತು ಆದೇಶ ಹೊರಡಿಸಲಾಗಿದೆ. ಪ್ರಭಾರವಾಗಿ ಡಾ.ಭರತ್ ರವರನ್ನು ತಕ್ಷಣ ಚಾರ್ಜ್ ತೆಗೆದುಕೊಳ್ಳಲು ಆದೇಶಿಸಿದೆ.

ರಾಜ್ಯ ಬಜೆಟ್ 2020