Friday, March 27, 2020

ಕಳಸದ ಪಾಂಡವ ಉಪ್ಪರಿಗೆಯಲ್ಲಿದೆ ಬೃಹತ್ ಶಿಲಾ ಸಂಸ್ಕೃತಿಯ ನೆಲೆ





ಚಿಕ್ಕಮಗಳೂರು ಜಿಲ್ಲೆಗೆ ಹೊಸದಾಗಿ ಸೇರ್ಪಡೆಯಾದ ಕಳಸ ತಾಲೂಕು ಹಚ್ಚ ಹಸಿರಿನ ಪ್ರಕೃತಿಯೊಂದಿಗೆ ಐತಿಹಾಸಿಕವಾಗಿ ಮತ್ತು ಸಾಂಸ್ಕೃತಿಕವಾಗಿ ಶ್ರೀಮಂತವಾಗಿದೆ. ಕ್ರಿ. ಶ. 1154 ರಿಂದ 18ನೇ ಶತಮಾನದವರೆಗೂ ಅನೇಕ ರಾಜಮನೆತನಗಳ ಆಳ್ವಿಕೆಗೆ ಒಳಪಟ್ಟಿತ್ತು ಎಂಬುದಕ್ಕೆ ಇಲ್ಲಿ ದೊರೆತಿರುವ ಹಲವು ಶಾಸನ ಮತ್ತು ಸ್ಮಾರಕಗಳು ಪ್ರಮುಖ ಆಕರಗಳಾಗಿವೆ. ಹೊಂಬುಜದ ಸಾಂತರಸರು, ಕಳಸ-ಕಾರ್ಕಳ ಭೈರರಸರು, ವಿಜಯನಗರ ಅರಸರು, ಕೆಳದಿ ಅರಸರು, ಮೈಸೂರು ಒಡೆಯರು ಇಲ್ಲಿ ಆಳ್ವಿಕೆ ನಡೆಸಿದ ಪ್ರಮುಖ ರಾಜಮನೆತನಗಳು.

 “ಇತಿಹಾಸ ಮರೆತವನು ಇತಿಹಾಸವನ್ನು ಸೃಷ್ಟಿಸಲಾರರು” ಎಂಬ ಅಂಬೇಡ್ಕರ್ ಅವರ ಮಾತಿನಂತೆ ಸ್ಥಳ, ವ್ಯಕ್ತಿ, ವಸ್ತು ಎಲ್ಲಾ ವಿಷಯಕ್ಕೂ ತನ್ನದೇಯಾದ ಇತಿಹಾಸವಿರುತ್ತದೆ. ಇದನ್ನು ಮರೆತರೆ ಯಾವುದೇ ಕ್ಷೇತ್ರಕ್ಕೂ ಮಹತ್ವವಿರುವುದಿಲ್ಲ. ದೇಶದ ಇತಿಹಾಸದೊಂದಿಗೆ ಆಯಾ ಊರಿನ ಸ್ಥಳೀಯ ಚರಿತ್ರೆಯು ಮುಖ್ಯವಾಗಿದ್ದು, ಅವುಗಳ ಅಧ್ಯಯನ ಅಗತ್ಯ. ಆದರೆ ಅನೇಕ ಸಂದರ್ಭದಲ್ಲಿ ಸ್ಥಳೀಯ ಚರಿತ್ರೆಗಳ ಅಧ್ಯಯನ ನಿಲ್ರ್ಯಕ್ಷಕ್ಕೆ ಒಳಗಾಗಿವೆ. ಭಾರತದ ಇತಿಹಾಸದ ಪತದಲ್ಲಿ ಮೌರ್ಯ, ಶಾತವಾಹನ, ಚೋಳ, ಚೇರ, ಚಾಲುಕ್ಯ, ಪಲ್ಲವ, ಕದಂಬ, ಕಾಕತೀಯ, ಹೊಯ್ಸಳ, ವಿಜಯನಗರ ಅರಸುಮನೆತನಗಳು ಪ್ರಮುಖ ಸ್ಥಾನದಲ್ಲಿದ್ದು, ಇವುಗಳ ಇತಿಹಾಸದ ಕುರಿತು ಪ್ರಾಥಮಿಕ ಶಿಕ್ಷಣದಿಂದಲೂ ತಿಳಿದುಕೊಂಡಿರುತ್ತೇವೆ. ಆದರೆ ನಮ್ಮ ಊರಿನ ಇತಿಹಾಸವನ್ನೇ ಮರೆತಿರುತ್ತೇವೆ. ದೇಶದ ಇತಿಹಾಸದ ಜೊತೆಯಲ್ಲೇ ಸ್ಥಳೀಯ ಚರಿತ್ರೆಯ ಕುರಿತು ತಿಳುವಳಿಕೆ ಅತ್ಯಗತ್ಯ. ಸ್ಥಳೀಯವಾಗಿಯೇ ಕೆಲವೊಂದು ರಾಜಮನೆತನವಾಗಲೀ, ಪಾಳೆಗಾರರಾಗಲೀ ತಮ್ಮ ಗಡಿಯನ್ನು ರಕ್ಷಿಸುವ ಹೊಣೆಯೊಂದಿಗೆ ಹೋರಾಡುತ್ತಿರುತ್ತಾರೆ.

ವಲೆನಾಡಿನ ಕಾನನಗಳ ನಡುವೆ ಇರುವ ಚಿಕ್ಕಮಗಳೂರು ಜಿಲ್ಲೆಯ ಕಳಸವು ಕೂಡ ಸ್ಥಳೀಯ ಅರಸು ಮನೆತನವಾದ ಕಳಸ-ಕಾರ್ಕಳ ಭೈರರಸರ ಆಳ್ವಿಕೆಗೆ ಒಳಪಟ್ಟಿತ್ತು ಎಂಬುದಕ್ಕೆ ಅವರ ಆಳ್ವಿಕೆಗೆ ಸಂಬಂಧ ಪಟ್ಟಿರುವ ಶಾಸನಗಳು ಸಾಕ್ಷಿಯಾಗಿವೆ. ಈ ಎಲ್ಲಾ ಐತಿಹಾಸಿಕ ಸ್ಮಾರಕಗಳು ಒಂದು ಊರಿನ ಕಾಲಮಾನವನ್ನು ಇನ್ನಷ್ಟು ಹಿಂದಕ್ಕೆ ಕರೆದೊಯ್ಯುತ್ತವೆ. ಕಳಸದಲ್ಲಿ ದೊರೆತಿರುವ ಇತಿಹಾಸ ಕಾಲಕ್ಕೆ ಸಂಬಂಧಿಸಿದ ಪ್ರಾಥಮಿಕ ಆಕರಗಳನ್ನು ಗಮನಿಸಿದಾಗ ಕ್ರಿ. ಶ. 11 ಮತ್ತು 12ನೇ ಶತಮಾನದಿಂದ ಇಲ್ಲಿನ ರಾಜಕೀಯ, ಸಾಂಸ್ಕೃತಿಕ, ಆರ್ಥಿಕ, ಸಾಮಾಜಿಕ ಜೀವನದ ಕುರಿತು ಮಾಹಿತಿ ದೊರೆಯುತ್ತದೆ. ಇದರ ಜೊತೆಯಲ್ಲಿ ಕಳಸ ಪರಿಸರದ ಇತಿಹಾಸವನ್ನು ಕ್ರಿ. ಪೂರ್ವಕ್ಕೆ ಕರೆದೊಯ್ಯುವ ಬೃಹತ್ ಶಿಲಾಯುಗ ಸಂಸ್ಕೃತಿ ನೆಲೆಯೊಂದು ಕ್ಷೇತ್ರಕಾರ್ಯ ಸಂದರ್ಭದಲ್ಲಿ ದೊರೆತಿವೆ.
ಬೃಹತ್ ಶಿಲಾಯುಗ ಸಂಸ್ಕೃತಿ ಯುಗವೆಂದರೆ, ಈ ಸಂಸ್ಕøತಿಗೆ ಸೇರಿದ ಜನರು ವಿವಿಧ ಮಾಧರಿಯ ಶಿಲಾ ಗೋರಿಗಳನ್ನು ನಿರ್ಮಿಸುತ್ತಿದ್ದರಿಂದ ಈ ಸಂಸ್ಕೃತಿಯನ್ನು ಬೃಹತ್ ಶಿಲಾ ಸಂಸ್ಕೃತಿ ಎಂದು ಕರೆಯಲಾಗಿದೆ. ಶಿಲಾ ಸಮಾಧಿಗಳು ಅಂದಿನ ಜನರ ಪಾರಂಪರಿಕ ನಂಬಿಕೆಗಳ ತಳಹಾದಿಯ ಮೇಲೆ ರೂಪಿತವಾದವುಗಳಾಗಿವೆ.. ಕ್ರಿ. ಪೂರ್ವದಿಂದಲೇ ವ್ಯಕ್ತಿಯು ಸತ್ತ ನಂತರ ಸ್ವರ್ಗ, ನರಕಕ್ಕೆ ಹೋಗುತ್ತಾನೆ ಎಂಬ ಕಲ್ಪನೆಯೊಂದಿಗೆ ದೊಡ್ಡ-ದೊಡ್ಡಕಲ್ಲುಗಳ ಮೂಲಕ ಸಮಾಧಿಗಳನ್ನು ಮಾಡುವ ಜೊತೆಯಲ್ಲಿ ಸಮಾಧಿಯೊಂದಿಗೆ ವ್ಯಕ್ತಿಯು ಬಳಸುತ್ತಿದ್ದ ವಸ್ತಗಳನ್ನು ಇಡುತ್ತಿದ್ದರು. ಇಂತಹ ಸಮಾಧಿಗಳು ಜಗತ್ತಿನಾದ್ಯಂತ ದೊರೆತಿದ್ದು, ಇವುಗಳ ಉತ್ಖನನದಿಂದ ಸಮಾಧಿಗಳ ಕಲ್ಪನೆಗೆ ಖಚಿತ ಮಾಹಿತಿಯನ್ನೊದಗಿಸಿದೆ. ಬೃಹತ್ ಶಿಲಾಯುಗಕ್ಕೆ ಸಂಬಂದಿಸಿದಂತೆ ಅನೇಕ ಮಾದರಿಯ ಸಮಾಧಿಗಳಿವೆ. ಅವುಗಳ ರಚನೆಯ ಆಧಾರದ ಮೇಲೆ ವಿಂಗಡಿಸಲಾಗಿದೆ, ಅವುಗಳೆಂದರೆ ಹಾದಿಕೋಣೆ, ಕಿಂಡಿಕೋಣೆ, ಆಯತಾಕಾರದ ಅಂತರ್ಗತ ಶವ ಪೆಟ್ಟಿಗೆ, ಕಲ್ಗುಪ್ಪೆ, ಕುಣಿ ದಫನ ದಿನ್ನೆ, ಅಸ್ತಿ ಪಾತ್ರೆ ದಫನ, ಕೊಡೆಕಲ್, ಟೋಪಿಕಲ್, ದಫನ ದಿನ್ನೆ, ನಿಲುಸುಗಲ್ಲು.

ಈ ಸಂಸ್ಕೃತಿ ಯ ಕಾಲಮಾನವು ಉತ್ತರ ಕರ್ನಾಟಕದಲ್ಲಿ ಕ್ರಿ. ಪೂ. 1200-100ರ ಸುಮಾರಿಗೆ ಆರಂಭವಾಗಿ ಕ್ರಿ. ಪೂ. 3-2ನೇ ಶತಮಾನದವರೆಗೆ ಪ್ರವರ್ಧಮಾನದಲ್ಲಿ ಇತ್ತೆಂದು ತಿಳಿಯುತ್ತದೆ. ದಕ್ಷಿಣ ಕರ್ನಾಟಕದಲ್ಲಿ ಈ ಸಂಸ್ಕøತಿಯು ಕ್ರಿ. ಪೂ. 1200-25ರ ವರೆಗೆ ಪ್ರವರ್ದಮಾನಕ್ಕೆ ಬಂದಿದ್ದು, ಕಬ್ಬಿಣವನ್ನು ಬಳಸಿಕೊಂಡು ದೊಡ್ಡ-ದೊಡ್ಡ ಬಂಡೆಗಳನ್ನು ಸೀಳಿ ಶವಸಂಸ್ಕಾರಕ್ಕೆ ಬಳಸಿಕೊಂಡಿರುವ ಸಂಗತಿ ತಿಳಿದು ಬರುತ್ತದೆ.ಅ. ಸುಂದರ ಅವರು 1975ರಲ್ಲಿ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಕ್ಷೇತ್ರಕಾರ್ಯ ಶೋಧನೆ ನಡೆಸಿದ್ದಾರೆ. ಸರ್ ಮಾರ್ಟಿಮರ್ ವೀಲ್ಹರ್ ಅವರು ಕ್ರಿ. ಶ. 1947ರಲ್ಲಿ ಚಿತ್ರದುರ್ಗ ಜಿಲ್ಲೆಯ ಬ್ರಹ್ಮಗಿರಿಯಲ್ಲಿ ಬೃಹತ್ ಶಿಲಾಯುಗದ ಸಮಾಧಿಯ ಉತ್ಖನನ ಮಾಡಿದ್ದಾರೆ. ಕರ್ನಾಟಕದ ಅನೇಕ ಭಾಗಗಳಲ್ಲಿ ವಿವಿಧ ಮಾದರಿಯ ಬಗ್ಗೆ ಅಧ್ಯಯನವಾಗಿದೆ. ಆದರೆ ಮಲೆನಾಡು ಭಾಗದಲ್ಲಿ ಇವುಗಳ ಅಧ್ಯಯನದ ಕೊರೆತೆಯನ್ನು ಕಾಣಬಹುದು ಕಾರಣ ಅತಿ ಹೆಚ್ಚು ಮಳೆ ಮತ್ತು ಅರಣ್ಯ ಪ್ರದೇಶವು ಏತ್ತೇಚ್ಚವಾಗಿರುವುದು. ಇಂತಹ ಮಲೆನಾಡು ಪ್ರದೇಶವಾಗಿರುವ ಕಳಸದ ಪಾಂಡವರ ಉಪ್ಪರಿಗೆಯಲ್ಲಿ ಬೃಹತ್ ಶಿಲಾಯುಗ ಸಂಸ್ಕೃತಿಗೆ ಸೇರಿದ ಕೊಡೆಕಲ್, ನಿಲುಸುಗಲ್ಲು, ಕಂಡಿಕೋಣೆ ಮಾದರಿಯ ಸಮಾಧಿಗಳು ಮತ್ತು ಕಲ್ಗುಳಿಗಳು ದೊರೆತಿರುವುದು ವಿಶೇಷವೆನಿಸಿದೆ.  ಮೂಡಿಗೆರೆ ತಾಲೂಕಿನಲ್ಲಿ ಕಗ್ಗನಹಳ್ಳ, ಬಣಕಲ್ ಮತ್ತು ಕೊಟ್ಟಿಗೆಹಾರದಲ್ಲಿ ಪ್ರಾಗೀತಿಹಾಸ ಕಾಲಕ್ಕೆ ಸಂಬಂಧಿಸಿದ ನೆಲೆಗಳು ದೊರೆತಿದ್ದು ಇವುಗಳನ್ನು ಕೆ. ಪಿ. ಪೊಣಚ್ಚ ಅವರ ಮಹಾಪ್ರಬಂಧವಾದ ಆಕ್ರ್ಯಿಯಾಲಜಿ ಆಫ್ ಕರ್ನಾಟಕ(ಪ್ರಿ ಆಂಡ್ ಪೋಸ್ಟ್ ಹಿಸ್ಟರಿ ಆಫ್ ಸೌತ್ ವೆಸ್ಟರ್ನ ರಿಜಿಯನ್) ಮತ್ತು ಆರ್. ಬಿ. ಫೂಟ್ ಅವರ ಇಂಡಿಯನ್ ಪ್ರೀ ಹಿಸ್ಟಾರಿಕ್ ಆಂಡ್ ಪ್ರೋಟೋ ಹಿಸ್ಟಾರಿಕ್ ಆಂಟಿಕ್ಯುಟೀಸ್‍ನಲ್ಲಿ ಪ್ರಕಟಿಸಿದ್ದಾರೆ.

ಪ್ರೊ. ಅ. ಸುಂದರ ಅವರ ಉಪನ್ಯಾಸ ಸಂದರ್ಭದಲ್ಲಿ ಪಾಂಡವರ ಮನೆ, ಪಾಂಡವರ ದಿಬ್ಬ, ಮೊರೆಯರ ಮನೆ, ಕಲ್ಮನೆ ಇಂತಹ ಹೆಸರುಗಳುಳ್ಳ ಪ್ರದೇಶದಲ್ಲಿ ಹೆಚ್ಚಿನದಾಗಿ ಬೃಹತ್ ಶಿಲಾಸಂಸ್ಕøತಿಯ ನೆಲೆಗಳು ದೊರೆತಿವೆ ಎಂಬುದನ್ನು ಈಗಾಗಲೇ ದೊರೆತಿರುವ ನೆಲೆಗಳನ್ನು ಉದಾಹರಣೆ ನೀಡುವ ಮೂಲಕ ವಿವರಿಸುವಾಗ ನೆನಪಾಗಿದ್ದು, ಕಳಸದಿಂದ ಸುಮಾರು 9 ಕಿ. ಮೀ. ದೂರದಲ್ಲಿರುವ ಪಾಂಡವರ ಉಪ್ಪರಿಗೆ. ಈ ಸ್ಥಳದಲ್ಲಿ ಐದು ಗುಹೆಗಳಿದ್ದು, ಸ್ಥಳೀಯರು ಇಲ್ಲಿ ಪಾಂಡವರು ವಾಸವಾಗಿದ್ದರು ಎಂಬ ನಂಬಿಕೆಯನ್ನು ಹೊಂದಿದ್ದಾರೆ. ಈ ಕೂತುಹಲದಿಂದ ಸ್ಥಳಕ್ಕೆ ಕ್ಷೇತ್ರಕಾರ್ಯಗೊಂಡಾಗ ಮೂರು ಮಾದರಿಯ ಸಮಾಧಿಗಳು ದೊರೆತ್ತಿದ್ದು, ಇವು ಆದಿಮಾನವನ ಚಟುವಟಿಕೆಗೆ ಒಳಪಟ್ಟ ಪ್ರದೇಶವೆಂದು ತಿಳಿದುಬರುತ್ತದೆ.

ಕೊಡೆಕಲ್ ಸಮಾಧಿ: 
ದಕ್ಷಿಣ ಭಾರತದ ಎಲ್ಲೆಡೆ ವೈವಿಧ್ಯಮಯವಾದ ಬೃಹತ್ ಶಿಲಾಯುಗದ ಸಮಾಧಿಗಳು ಕಂಡುಬರುತ್ತವೆ. ಕರ್ನಾಟಕದಲ್ಲಿಯೂ ಸಹ ಅಸಂಖ್ಯಾತ ಮಾದರಿಯ ಬೃಹತ್ ಶಿಲಾಯುಗ ಸಮಾಧಿಗಳು ಕಂಡುಬಂದಿವೆ. ಆದರೆ, ಕೇರಳ ರಾಜ್ಯದಲ್ಲಿ ಕೆಲವು ವಿಶಿಷ್ಟ ಮಾದರಿಯ ಸಮಾಧಿಗಳು ಕಂಡು ಬಂದಿದ್ದು, ಅವುಗಳನ್ನು ಟೋಪಿಕಲ್ಲು ಸಮಾಧಿ, ಕೊಡೆಕಲ್ ಸಮಾಧಿಗಳೆಂದು ಕರೆಯಲಾಗುತ್ತದೆ. ಕಳಸದ ಪಾಂಡವರ ಉಪ್ಪರಿಗೆಯಲ್ಲಿ ದೊಡ್ಡ ಶಿಲಾವೃತ್ತದ ನಡುವೆ ಕೊಡೆ ಆಕಾರದ ಬೃಹತ್ ಶಿಲೆಯನ್ನು ಇರಿಸಲಾಗಿದೆ. ಕಳಸದಲ್ಲಿ ಕಂಡು ಬಂದ ಕೊಡೆಕಲ್ ಸಮಾಧಿಯು ಕರ್ನಾಟಕದಲ್ಲಿ ಕಂಡು ಬಂದ ಹೊಸ ಮಾದರಿಯ ಸಮಾಧಿಯಾಗಿದೆ. ಕೇವಲ ಕೇರಳಕ್ಕೆ ಸೀಮಿತವಾದ ಮಾದರಿಯೆಂದು ಭಾವಿಸಲಾಗಿದ್ದ ಕೊಡೆಕಲ್ ಮಾದರಿ ಸಮಾಧಿ ಅಧ್ಯಯನ ಪ್ರದೇಶವಾದ ಕಳಸದಲ್ಲಿಯೂ ಪತ್ತೆಯಾಗಿದೆ.
ಕ್ಷೇತ್ರ ಅಧ್ಯಯನದಲ್ಲಿ ಎರಡು ಕೊಡೆಕಲ್ ಸಮಾಧಿಗಳು ಪತ್ತೆಯಾಗಿದ್ದು, ಒಂದು ಸಮಾಧಿಯಿಂದ ಇನ್ನೊಂದು ಸಮಾಧಿಗೆ ಸುಮಾರು 0.5 ಕಿ.ಮೀ ಅಂತರವಿದೆ. ಇದರಲ್ಲಿ ಒಂದು ಸಮಾಧಿಯು ಟೋಪಿಯಾಕಾರದಲ್ಲಿದ್ದು, ನೆಲಕ್ಕೆ ಸಮವಾಗಿದೆ. ಇನ್ನೊಂದು ಸಮಾಧಿಯನ್ನು ಎರಡು ಹಾಸುಗಲ್ಲಿನ ಮೇಲೆ ಕೊಡೆಯಾಕಾರದಲ್ಲಿ ನಿಲ್ಲಿಸಲಾಗಿದೆ. ಈ ನೆಲೆಗೆ ಸಂಬಂಧಿಸಿದಂತೆ Joanna Sudyaka “The megalithic iron age culture in south india some general remarks ಲೇಖನವನ್ನು ಗಮನಿಸಿದಾಗ ದಕ್ಷಿಣ ಭಾರತದಲ್ಲಿ ದೊರೆಯುವ ಬೃಹತ್ ಶಿಲಾಯುಗ ಸಂಸ್ಕೃತಿಯ ಸಮಾಧಿಗಳ ಕುರಿತು ಚರ್ಚಿಸಿದ್ದಾರೆ. ಇದರಲ್ಲಿ ಕೊಡೆಕಲ್, ಟೋಪಿಕಲ್‍ಗಳನ್ನು ವಿವರಿಸುವಾಗ ಹ್ಯಾಟ್, ಕ್ಯಾಪ್, ಹುಡ್‍ಸ್ಟೋನ್ ಮಾದರಿಗಳೆಲ್ಲವು ಒಂದೇ ಮಾದರಿಯವೆಂದು ತಿಳಿಸಿದ್ದಾರೆ. ಟೋಪಿಕಲ್ ಮಾದರಿ ಸಮಾಧಿ ಎಂದರೆ ಲಂಬವಾಗಿ ಇಟ್ಟಿರುವ ಮೂರು ಕಲ್ಲುಗಳ ಮೇಲೆ ಟೋಪಿಯಾಕಾರದ ಕಲ್ಲನ್ನು ಇಡುವುದು. ಹಾಗೆಯೇ ಅರ್ಧಾಕಾರದ ಕಲ್ಲನ್ನು ನೆಲದ ಮಟ್ಟಕಿಡುವುದನ್ನು ಟೋಪಿಕಲ್ಲು ಅಥವಾ ‘ಹುಡ್‍ಸ್ಟೋನ್’ಎಂದು ಕರೆಯುತ್ತಾರೆ ಎಂದು ಲೇಖನದಲ್ಲಿ ಸ್ಪಷ್ಟಪಡಿಸಿದ್ದಾರೆ. B. K. Gururaj Rao ಅವರ ‘Megalithic Culture in South India ಕೃತಿಯಲ್ಲಿ ಕೊಡೆಕಲ್ಲು, ಹುಡ್‍ಸ್ಟೋನ್‍ಗಳ ಕುರಿತು ಹೇಳುವಾಗ ಎರಡು ಒಂದೇ ಮಾದರಿಯವೆಂದು ತಿಳಿಸಿದ್ದಾರೆ. ಇಂತಹ ಸಮಾಧಿಗಳು ಕೊಚ್ಚಿನ್, ಮಲ್ಬಾರ್, ಪಶ್ಚಿಮ ಘಟ್ಟ, ಕೊಯಮುತ್ತೂರ್, ನೊಯರ್ ನದಿ ಕಣಿವೆ ಪ್ರದೇಶ ಹಾಗೂ ಕೇರಳದಲ್ಲಿ ಹೇರಳವಾಗಿ ದೊರೆಯುತ್ತದೆ ಎಂಬುದಾಗಿ ತಿಳಿಸಿದ್ದಾರೆ. ಈ ಪ್ರಕಾರದ ಶಿಲಾ ಸಮಾಧಿಗಳು ಕರ್ನಾಟಕದಲ್ಲಿ ಅಪರೂಪವಾಗಿದ್ದು, ಕಳಸದ ಪಾಂಡವರ ಉಪ್ಪರಿಗೆಯಲ್ಲಿ ಕಂಡು ಬಂದಿರುವುದು ವಿಶೇಷವೆನಿಸಿದೆ.

ನಿಲುಸುಗಲ್ಲು ಸಮಾಧಿ:
ಕರ್ನಾಟಕದಾದ್ಯಂತ ಬಹಳ ಜನಪ್ರಿಯವಾಗಿ ಕಂಡುಬರುವ ಬೃಹತ್ ಶಿಲಾಯುಗದ ಸಮಾಧಿಗಳಲ್ಲಿ ನಿಲಿಸುಗ¯್ಲು ಸಮಾಧಿ ಮಾದರಿಯು ಒಂದು. ಅ. ಸುಂದರ ಅವರು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ನಗರದ ಸಮೀಪದ ಪ್ರದೇಶ ಮತ್ತು ಬೈಸೆಗಳಲ್ಲಿ ಅನೇಕ ನಿಲುಸುಗಲ್ಲು ಸಮಾಧಿಗಳನ್ನು ಸಂಶೋಧಿಸಿದ್ದಾರೆ. ಉಡುಪಿ ಜಿಲ್ಲೆಯ ಕುರ್ಕಾಲು, ಬುದ್ದನಜೆಡ್ಡು ಹಾಗೂ ನಿಟ್ಟೂರುಗಳಲ್ಲಿ, ಹಾಸನ ಜಿಲ್ಲೆ ಅರಸಿಕೆರೆಯಲ್ಲಿ, ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಅರಶಿನಗುಪ್ಪೆಯಲ್ಲಿ ಈ ಮಾದರಿಯ ನೆಲೆಗಳು ಪತ್ತೆಯಾಗಿವೆ. ಅಧ್ಯಯನ ಪ್ರದೇಶವಾದ ಪಾಂಡವರ ಉಪ್ಪರಿಗೆಯಲ್ಲಿ ಮೊದಲ ಬಾರಿಗೆ ಎರಡು ನಿಲುಸುಗಲ್ಲು ಸಮಾಧಿಗಳು ಪತ್ತೆಯಾಗಿವೆ. ಇಲ್ಲಿನ ಎರಡು ಸಮಾಧಿಗಳಲ್ಲಿ ಭೂಮಿಗೆ ಲಂಬವಾಗಿ ಪಶ್ಚಿಮಕ್ಕೆ ವಾಲಿದಂತೆ ನಿಲ್ಲಿಸಲಾಗಿದೆ. ಈ ಕಲ್ಲುಗಳು ತ್ರಿಕೋನಾಕಾರದಲ್ಲಿ ಕಂಡು ಬರುತ್ತವೆ. ಇವುಗಳ ಎತ್ತರ ಸುಮಾರು 9 ಅಡಿ ಉದ್ದ ಮತ್ತು ತಳ ಭಾಗದಲ್ಲಿ ಸುಮಾರು 6ಅಡಿ ಅಗಲವಾಗಿದೆ.

ಕಂಡಿಕೋಣಿ ಸಮಾಧಿ:
ಇದೇ ಪ್ರದೇಶದಲ್ಲಿ ಕಲ್ಮನೆ ಅಥವಾ ಕಂಡಿಕೋಣೆ ಸಮಾಧಿ ಅಥವಾ ಡಾಲ್ಮೆನ್ ಎಂದು ಕರೆಯಲಾಗುವ ಸಮಾಧಿ ಪತ್ತೆಯಾಗಿದ್ದು, ಪ್ರಸ್ತುತ ಈ ಸಮಾಧಿಯ ಕಲ್ಲು ಚಪ್ಪಡಿಗಳು ನೆಲಕ್ಕುರುಳಿದೆ. ಒಂದು ಕಲ್ಲು ಚಪ್ಪಡಿಯ ಮಧ್ಯಭಾಗದಲ್ಲಿ ವೃತ್ತಾಕಾರದ ರಂಧ್ರವನ್ನು ಮಾಡಲಾಗಿದೆ. ಆದ್ದರಿಂದ ಈ ಚಪ್ಪಡಿಗಳು ಬಹುಶಃ ಕಲ್ಮನೆ ಮಾದರಿ ಸಮಾಧಿಯ ಅವಶೇಷಗಳಿರಬೇಕೆಂದು ಊಹಿಸಲಾಗಿದೆ.

ಕಲ್ಗುಳಿಗಳು:
ಪಾಂಡವರ ಉಪ್ಪರಿಗೆಯಲ್ಲಿ ದೊರೆತಿರುವ ಕಲ್ಗುಳಿಗಳು:
ಆಫ್ರಿಕಾ, ಉತ್ತರ ಅಮೇರಿಕಾ ರಾಷ್ಟ್ರಗಳಲ್ಲಿ ‘ಮಂಕಾಲ’ (Mancala)ಎಂದು ಕರೆಯಲ್ಪಡುವ ಆಟವು ಭಾರತದ ಅಳಿಗುಳಿ ಮನೆ ಅಥವಾ ಚನ್ನಮಣೆ ಆಟದ ಹೋಲಿಕೆಯನ್ನು ಹೋಲುತ್ತದೆ. ಮಂಕಾಲ ಆಟವನ್ನು ಏಷ್ಯಾ ಮತ್ತು ಆಫ್ರಿಕಾದಾದ್ಯಂತ 7000 ವರ್ಷಗಳ ಹಿಂದಿನಿಂದ ಆಡಿರುವ ಇತಿಹಾಸವಿದೆ. ಈ ಆಟವು ಪ್ರಪಂಚದಾದ್ಯಂತ ನೂರಾರು ಹೆಸರುಗಳು ಮತ್ತು ವಿವಿಧ ಮಾದರಿಯ ರೂಪಾಂತರಗಳಿಂದ ಬಳಕೆಯಲ್ಲಿರುವುದು ಗಮನಾರ್ಹ. ಕಲ್ಲು, ಮರ, ಜೇಡಿಮಣ್ಣಿನಿಂದ ಈ ಆಟದ ಮಣೆಗಳನ್ನು ಮಾಡುತ್ತಿದ್ದರು. ಮೂಲತಃ ಇದು ಈಜಿಪ್ಟ್ ಆಟವಾಗಿದೆ. ‘ಮಂಕಾಲ’ಎಂಬ ಪದವು ಅರೇಬಿಕ್ ಪದವಾದ ‘ನಕಲಾ’ದಿಂದ ಬಂದಿದೆ. ಅಂದರೆ ‘ಚಲಿಸು’ಎಂಬ ಅರ್ಥವನ್ನು ನೀಡುತ್ತದೆ. ಬ್ರಿಟೀಷ್ ಮ್ಯೂಸಿಯಂನಲ್ಲಿರುವ ಪ್ರಾಚೀನ ಆಟಗಳ ತಜ್ಞ ‘ಇರ್ವಿಂಗ್ ಪಿಂಕೆರ್ಲ’ಅವರು ನೀಡಿದ ಮಾಹಿತಿಯನ್ನು ಅನ್ವಯಿಸಿ ಪುರಾತತ್ವಶಾಸ್ತ್ರಜ್ಞರು ಈ ಅರ್ಥವನ್ನು ನೀಡಿದ್ದಾರೆ. ಈ ಆಟ ಆಫ್ರಿಕಾದ ರಾಷ್ಟ್ರೀಯ ಆಟವು ಆಗಿದೆ. ಇಸ್ರೇಲ್‍ನ ಗೆಡೆರಾ ನಗರದಲ್ಲಿ ಉತ್ಖನನ ಮಾಡಿದಾಗ ರೋಮನ್ ಸ್ನಾನಗೃಹದಲ್ಲಿ ಅಳಿಗುಳಿಮನೆ ಆಟದ ಪುರಾವೆಗಳು ದೊರೆತಿದ್ದು, ಇವುಗಳ ಕಾಲವನ್ನು ಕ್ರಿ. ಶ. 2 ಮತ್ತು 3ನೇ ಶತಮಾನವೆಂದು ಹೇಳಲಾಗಿದೆ. ಕ್ರಿ. ಪೂ. 6000ರ ಕಾಲಮಾನಕ್ಕೆ ಸಂಬಂಧಿಸಿದ ಆಟದ ಮನೆ ಜೋರ್ಡಾನ್ನಲ್ಲಿ ಕಂಡುಬಂದಿದ್ದು, ಪುರಾತತ್ವಶಾಸ್ತ್ರಜ್ಞರು ಇದನ್ನು ವಿಶ್ವದ ಅತ್ಯಂತ ಹಳೆಯ ಆಟ ಎಂದು ಅಭಿಪ್ರಾಯ ಪಟ್ಟಿದ್ದಾರೆ. ಮಂಕಾಲ ಆಟವು ಇಂಗ್ಲೆಂಡ್, ಸರ್ಬಿಯಾ, ಗ್ರೀಸ್ ಮತ್ತು ದಕ್ಷಿಣ ಜರ್ಮನಿಯ ವೀಕರ್ಶೀಮ್ ಕ್ಯಾನಲ್ಲಿಯು ಕಂಡುಬರುತ್ತದೆ. ಇಂತಹ ಕಲ್ಗುಳಿಗಳು ಪಾಂಡವರ ಉಪ್ಪರಿಗೆಯ ಬೃಹತ್ ಶಿಲಾಯುಗ ಸಮಾಧಿಗಳ ಆಸು ಪಾಸಿನಲ್ಲಿರುವ ನೈಸರ್ಗಿಕ ಬಂಡೆಗಳ ಮೇಲೆ ಕಂಡುಬರುತ್ತವೆ. ಅಧ್ಯಯನ ಪ್ರದೇಶದಲ್ಲಿ ಸುಮಾರು ಏಳುಕಡೆ ಕಲ್ಗುಳಿಗಳು ಕಂಡುಬಂದಿದ್ದು, ಅದರಲ್ಲಿ ಐದು ಕಲ್ಗುಳಿಗಳು ಜಾನಪದೀಯ ಅಳಿಗುಳಿ ಮನೆ ಅಥವಾ ಚೆನ್ನೆಮಣೆಯನ್ನು ಹೋಲುತ್ತವೆ. ತುಳುನಾಡಿನ ಜಾನಪದೀಯ ಆಟಗಳಲ್ಲಿ ಚೆನ್ನಮಣೆ ಆಟವು ಪ್ರಮುಖ ಆಟವಾಗಿದೆ. ತುಳು ಜಾನಪದದಲ್ಲಿ ಚೆನ್ನಮಣೆ ಸಾವಿನ ಸಂಕೇತವಾಗಿದೆ. ಇಲ್ಲಿನ ಐತಿಹ್ಯದ ಪ್ರಕಾರ ಅಕ್ಕ-ತಂಗಿಯರು ಆಟವನ್ನು ಆಡುವಾಗ ಮಣೆಯಲ್ಲಿ ಹೊಡೆದುಕೊಂಡು ಸಾಯುತ್ತಾರೆ. ಆದರಿಂದ ಅಕ್ಕ-ತಂಗಿಯರು, ಅಣ್ಣ-ತಮ್ಮಂದಿರು ಆಟವನ್ನು ಆಡಬಾರದೆಂದಿದೆ. “ಚೆನ್ನೆ”ಎಂದರೆ “ಸುಂದರ”ಎಂಬ ಅರ್ಥವನ್ನು ಹೊಂದಿದೆ. ತುಳು ನಾಡಿನಲ್ಲಿ ಈ ಆಟದ ಮಣೆಯು ಪ್ರಮುಖವಾಗಿ 14 ಕೋಣೆಗಳನ್ನು ಹೊಂದಿದ್ದು, ಇತರ ಪ್ರದೇಶಗಳಲ್ಲಿ ಅವುಗಳ ಸಂಖ್ಯೆಯಲ್ಲಿ ವ್ಯತ್ಯಾಸವನ್ನು ಕಾಣಬಹುದಾಗಿದೆ. ಕರಾವಳಿಯ ಜಾನಪದ ಮತ್ತು ಧಾರ್ಮಿಕ ಕಾರ್ಯಗಳಲ್ಲಿ ಚೆನ್ನೆಮಣೆ ಇಂದಿಗೂ ಬಹುಮುಖ್ಯವಾದ ಕಲಾಪವಾಗಿದೆ.
ಕಳಸದಲ್ಲಿ ಕಂಡುಬಂದಿರುವ ಕಲ್ಗುಳಿಗಳು ಎರಡು ಸಮಾನಾಂತರ ಸಾಲುಗಳಲ್ಲಿ 7+7 ಒಟ್ಟು 14 ಗುಳಿಗಳು ಕಂಡುಬರುತ್ತವೆ. ಕೆಲವು ಕಡೆ 18 ಗುಳಿಗಳನ್ನು ಒಳಗೊಂಡಿವೆ. ಈ ಮೊದಲೇ ವಿವರಿಸಿದಂತೆ ಪಾಂಡವರ ಉಪ್ಪರಿಗೆಯಲ್ಲಿ ಐದು ಗುಹೆಗಳು ಮತ್ತು ಐದು ಸಮಾಧಿಗಳು ಕಂಡುಬರುತ್ತವೆ. ಆದರಿಂದ ಈ ಐದು ಕಲ್ಗುಳಿಗಳು ಐದು ಸಮಾಧಿಗಳ ಅಥವಾ ಐದು ಸಾವಿನ ಸಂಕೇತವಾಗಿರಬಹುದು ಎಂಬ ಊಹೆಯನ್ನು ಮಾಡಬಹುದು.


ಸುಪ್ರೀತ ಕೆ. ಎನ್.
ಪಿಹೆಚ್.ಡಿ ಸಂಶೋಧನಾರ್ಥಿ
ಪ್ರಾಚೀನ ಇತಹಾಸ ಮತ್ತು ಅಧ್ಯಯನ ವಿಭಾಗ
ಕನ್ನಡ ವಿಶ್ವವಿದ್ಯಾಲಯ, ಹಂಪಿ

1 Comments:

At July 7, 2020 at 7:46 AM , Blogger Nabha87 said...

ಈ ಪ್ರದೇಶದಲ್ಲಿ ನಾನು ಕೂಡ ಕ್ಷೇತ್ರಕಾರ್ಯವನ್ನು ಕೈಗೊಂಡಿರುವುದರಿಂದ ಪಾಂಡವರ ಉಪ್ಪರಿಗೆಯಲ್ಲಿ ಮಾನವನು ಬಳಸಿರುವ ಯಾವುದೇ ರೀತಿಯ ಕುರುಹುಗಳು ದೊರೆತಿಲ್ಲ. ಅಲ್ಲದೆ ಆ ಕಾಲದ ವರ್ಣಚಿತ್ರಗಳು, ಕುಟ್ಟು ಅಥವಾ ರೆಖಾಚಿತ್ರಗಳಾಗಲಿ ಕಂಡುಬರುವುದಿಲ್ಲ. ಇನ್ನೂ ಚೆನ್ನಮಣೆ ಆಟ ಕಂಡುಬರುವುದು ಇತಿಹಾಸ ಕಾಲದಲ್ಲಿ. ಈ ಪ್ರದೇಶ ವಿಜಯನಗರ ಕಾಲದಲ್ಲಿ ವಿಜಯನಗರ ಅರಸರ ಅದೀನದಲ್ಲಿತ್ತು. ಇದು ತಮಗೂ ಕೂಡ ತಿಳಿದಿದೆ. ಹಾಗಾದರೆ ಚನ್ನಮಣೆ ಆಟದ ಕುರುಹುಗಳು ಅಷ್ಟು ಅಚ್ಚುಕಟ್ಟಾಗಿ ಬೃಹತ್ ಶಿಲಾಯುಗದ ಕಾಲದಲ್ಲಿ ರಚನೆಯಾಗಿವೆಯೆ???? ನೀವು ಒಮ್ಮೆ ಯೂ ಮಂಜಣ್ಣ ಪಿ.ಬಿ ಅವರ ವಿಜಯನಗರ ಕಾಲದ ಕ್ರೀಡೆ ಮತ್ತು ವಿನೋದಾವಳಿಗಳು ಪಿಹೆಚ್.ಡಿ ಪ್ರಬಂಧವನ್ನು ಗಮನಿಸಿಲ್ಲ ಎಂದು ಕಂಡುಬರುತ್ತಿದೆ. ಏಕೆಂದರೆ ಅದರಲ್ಲಿ ಅತಿ ಹೆಚ್ಚಿನ ಮಾಹಿತಿಗಳು ಕಂಡುಬರುತ್ತವೆ.

 

Post a Comment

Subscribe to Post Comments [Atom]

<< Home