Saturday, February 29, 2020

ಅಕ್ರಮ ಆನೆದಂತ ಸಾಗಾಟ ನಾಲ್ವರ ಬಂಧನ. ಚಿಕ್ಕಮಗಳೂರು ಪೋಲೀಸರ ಮಿಂಚಿನ ಕಾರ್ಯಚರಣೆ.



ಅಕ್ರಮ ಆನೆದಂತ ಸಾಗಾಟ ನಾಲ್ವರ ಬಂಧನ. ಚಿಕ್ಕಮಗಳೂರು ಪೋಲೀಸರ ಮಿಂಚಿನ ಕಾರ್ಯಚರಣೆ
ಅಕ್ರಮವಾಗಿ ದಂತ ಸಾಗಣೆ ಮಾಡುತಿದ್ದ ಶೃಂಗೇರಿ ತಾಲೂಕಿನ ಪ್ರಭಾವಿ ರಾಜಕಾರಣಿಯವರ ಬಲಗೈ ಬಂಟನಾಗಿದ್ದ ಶಬರೀಶ ಮತ್ತು ಅವನ ಜೊತೆ ಇದ್ದ 3 ಜನ ಸಹಚರರನ್ನು ಬಂಧಿಸಿದ್ದ ಈ ಸಂಬಂಧ ಚಿಕ್ಕಮಗಳೂರು ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೋಲೀಸರು ಮೂಗ್ತಿಹಳ್ಳಿ ಬಳಿ KA 18 1426 ಸೆಲಾರಿಯೋ ಕಾರಿನಲ್ಲಿ ಅಕ್ರಮವಾಗಿ ಅನೆದಂತ ಮತ್ತು 5 ಲಕ್ಷ ಹಣವನ್ನು ಸಾಗಿಸಿತ್ತಿದ್ದ ಆರೋಪಿಗಳನ್ನು ಚಿಕ್ಕಮಗಳೂರು ಗ್ರಾಮಾಂತರ ಠಾಣಾ ಪೋಲಿಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.ಚಿಕ್ಕಮಗಳೂರು ಜಿಲ್ಲಾ ಉತ್ಸವದಲ್ಲಿ ಜನ ಜಂಗುಳಿ ಹೆಚ್ಚಾಗಿರುವುದರಿಂದ ಆ ಸಮಯದಲ್ಲಿ ಸುಲಭವಾಗಿ ಪೋಲಿಸರಿಂದ ತಪ್ಪಿಸಿಕೊಳ್ಳಬಹುದೆಂಧು ಸಂಚು ರೂಪಿಸಿದ್ದರು ಆದರೆ, ಮಿಂಚಿನದಾಳಿ ನಡೆಸಿದ ಚಿಕ್ಕಮಗಳೂರು ಪೋಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾದರು.ಅಕ್ರಮ ದಂತ ಸಾಗಟದ ಪ್ರಮುಖ ಆರೋಪಿಯಾಗಿರುವ ಶಬರೀಶ್ ಎಂಬುವವನು ಶೃಂಗೇರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಐಟಿ ಸೆಲ್  ನ ಮುಖ್ಯಸ್ಥ  ಮತ್ತು ಶೃಂಗೇರಿ ಶಾಸಕ ರಾಜೇಗೌಡ ಅವರ ಆಪ್ತ ಎಂದು ಮಾಹಿತಿ ದೊರೆತಿದ್ದು ಉಳಿದ ಆರೋಪಿಗಳನ್ನು ಯೋಗಿಶ್, ವಿಜಯ್ ಮತ್ತು ಮಧುಸೂದನ್ ಎಂದು ಗುರುತಿಸಲಾಗಿದೆ.

Friday, February 28, 2020

ಕಾಫಿಘಮ ದೇಶಾದ್ಯಂತ ಪರಿಚಯಿಸಬೇಕು- ಶೋಭಾ ಕರಂದ್ಲಾಜೆ.


ಚಿಕ್ಕಮಗಳೂರು ಜಿಲ್ಲೆಯ ಕಲಾ, ಸಾಂಸ್ಕೃತಿಕ, ಮತ್ತು ಪ್ರವಾಸೋದ್ಯಮದ ವೈಶಿಷ್ಟ್ಯತೆಯ ಕಾಫಿ ನಾಡಿನ ಘಮವನ್ನು ದೇಶಾದ್ಯಂತ  ಪರಿಚಯಿಸಬೇಕು ಎಂದು ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.  ಚಿಕ್ಕಮಗಳೂರು ಜಿಲ್ಲಾ ಉತ್ಸವದ ಅಂಗವಾಗಿ ನಗರಕ್ಕೆ ಆಗಮಿಸಿದ ಅವರು ಡೊಳ್ಳು ಭಾರಿಸುವ ಮೂಲಕ ಚಿಕ್ಕಮಗಳೂರು ಹಬ್ಬಕ್ಕೆ ಅಧಿಕೃತ ಚಾಲನೆ ನೀಡಿದರು. ನಂತರ ಮಾತನಾಡಿದ ಶೋಭಾ ಕರಂದ್ಲಾಜೆ ಕರ್ನಾಟಕವು ವಿವಿಧತೆಯಲ್ಲಿ ಏಕತೆ ಹೊಂದಿರುವಂತಹ ರಾಜ್ಯವಾಗಿದೆ. ಚಿಕ್ಕಮಗಳೂರು ಜಿಲ್ಲಾ ಉತ್ಸವ ಮೈಸೂರು ದಸರಾದಷ್ಟು ವಿಜೃಂಭಣೆಯಾಗಿ ನಡೆಯುತ್ತಿದೆ. ಚಿಕ್ಕಮಗಳೂರು ಜಿಲ್ಲೆಯನ್ನು ದೊಡ್ಡ ಪ್ರವಾಸೋದ್ಯಮ ಕ್ಷೇತ್ರವನ್ನಾಗಿ ಮಾಡುವ ಗುರಿ ಹೊಂದಿದ್ದೇವೆ ಎಂದ ಅವರು, ಕನ್ನಡಕ್ಕೆ ಬಹುದೊಡ್ಡ ಇತಿಹಾಸವಿದೆ ಕನ್ನಡಕ್ಕೆ ಶಾಸ್ತ್ರಿಯ ಸ್ಥಾನಮಾನ ದೊರಕಿಸಲು ಸಕಲ ರೀತಿಯಲ್ಲೂ ಪ್ರಯತ್ನಿಸಲಾಗುವುದು  ಇದಕ್ಕಾಗಿ ಮೈಸೂರಿನಲ್ಲಿ ಜಾಗ ಮೀಸಲಿರಿಸಲಾಗಿದೆ ಎಂದು ಈ ಸಂದರ್ಭದಲ್ಲಿ ಹೇಳಿದರು. ಕಾರ್ಯಕ್ರಮದಲ್ಲಿ ಈ ಬಗ್ಗೆ ಮಾತನಾಡಿದ ವಿಧಾನಸಭಾ ಸದಸ್ಯ ಪ್ರಾಣೇಶ್ ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ಬೇಸತ್ತಿರುವ ಜನರಿಗೆ ಅದನ್ನು ಮರೆಯಲು ಇದೊಂದು ಒಳ್ಳೆಯ ಕಾರ್ಯಕ್ರಮ ಎಂದರು.  ಜಿ.ಪಂ. ಅಧ್ಯಕ್ಷೆ ಸುಜಾತ ಕೃಷ್ಣಪ್ಪ ಮಾತನಾಡಿ ಕನ್ನಡ ಸಂಸ್ಕೃತಿ ಇಲಾಖೆ ಕೇವಲ ರಂಗ ಮಂದಿರಕ್ಕೆ ಸೀಮಿತವಾಗದೆ ಇಂತಹ ದೊಡ್ಡ ಹಬ್ಬಕ್ಕೂ ಸಾಕ್ಷಿಯಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ ರವಿ ಈ ಹಬ್ಬದ ಯೋಚನೆ ಮಾತ್ರ ನನ್ನದು ಆದರೆ ಅದ್ದೂರಿಯಾಗಿ ಯೋಜನೆ ಮಾಡಿದ್ದು ನೀವುಗಳು ಹಾಗಾಗಿ ಇದರ ಸಂಪೂರ್ಣ ಶ್ರೇಯಸ್ಸು ಚಿಕ್ಕಮಗಳೂರು ಸಾರ್ವಜನಿಕರಿಗೆ ಸಲ್ಲಬೇಕು ಎಂದರು. ಇಂತಹ ಒಳ್ಳೆ ಕಾರ್ಯಕ್ರಮಕ್ಕೆ ಕಾರಣವಿಲ್ಲದೆ ಹೊಟ್ಟೆಕಿಚ್ಚು ಪಡುವವರಿಗೆ ಜನರ ಸಂಭ್ರಮವೇ ಉತ್ತರ ಕೊಟ್ಟಿದೆ ಎಂದ ಅವರು, ಚಿಕ್ಕಮಗಳೂರು ಜಿಲ್ಲೆಯಲ್ಲಿ ಆದಂತಹ ಅತಿವೃಷ್ಟಿಗೂ ಶೀಘ್ರದಲ್ಲೇ ಪರಿಹಾರ ಒದಗಿಸುವ ಕಾರ್ಯವೂ ಕೂಡ ನಡೆಯುತ್ತದೆ ಎಂದರು.

ಇದಕ್ಕೂ ಮುನ್ನ ಜಿಲ್ಲಾ ಹಬ್ಬದ ಪ್ರಯುಕ್ತ ಸುಮಾರು 100 ಕ್ಕೂ ಹೆಚ್ಚು ವಿವಿಧ ಜಾನಪದ ಕಲಾ ತಂಡಗಳಿಂದ ಆಕರ್ಷಕ ಬೀದಿ ಉತ್ಸವ ನಡೆದಿದ್ದು ಈ ಉತ್ಸವ ಚಿಕ್ಕಮಗಳೂರು ಉತ್ಸವಕ್ಕೆ ಇನ್ನಷ್ಟು ಮೆರಗನ್ನು ನೀಡಿತು.


ಕಾರ್ಯಕ್ರಮದಲ್ಲಿ ಜಿ.ಪಂ ಅಧ್ಯಕ್ಷೆ ಸುಜಾತ ಕೃಷ್ಣಪ್ಪ. ಆಯನೂರು ಮಂಜುನಾಥ, ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿ, ವಿಧಾನ ಪರಿಷತ್ ಸದಸ್ಯ ಪ್ರಾಣೇಶ್, ತಾ.ಪಂ. ಸದಸ್ಯ ಜಯಣ್ಣ, ಜಿ.ಪಂ. ಸದಸ್ಯ ವಿಜಯ್  ಕುಮಾರ್, ಜಿಲ್ಲಾಧಿಕಾರಿ ಬಗಾದಿ ಗೌತಮ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರೀಶ್ ಪಾಂಡೆ, ಮೋಹನ್ ಆಳ್ವ , ಶೃಂಗೇರಿ ಶಾಸಕ ರಾಜೇಗೌಡ ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.

ಸಂಜೆ ಕರ್ನಾಟಕದ ಮೂಲೆ ಮೂಲೆ ಇಂದ ಬಂದ ಸುಮಾರು 55 ತಂಡಗಳ 600 ಕ್ಕೂ ಹೆಚ್ಚು ಕಲಾವಿದರಿಂದ ಸುಮಾರು 3 ಗಂಟೆಗಳ ಕಾಲ ಜಾನಪದ ಜಾತ್ರೆ ಕಾರ್ಯಕ್ರಮವೂ ಅದ್ದೂರಿಯಾಗಿ ನಡೆಯಿತು.


























Thursday, February 27, 2020

ಅಡಿಕೆ ಕೊಳೆರೋಗಕ್ಕೆ ಅಗರವುಡ್ ಪರ್ಯಾಯ ಬೆಳೆ - ಕೆ.ಆರ್.ವೆಂಕಟೇಶ್

ಮಲೆನಾಡಿನಲ್ಲಿ ಅಡಕೆ ಬೆಳೆ ಸಂಕಷ್ಟದಲ್ಲಿರುವುದರಿಂದ ಪರ್ಯಾಯ ಬೆಳೆಯಾಗಿ ಅಗರ್‍ವುಡ್ ಬೆಳೆಯನ್ನು ಬೆಳೆಯುವುದು ಆಶಾದಾಯಕವಾಗಿದೆ ಎಂದು ತಾಪಂ ಸದಸ್ಯ ಕೆ.ಆರ್.ವೆಂಕಟೇಶ್ ಹೇಳಿದರು.

ಅಡ್ಡಗದ್ದೆ ಗ್ರಾಪಂ ಯ ನೇತ್ರವಳ್ಳಿ ನಾಗಾನಂದರವರ ತೋಟದಲ್ಲಿ ಮಂಗಳವಾರ ಪ್ರಕೃತಿ ರೈತ ಮಿತ್ರ ಕೂಟ ಏರ್ಪಡಿಸಿದ್ದ ಅಗರ್‍ವುಡ್ ಬೆಳೆಯ ಕ್ಷೇತ್ರೋತ್ಸವದಲ್ಲಿ ಮಾತನಾಡಿದರು. ಅಗರ್‍ವುಡ್ ಮಲೆನಾಡಿನ ಪರಿಸರಕ್ಕೆ ಹೊಂದಿಕೊಂಡು ಬೆಳೆಯುವ ಮರವಾಗಿದ್ದು,ಸುಲಭವಾಗಿ ಬೆಳೆಯುತ್ತದೆ.ರೈತರು ತಮ್ಮ ತೋಟದ ಸುತ್ತಲೂ,ಮುಖ್ಯ ಬೆಳೆಯಾಗಿಯೂ ಬೆಳೆಯಬಹುದಾಗಿದೆ ಎಂದರು.

ಧರ್ಮೇಂದ್ರಕುಮಾರ್ ಮಾತನಾಡಿ,ಭಾರತದ ಅಗರ್‍ವುಡ್ ಸುಗಂಧ ಒಳ್ಳೆಯ ಗುಣಮಟ್ಟದಾಗಿದ್ದು,ಹೆಚ್ಚು ಬೆಲೆ ಹೊಂದಿದ್ದು,ಮೊದಲ ಸ್ಥಾನದಲ್ಲಿದೆ. ಈ ಬೆಳೆ ಬೆಳೆಯುತ್ತಿರುವ ಕಾಂಬೋಡಿಯಾ,ಜಾವಾ,ಮಲೇಷಿಯಾ ಮುಂತಾದ ದೇಶಗಳು ನಂತರದ ಸ್ಥಾನದಲ್ಲಿದೆ.ದೇಶದ ಅಗರ್‍ವುಡ್ ಸುಗಂಧ ದ್ರವ್ಯಕ್ಕೆ ಹೆಚ್ಚು ಬೇಡಿಕೆ ಇದೆ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ರೈತ ಮಿತ್ರ ಕೂಟದ ಪ್ರತಿನಿಧಿ ನಾಗಾನಂದ ಅಗರ್‍ವುಡ್ ಕೃಷಿಯಲ್ಲಿ ಇನಾಕ್ಯುಲೇಷನ್ ಪ್ರಮುಖ ಘಟ್ಟವಾಗಿದೆ.16 ವಿವಿಧ ಇನಾಕ್ಯುಲೇಷನ್ ತಂತ್ರಜ್ಞಾನವನ್ನು ಇದೀಗ ಅಭಿವೃದ್ಧಿಪಡಿಸಲಾಗಿದೆ. ಇದರಿಂದ ದ್ರವ್ಯ ಉತ್ಪಾದನೆಗೆ ಅನುಕೂಲವಾಗಿದೆ.ರೈತರು ಹೆಚ್ಚಿನ ಮಾಹಿತಿ ಪಡೆದುಕೊಳ್ಳಲು ಅನುಕೂಲವಾಗುವಂತೆ ಕ್ಷೇತ್ರೋತ್ಸವ ಆಯೋಜಿಸಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ತಾಪಂ ಸದಸ್ಯ ರಾಮಕೃಷ್ಣರಾವ್,ಕೆ.ಆರ್.ಅವಿನಾಶ್,ಹೆಬ್ಬಿಗೆ ಕೃಷ್ಣಮೂರ್ತಿ,ಅರುಣಾಚಲಾ,ಶ್ರೀಧರರಾವ್,ಮಲ್ಲೇಶ್,ವಿಜಯ ಉಪಸ್ಥಿತರಿದ್ದರು.

Monday, February 17, 2020

ಸಹಕಾರ ಸಾರಿಗೆ ಉಳಿಸಿ.... ವಿದ್ಯಾರ್ಥಿಗಳ ಭವಿಷ್ಯ ಬದಲಿಸಿ.....


ಇನ್ನೇನು ಕೆಲವೇ ದಿನಗಳಲ್ಲಿ ಪರೀಕ್ಷೆ ಪ್ರಾರಂಭ ವಾಗಲಿದ್ದು, ಸಹಕಾರ ಸಾರಿಗೆ ಸಂಸ್ಥೆ ಬಸ್ ಸ್ಥಗಿತ ಮಾಡಿದರೆ 12000 ವಿದ್ಯಾರ್ಥಿಗಳ ಗತಿ ಏನು?... ಸರ್ಕಾರ ಆ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಚಿಂತಿಸಿ, ಸಹಕಾರ ಸಾರಿಗೆ ಸಂಸ್ಥೆಗೆ ಆರ್ಥಿಕ ಸಹಾಯಧನ ನೀಡಬೇಕಾಗಿದೆ.... 

Saturday, February 15, 2020

ಮುಚ್ಚುವ ಭೀತಿಯಲ್ಲಿ ಸಹಕಾರ ಸಾರಿಗೆ ಸಂಸ್ಥೆ


ನಾಳೆ ಸಹಕಾರ ಸಾರಿಗೆ (TCS) ಬಸ್ ಸಂಚಾರ ಸ್ಥಗಿತ....

ಮಲೆನಾಡಿನ ಹೆಮ್ಮೆಯ ಸಾರಿಗೆ ಸಂಸ್ಥೆಯಾದ ಸಹಕಾರ ಸಾರಿಗೆ ಸಂಸ್ಥೆಯು ನಾಳೆ ಒಂದು ದಿನ ತನ್ನ ಸೌಲಭ್ಯವನ್ನು ಸ್ಥಗಿತಗೊಳಿಸಲಿದೆ. ದಿನದಿಂದ ದಿನಕ್ಕೆ ಆರ್ಥಿಕ ಸಂಕಷ್ಟ ಎದುರಿಸುತ್ತಿರುವ ಸಹಕಾರ ಸಾರಿಗೆ ಸಂಸ್ಥೆ ಈ ಬಗ್ಗೆ ಚರ್ಚಿಸಲು  ನಾಳೆ ಬೆಳಿಗ್ಗೆ 11 ಗಂಟೆಗೆ ಕಾರ್ಮಿಕರ ಸಮಾಲೋಚನಾ ಸಭೆ ಏರ್ಪಡಿಸಲಾಗಿದ್ದು ಈ ಸಭೆಗೆ ನಿರ್ವಾಹಕರು, ಚಾಲಕರು ಮತ್ತು ಸಿಬ್ಬಂದಿಗಳು ಭಾಗಿಯಾಗಲಿದ್ದು, ಈ ಕಾರಣದಿಂದಾಗಿ  ಸಂಸ್ಥೆ ನಾಳೆ ತಾತ್ಕಾಲಿಕವಾಗಿ ಸೇವೆಯನ್ನು ರದ್ದುಗೊಳಿಸಿದೆ.

Thursday, February 13, 2020

ಪ್ಲಾಸ್ಟಿಕ್ ಬಳಕೆಗೆ ಬೇಕಿದೆ ಮುಕ್ತಿ..... ಮಾಲಿನ್ಯ ಮುಕ್ತ ದೇಶವಾಗಬೇಕಿದೆ ಭಾರತ.....


1950 ರಿಂದ 202065 ವರ್ಷಗಳ ಅವಧಿಯಲ್ಲಿ ವಿಶ್ವದಾದ್ಯಂತ 9100 ಕೋಟಿ ಟನ್‌ಗಿಂತ ಅಧಿಕ ಪ್ರಮಾಣದ ಪ್ಲಾಸ್ಟಿಕ್ ಉತ್ಪಾದನೆಯಾಗಿದೆ.ಇದರಲ್ಲಿ ಕೇವಲ 819 ಕೋಟಿ ಟನ್ ಪ್ಲಾಸ್ಟಿಕ್ ಮರುಬಳಕೆಯಾಗಿದ್ದರೆ, 1092 ಕೋಟಿ ಟನ್ ಪ್ಲಾಸ್ಟಿಕ್‌ನ್ನು ದಹನ ಕ್ರಿಯೆಯಲ್ಲಿ ನಾಶಮಾಡಲಾಗಿದೆ.ಹೀಗಾಗಿ 5100 ಕೋಟಿ ಟನ್‌ಗಿಂತ ಅಧಿಕ ಪ್ಲಾಸ್ಟಿಕ್ ತ್ಯಾಜ್ಯ ನಮ್ಮ ಭೂಮಿ, ಸಮುದ್ರ, ನದಿ, ಕೆರೆ, ಹೀಗೆ ಪರಿಸರ ಮಾಲಿನ್ಯಕ್ಕೆ ಕಾರಣವಾಗಿದೆ ಮತ್ತು ಎಲ್ಲಾ ಜೀವ ವೈವಿಧ್ಯಕ್ಕೂ ಮಾರಕವಾಗಿದೆ.ಉದಾಹರಣೆಗೆ, ಸಮುದ್ರ ಸೇರುವ ಪ್ಲಾಸ್ಟಿಕ್ ತ್ಯಾಜ್ಯದಿಂದಾಗಿ ತಿಮಿಂಗಲ, ಡಾಲ್ಫಿನ್, ಕಡಲ ಆಮೆಗಳು, ಕಡಲ ಹಕ್ಕಿಗಳು, ಮೀನುಗಳು, ಹೀಗೆ ಸುಮಾರು 600 ಜೀವ ಸಂಕುಲಗಳ ಮಾರಣ ಹೋಮಕ್ಕೆ
ಕಾರಣವಾಗಿದೆ.ಸಮುದ್ರದ ನೀರು, ಸಮುದ್ರದ ತಳದಲ್ಲಿರುವ ಕಲ್ಲು, ಮಣ್ಣಿನಲ್ಲೂ ಪ್ಲಾಸ್ಟಿಕ್ ತ್ಯಾಜ್ಯದ ಸೂಕ್ಷ್ಮಕಣಗಳು ಪತ್ತೆಯಾಗಿವೆ. ಇದೇ ರೀತಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಮುದ್ರದಲ್ಲಿ ಸುರಿಯುವುದನ್ನು ಮುಂದುವರೆಸಿದರೆ 2050ರ ಹೊತ್ತಿಗೆ ಸಮುದ್ರಗಳಲ್ಲಿ ಜಲಚರಗಳಿಗಿಂತ ಪ್ಲಾಸ್ಟಿಕ್ ತಾಜ್ಯ ಅಧಿಕವಾಗುತ್ತದೆ ಮತ್ತು ಮೀನುಗಾರಿಕೆ ನಂಬಿಕೊಂಡಿರುವ ಕೋಟ್ಯಾಂತರ ಜನರು ತೀವ್ರ ಸಂಕಷ್ಟಕ್ಕೆ ಈಡಾಗುತ್ತಾರೆ. ಪ್ಲಾಸ್ಟಿಕ್ ಉತ್ಪಾದನೆಯಲ್ಲಿ ಚೀನಾಗೆ ಪ್ರಥಮ ಸ್ಥಾನವಿದ್ದರೆ, ನಂತರದ ಸ್ಥಾನಗಳು ಯುರೋಪ್ ಮತ್ತು ಉತ್ತರ ಅಮೇರಿಕಾ ದೇಶಗಳ ಪಾಲಾಗಿವೆ.ಅಮೇರಿಕಾದ ವಿಜ್ಞಾನಿಗಳು ಪ್ರಕಟಿಸಿರುವ ಈ ಅಧ್ಯಯನ ವರದಿ, ವಿಶ್ವದಾದ್ಯಂತ ತಲ್ಲಣವನ್ನುಂಟು ಮಾಡಿದೆ.




ಪ್ಲಾಸ್ಟಿಕ್ ಚೀಲಗಳು ಮಾಡುತ್ತಿರುವ ಹಾನಿ



ಪ್ರತಿ ನಿಮಿಷ 10 ಲಕ್ಷ ಪ್ಲಾಸ್ಟಿಕ್ ಕೈಚೀಲಗಳನ್ನು ವಿಶ್ವದಾದ್ಯಂತ ಬಳಸಲಾಗುತ್ತಿದೆ. ಹೀಗೆ ಬಳಸಿ ಬಿಸಾಡುವ ಪ್ಲಾಸ್ಟಿಕ್ ಕೈಚೀಲಗಳಿಂದಾಗಿ ಆಗುತ್ತಿರುವ ಹಾನಿ ಕುರಿತು ಹೆಚ್ಚಿನ ಜನರಿಗೆ ಅರಿವಿಲ್ಲ. ಹೀಗಾಗಿ ಈ ಪ್ಲಾಸ್ಟಿಕ್ ಕೈಚೀಲಗಳು ಮಾಡುತ್ತಿರುವ ಹಾನಿಯನ್ನು ಕುರಿತು ಕೆಲವು ಉದಾಹರಣೆಗಳನ್ನು ಇಲ್ಲಿ ನೀಡಲಾಗಿದೆ.

1. ಒಂದು ಪ್ಲಾಸ್ಟಿಕ್ ಕೈಚೀಲವನ್ನು ಕಸದ ಜೊತೆ ಬಿಸಾಡಿದರೆ ಅದು ಸುಮಾರು 1000 ವರ್ಷಗಳ ಕಾಲ ಹಾಗೆ ಇರುತ್ತದೆ. ಇದುವರೆಗೆ ವಿಶ್ವದಲ್ಲಿ ಬಳಕೆಯಾಗಿರುವ ಪ್ಲಾಸ್ಟಿಕ್ ಕೈಚೀಲಗಳಲ್ಲಿ ಶೇಕಡಾ 1 ರಷ್ಟು ಕೈಚೀಲಗಳನ್ನು ಮಾತ್ರ ಮರುಬಳಕೆಗಾಗಿ ಸಂಸ್ಕರಣೆ ಮಾಡಲಾಗಿದೆ.ಉಳಿದ ಶೇಕಡಾ 99ರಷ್ಟು ಪ್ಲಾಸ್ಟಿಕ್ ಕೈಚೀಲಗಳು ಹರಿದು ಚೂರು ಚೂರಾಗಿದ್ದರೂ ಕೂಡಾ ನಮ್ಮ ಭೂಮಿ, ಜಲ, ಪರಿಸರದಲ್ಲಿ ಹರಡಿಕೊಂಡಿದ್ದು, ಪರಿಸರ ಮತ್ತು ಜೀವ ಸಂಕುಲ ನಾಶ ಮಾಡುತ್ತಿವೆ.ಉದಾಹರಣೆಗೆ ಸಮುದ್ರದಲ್ಲಿ 5 ಲಕ್ಷ ಕೋಟಿ ಪ್ಲಾಸ್ಟಿಕ್ ಕೈಚೀಲಗಳು ಹರಿದಾಡುತ್ತಿವೆ.

2. ಸಮುದ್ರದಲ್ಲಿ ಸೇರುವ ಪ್ಲಾಸ್ಟಿಕ್ ಕೈಚೀಲಗಳ ಉರುಳಿಗೆ ಸಿಕ್ಕು ಪ್ರತಿವರ್ಷ 1 ಲಕ್ಷ ಜಲಚರಗಳು ಸಾಯುತ್ತಿವೆ. ಇದೇ ರೀತಿ ಪ್ರತಿ ವರ್ಷ 10 ಲಕ್ಷ ಕಡಲ ಪಕ್ಷಿಗಳು ಈ ಪ್ಲಾಸ್ಟಿಕ್‌ನ್ನು ಆಹಾರವೆಂದು ಭಾವಿಸಿ ಸೇವಿಸುವುದರಿಂದಾಗಿ ಸಾಯುತ್ತಿವೆ.

3. ಪ್ಲಾಸ್ಟಿಕ್ ಕೈಚೀಲಗಳನ್ನು ತಯಾರಿಸಲು ಬಳಸುವ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲದಿಂದಾಗಿ ಪರಿಸರ ಮಾಲಿನ್ಯ ಕೂಡಾ ಹೆಚ್ಚಾಗುತ್ತಿದೆ. 7 ಪ್ಲಾಸ್ಟಿಕ್ ಕೈ ಚೀಲಗಳನ್ನು ತಯಾರಿಸಲು ಬಳಸುವ ಇಂಧನವನ್ನು ಬಳಿಸಿದರೆ ಒಂದು ಕಾರನ್ನು ಒಂದು ಕಿಲೋಮೀಟರ್‌ವರೆಗೂ ಚಲಾಯಿಸಬಹುದಾಗಿದೆ.

4. ಬಿಸಿಲಿನಲ್ಲಿ ಬಿದ್ದ ಪ್ಲಾಸ್ಟಿಕ್ ಕೈಚೀಲವು ಸೂರ್ಯನ ಅಲ್ಟ್ರಾ ವಯಲೆಟ್ ಕಿರಣಗಳಿಂದಾಗಿ ರಾಸಾಯನಿಕವಾಗಿ ಪರಿವರ್ತನೆ ಹೊಂದುತ್ತವೆ. ಇಂತಹ ಚೀಲದ ಚೂರುಗಳು ನಮ್ಮ ಹೊಲ, ಕೆರೆ, ನದಿಗಳ ದಡಗಳನ್ನು ಸೇರಿದಾಗ, ಈ ಪ್ಲಾಸ್ಟಿಕ್ ಚೂರು ಇರುವ ಕಡೆ ಒಂದು ಕಡ್ಡಿ ಹುಲ್ಲು ಕೂಡಾ ಬೆಳಯಲಾರದಷ್ಟು ನೆಲ ಬಂಜರಾಗುತ್ತದೆ.

5. ಪ್ಲಾಸ್ಟಿಕ್ ಕೈಚೀಲಗಳನ್ನು ಕಸದ ರಾಶಿಯ ಜೊತೆಯಲ್ಲಿ ಸುಡುವುದರಿಂದ ಪರಿಸರ ಮಾಲಿನ್ಯದ ಜೊತೆಗೆ ಜನಸಾಮಾನ್ಯರಿಗೆ ಕ್ಯಾನ್ಸರ್ ನಂತಹ ತೀವ್ರ ತರದ ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗುತ್ತದೆ.

ಪ್ಲಾಸ್ಟಿಕ್ ತ್ಯಾಜ್ಯ ಮತ್ತು ಭಾರತ

ಭಾರತದಲ್ಲಿ ಪ್ರತಿದಿನ 15342 ಟನ್‌ಗಿಂತ ಹೆಚ್ಚು ಪ್ಲಾಸ್ಟಿಕ್ ತ್ಯಾಜ್ಯ ಉತ್ಪಾದನೆಯಾಗುತ್ತಿದೆ. ಇದರಲ್ಲಿ 9205 ಟನ್ ಪ್ಲಾಸ್ಟಿಕ್ ತ್ಯಾಜ್ಯವನ್ನು ಮರುಬಳಕೆ ಮಾಡಲಾಗುತ್ತಿದೆ ಮತ್ತು 6137 ಟನ್ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹ ಮತ್ತು ಸಂಸ್ಕರಣೆಯಾಗದೆ ಉಳಿಯುತ್ತಿದೆಎಂದು 2014-15ರ ಕೇಂದ್ರಿಯ ಮಾಲಿನ್ಯ ನಿಯಂತ್ರಣ ಮಂಡಳಿಯ ವರದಿ ಹೇಳುತ್ತದೆ. ಪ್ರತಿವರ್ಷ ಭಾರತದಲ್ಲಿ ಪ್ಲಾಸ್ಟಿಕ್ ತ್ಯಾಜ್ಯದ ಸಮಸ್ಯೆ ಹೆಚ್ಚಾಗುತ್ತಿದೆ.ಇದನ್ನು ವೈಜ್ಞಾನಿಕವಾಗಿ ಸಂಗ್ರಹಿಸುವುದು, ವಿಲೇವಾರಿ ಮತ್ತು ಸಂಸ್ಕರಣೆ ಮಾಡುವುದು ಅತ್ಯಗತ್ಯವಾಗಿದೆ.

ಆಗಸ್ಟ್ 1, 2017ರಂದು ನ್ಯಾಷನಲ್ ಗ್ರೀನ್ ಟ್ರಿಬ್ಯೂನಲ್, ಹೋಟಲ್, ಉಪಹಾರಗೃಹ, ಸಾರ್ವಜನಿಕ ಮತ್ತು ಖಾಸಗಿ ಸಮಾರಂಭಗಳಲ್ಲಿ ಪ್ಲಾಸ್ಟಿಕ್ ನಿಷೇಧ ಕುರಿತು ತಾನು ನೀಡಿದ್ದ ಆದೇಶವನ್ನು ಅನುಷ್ಠಾನಗೊಳಿಸಲು ವಿಫಲವಾಗಿರುವ ದೆಹಲಿ ಸರ್ಕಾರವನ್ನು ತರಾಟೆಗೆ ತಗೆದುಕೊಂಡಿತು. ಹೀಗೆ ರಾಜ್ಯ ಸರ್ಕಾರಗಳು ಪ್ಲಾಸ್ಟಿಕ್ ಸಮಸ್ಯೆ ಪರಿಹರಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲು ವಿಫಲವಾಗುತ್ತಿರುವುದರಿಂದಾಗಿ ದೇಶದಲ್ಲಿ ಪ್ಲಾಸ್ಟಿಕ್ ತ್ಯಾಜ್ಯದ ಸಮಸ್ಯೆ ಮತ್ತಷ್ಟು ಗಂಭೀರವಾಗಲಿದೆ.

2015
ರಲ್ಲಿ ಕೇಂದ್ರ ಸರ್ಕಾರವು ರಸ್ತೆ ನಿರ್ಮಾಣದಲ್ಲಿ ಪ್ಲಾಸ್ಟಿಕ್ ತ್ಯಾಜ್ಯವನ್ನು ಗುತ್ತೇದಾರರು ಕಡ್ಡಾಯವಾಗಿ ಬಳಸಬೇಕು ಎಂದು ಆದೇಶ ಹೊರಡಿಸಿತು.ಡಾಂಬರಿನ ಗುಣಮಟ್ಟಕ್ಕೆ ತಕ್ಕಂತೆ ರಸ್ತೆ ನಿರ್ಮಾಣದಲ್ಲಿ ಶೇಕಡಾ 10ರಿಂದ 30ರಷ್ಟು ಪ್ಲಾಸ್ಟಿಕ್ ತ್ಯಾಜ್ಯವನ್ನು ಬಳಸಬಹುದು.ಇದರಿಂದಾಗಿ ಡಾಂಬರಿನ ವೆಚ್ಚದಲ್ಲಿ ಗುತ್ತಿಗೆದಾರನಿಗೆ ಉಳಿತಾಯವಾಗುತ್ತದೆ ಮತ್ತು ರಸ್ತೆಗಳಲ್ಲಿ ಗುಂಡಿಗಳಾಗುವುದು ಕೂಡಾ ತಡೆಯಬಹುದಾಗಿದೆ ಎಂದು ರಸ್ತೆ ನಿರ್ಮಾಣ ತಜ್ಞರು ಅಭಿಪ್ರಾಯಪಡುತ್ತಾರೆ. ಹೀಗೆ ಪ್ಲಾಸ್ಟಿಕ್ ತ್ಯಾಜ್ಯ ಬಳಸಿ ರಸ್ತೆ ನಿರ್ಮಾಣ ಮಾಡಲು ಸೂಕ್ತ ತಂತ್ರಜ್ಞಾನ ನಮ್ಮ ದೇಶದಲ್ಲಿ ಇಲ್ಲ ಎನ್ನುವ ಗುತ್ತಿಗೆದಾರರ ಆರೋಪಕ್ಕೆ, ಮುಧುರೈನ ಇಂಜಿನಿಯರಿಂಗ್ ಕಾಲೇಜಿನ ಪ್ರೊ. ರಾಜಗೋಪಾಲನ್ ವಾಸುದೇವನ್‌ರವರು, ಪ್ಲಾಸ್ಟಿಕ್ ತ್ಯಾಜ್ಯ ಬಳಸಿ ಉತ್ತಮ ರಸ್ತೆಗಳನ್ನು ಹೇಗೆ ನಿರ್ಮಿಸಬಹುದು ಎಂದು ನಿರೂಪಿಸಿದ್ದಾರೆ.

ತಮಿಳುನಾಡು ಸರ್ಕಾರವು 1600 ಟನ್ ಪ್ಲಾಸ್ಟಿಕ್ ತ್ಯಾಜ್ಯವನ್ನು ಬಳಸಿ 1035ಕ್ಕೂ ಹೆಚ್ಚು ಕಿಲೋಮೀಟರ್ ಉದ್ದದ ರಸ್ತೆಗಳನ್ನು ನಿರ್ಮಿಸಿದೆ ಮತ್ತು ಈ ರಸ್ತೆಗಳ ಗುಣಮಟ್ಟ ಉತ್ತಮವಾಗಿದೆ ಎಂದು ಹೇಳಲಾಗಿದೆ.ಮಧ್ಯಪ್ರದೇಶ ಸರ್ಕಾರವು ಪ್ಲಾಸ್ಟಿಕ್ ತ್ಯಾಜ್ಯವನ್ನು ಬಳಸಿ 500 ಕಿಲೋಮೀಟರ್ ಉದ್ದದ ರಸ್ತೆಗಳನ್ನು ನಿರ್ಮಿಸಿದೆ.ಇಂದೋರ್ ನಗರಸಭೆ ಪ್ಲಾಸ್ಟಿಕ್ ತ್ಯಾಜ್ಯವನ್ನು ಬಳಸಿ 30 ಕಿಲೋಮೀಟರ್ ಉದ್ದದ ರಸ್ತೆಗಳನ್ನು ನಿರ್ಮಿಸಿದೆ.ಪುಣೆ ನಗರಸಭೆ ಖಾಸಗಿ ಸಂಸ್ಥೆಯೊಂದರ ಸಹಭಾಗಿತ್ವದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಬಳಸಿ 12 ರಸ್ತೆಗಳನ್ನು ನಿರ್ಮಿಸುತ್ತಿದೆ.

ಇದು ಸರ್ಕಾರ, ನಗರಸಭೆ ಮಟ್ಟದಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಸಮಸ್ಯೆ ಪರಿಹರಿಸಲು ನೆಡೆಯುತ್ತಿರುವ ಪ್ರಯತ್ನಗಳಾದರೆ, ಭಾರತೀಯ ರೈಲ್ವೇ ಇಲಾಖೆ ಮತ್ತು ಸ್ವಯಂಸೇವಾ ಸಂಸ್ಥೆ ಜೊತೆಗೂಡಿ, ಮುಂಬೈ ರೈಲು ನಿಲ್ದಾಣಗಳಲ್ಲಿ ಕುಡಿಯುವ ನೀರಿನ ಖಾಲಿ ಪ್ಲಾಸ್ಟಿಕ್ ಬಾಟಲಿಗಳ ತ್ಯಾಜ್ಯದ ಸಮಸ್ಯೆ ನಿವಾರಣೆಗೆ ವಿನೂತನ ಯೋಜನೆಯನ್ನು ಪ್ರಾರಂಭಿಸಿದೆ.
ಈ ಯೋಜನೆಯಂತೆ ರೈಲು ನಿಲ್ದಾಣದಲ್ಲಿ ಅಳವಡಿಸಲಾಗಿರುವ ಯಂತ್ರದಲ್ಲಿ ಖಾಲಿಯಾದ ನೀರಿನ ಪ್ಲಾಸ್ಟಿಕ್ ಬಾಟಲಿಯನ್ನು ಹಾಕಿದಾಗ, ನಮಗೆ ಮೂರು ಆಯ್ಕೆಗಳು ದೊರೆಯುತ್ತವೆ. ನಾವು ಎಷ್ಟು ಖಾಲಿ ಪ್ಲಾಸ್ಟಿಕ್ ಬಾಟಲಿಗಳನ್ನು ಹಾಕಿದ್ದೇವೆ ಎನ್ನುವುದನ್ನು ಆಧರಿಸಿ,

(1)
ಅದಕ್ಕೆ ಸಿಗುವ ಪ್ರೋತ್ಸಾಹಧನವನ್ನು ಸಮಾಜ ಸೇವೆ ಕಾರ್ಯಗಳಿಗೆ ದೇಣಿಗೆಯಾಗಿ ನೀಡಬಹುದು
(2)
ಪ್ರೋತ್ಸಾಹಧನವನ್ನು ಬಳಸಿ ನಮ್ಮ ಮೊಬೈಲ್ ಫೋನ್ ಕರೆನ್ಸಿ ರಿಚಾರ್ಜ್ ಮಾಡಬಹುದು
(3)
ಈ ಯೋಜನೆಯಲ್ಲಿ ಪಾಲುಗೊಂಡಿರುವ ಅಂಗಡಿ, ಉಪಹಾರಗೃಹಗಳಲ್ಲಿ ನಾವು ಖರ್ಚು ಮಾಡುವ ಹಣದಲ್ಲಿ ರಿಯಾಯತಿಯನ್ನು ಪಡೆಯಬಹುದು.
ಈ ಮೂರು ಆಯ್ಕೆಗಳಲ್ಲಿ ನಮಗೆ ಬೇಕಾದುದನ್ನು ಆರಿಸಿಕೊಂಡ ನಂತರ, ಈ ಯಂತ್ರದಿಂದ ಮುದ್ರಿತ ರಸೀದಿ ನಮೆಗೆ ದೊರೆಯುತ್ತದೆ.ದಿನಕ್ಕೆ 5000 ಖಾಲಿ ಪ್ಲಾಸ್ಟಿಕ್ ಬಾಟಲಿಗಳನ್ನು ಈ ಯಂತ್ರದಲ್ಲಿ ಧ್ವಂಸಗೊಳಿಸಿ, ನಂತರ ಅವುಗಳನ್ನು ಕಚ್ಚಾ ವಸ್ತುವಾಗಿ ವಿವಿಧ ಉದ್ಯಮಗಳಿಗೆ ಪೂರೈಸಲಾಗುತ್ತಿದೆ.ಖಾಲಿ ಪ್ಲಾಸ್ಟಿಕ್ ಬಾಟಲಿಗಳನ್ನು ರೈಲು ಹಳಿ, ನಿಲ್ದಾಣಗಳಲ್ಲಿ ಎಸೆಯುವುದು ಇದರಿಂದ ಕೆಡಿಮೆಯಾಗಿದೆಯಂತೆ.

ಪ್ಲಾಸ್ಟಿಕ್ ತ್ಯಾಜ್ಯ ಕುರಿತು ಬೇರೆ ದೇಶಗಳು ಕೈಗೊಳ್ಳುತ್ತಿರುವ ಕ್ರಮಗಳು

1.2015ರಲ್ಲಿ ಫ್ರಾನ್ಸ್ ದೇಶವು ಪ್ಲಾಸ್ಟಿಕ್ ಬಳಕೆ ಕುರಿತು ನಿಷೇಧ ಹೇರುವ ಕಾನೂನು ಜಾರಿಗೊಳಿಸಿತು. ಪ್ಲಾಸ್ಟಿಕ್‌ನಿಂದ ಮಾಡಿದ ಚೀಲಗಳು, ತಟ್ಟೆ, ಲೋಟ, ಚಮಚ, ಡಬ್ಬಿಗಳು, ಹೀಗೆ ವಿವಿಧ ಪ್ಲಾಸ್ಟಿಕ್ ವಸ್ತುಗಳ ಬಳಕೆಯನ್ನು ನಿಷೇಧಿಸಿದ ಪ್ರಪ್ರಥಮ ದೇಶ ಫ್ರಾನ್ಸ್ ಆಗಿದೆ.

2. 2008
ರಲ್ಲಿ ರುವಾಂಡಾ ದೇಶವು ಪ್ಲಾಸ್ಟಿಕ್ ಕೈಚೀಲಗಳನ್ನು ಸಂಪೂರ್ಣವಾಗಿ ನಿಷೇಧಿಸಿತು. ಇದರಂತೆ ದೇಶದಲ್ಲಿ ಯಾರಾದರೂ ಪ್ಲಾಸ್ಟಿಕ್ ಕೈಚೀಲಗಳನ್ನು ಬಳಸುವುದಾಗಲಿ, ಸಂಗ್ರಹಿಸುವುದಾಗಲಿ, ಸಾಗಾಣಿಕೆ ಮಾಡುವುದಾಗಲಿ ಕಂಡು ಬಂದರೆ ಅವರಿಗೆ ಭಾರಿ ಮೊತ್ತದ ದಂಡವನ್ನು ಸರ್ಕಾರಿ ಅಧಿಕಾರಿಗಳು ವಿಧಿಸಲಾರಂಭಿಸಿದರು. ಕೆಲವು ಪ್ರಕರಣಗಳಲ್ಲಿ ಇಂತಹವರಿಗೆ ಜೈಲು ಶಿಕ್ಷೆಯನ್ನು ನೀಡಲಾಯಿತು.


3. 2002
ರಲ್ಲಿ ಐರ್ಲೆಂಡ್ ದೇಶದಲ್ಲಿ ಪ್ಲಾಸ್ಟಿಕ್ ಚೀಲಗಳನ್ನು ಬಳಸುವುದಕ್ಕೆ ತೆರಿಗೆ ವಿಧಿಸಲು ಪ್ರಾರಂಭಿಸಿದರು. ಇದಾದ ಕೆಲವೇ ವಾರಗಳಲ್ಲಿ, ಅಷ್ಟೊಂದು ತೆರಿಗೆ ಪಾವತಿಸಿ, ಪ್ಲಾಸ್ಟಿಕ್ ಚೀಲಗಳನ್ನು ಖರೀದಿಸಿ ಬಳಸುವುದು ಬೇಡವೆಂದು ಸಾರ್ವಜನಿಕರು ನಿರ್ಧರಿಸಿದ ಕಾರಣ ಪ್ಲಾಸ್ಟಿಕ್ ಚೀಲಗಳ ಬಳಕೆ ಶೇಕಡಾ 94ರಷ್ಟು ಕಡಿಮೆಯಾಯಿತು. ಈಗ ಈ ದೇಶದಲ್ಲಿ ಪ್ಲಾಸ್ಟಿಕ್ ಚೀಲಗಳ ಬಳಕೆ ಸಂಪೂರ್ಣವಾಗಿ ನಿಷೇಧಿಸಲಾಗಿದೆ.


4. 2008
ರಲ್ಲಿ ಚೀನಾದಲ್ಲಿ ಅಂಗಡಿ ಮುಂಗಟ್ಟುಗಳಲ್ಲಿ ಗ್ರಾಹಕರಿಗೆ ಉಚಿತವಾಗಿ ಪ್ಲಾಸ್ಟಿಕ್ ಚೀಲಗಳನ್ನು ನೀಡುವುದನ್ನು ನಿಲ್ಲಿಸಿ, ಅಂತಹ ಚೀಲಗಳನ್ನು ಕೊಡಲು ತೆರಿಗೆ ವಿಧಿಸಲಾಯಿತು. ಕಟ್ಟುನಿಟ್ಟಾಗಿ ಈ ಕಾನೂನು ಜಾರಿಗೆ ತಂದ ಪರಿಣಾಮ 2 ವರ್ಷದಲ್ಲಿ ಪ್ಲಾಸ್ಟಿಕ್ ಚೀಲಗಳ ಬಳಕೆ ಶೇಕಡಾ 50ರಷ್ಟು ಕಡಿಮೆಯಾಗಿದೆ.100000 ಕೋಟಿ ಪ್ಲಾಸ್ಟಿಕ್ ಚೀಲಗಳ ಬಳಕೆಯನ್ನು ತಡೆಯುವಲ್ಲಿ ಯಶಸ್ವಿಯಾಗಿರುವ ಚೀನಾ, ತನ್ನ ದೇಶದಲ್ಲಿ ಉತ್ಪನ್ನವಾಗುವ ಪ್ಲಾಸ್ಟಿಕ್ ತ್ಯಾಜ್ಯದ ವಿರುದ್ಧ ದೊಡ್ಡ ಸಮರವನ್ನು ಸಾರಿದೆ.

ಥರ್ಮೋಕೂಲ್‌ನಿಂದ ಆರೋಗ್ಯ ಮತ್ತು ಪರಿಸರ ಹಾನಿ

ಪ್ಯಾಕಿಂಗ್, ತಟ್ಟೆ, ಲೋಟ, ಶಬ್ದ ನಿರೋಧಕಗಳು, ಮೀನು ಸಾಗಾಣಿಕೆ ಡಬ್ಬಗಳು, ಕೃತಕ ಛಾವಣಿ, ಕಲಾಕೃತಿಗಳು ಹೀಗೆ ಹಲವಾರು ಕಡೆ ಥರ್ಮೋಕೂಲ್ ಬಳಕೆಯಾಗುತ್ತಿದೆ.ಇದು ಹಗುರವಾಗಿರುವುದರಿಂದ, ಉತ್ಪಾದನಾ ವೆಚ್ಚ ಕಡಿಮೆಯಿರುವುದರಿಂದ, ಉತ್ತಮ ಶಬ್ದ ನಿರೋಧಕ ಗುಣಗಳನ್ನು ಹೊಂದಿರುವುದರಿಂದ ಜನಪ್ರಿಯವಾಗುತ್ತಿದೆ.ಆದರೆ ನಾವು ಬಳಸುವ ಥರ್ಮೋಕೂಲ್‌ನಿಂದ ಉಂಟಾಗುವ ಆರೋಗ್ಯ ಮತ್ತು ಪರಿಸರ ಹಾನಿಯ ಕುರಿತು ಜನಸಾಮಾನ್ಯರಲ್ಲಿ ಹೆಚ್ಚು ಜಾಗೃತಿ ಉಂಟಾಗಬೇಕಾಗಿದೆ.

ಪಾಲಿಸ್ಟೈರೀನ್ ಬಳಸಿ ಥರ್ಮೋಕೂಲ್ ಉತ್ಪಾದಿಸಲಾಗುತ್ತದೆ.ಒಮ್ಮೆ ಬಳಸಿದ ಥರ್ಮೋಕೂಲ್ ಅನ್ನು ಮತ್ತೆ ಥರ್ಮೋಕೂಲ್ ಉತ್ಪಾದನೆಯಲ್ಲಿ ಬಳಸಲು ದುಬಾರಿಯಾಗುತ್ತದೆ ಮತ್ತು ಪುನರ್ಬಳಕೆಯ ವಿಧಾನ ಕೂಡಾ ಸಂಕೀರ್ಣವಾಗಿದೆ.ನೈಸರ್ಗಿಕವಾಗಿ ಥರ್ಮೋಕೂಲ್ ತ್ಯಾಜ್ಯ ಸಂಸ್ಕರಣೆಯಾಗದ ಕಾರಣ, ವಿಶ್ವದಾದ್ಯಂತ ಹರಡಿರುವ ಟನ್‌ಗಟ್ಟಲೆ ಥರ್ಮೋಕೂಲ್ ತ್ಯಾಜ್ಯದಿಂದ ಪರಿಸರ ಮಾಲಿನ್ಯದ ಸಮಸ್ಯೆ ಉಂಟಾಗುತ್ತದೆ.
ಥರ್ಮೋಕೂಲ್‌ನಲ್ಲಿ ಕ್ಯಾನ್ಸರ್‌ಗೆ ಕಾರಣವಾಗುವ ಅಂಶಗಳಿರುವುದು ವರ್ಷ 2002, 2014, ಹೀಗೆ ವಿವಿಧ ಸಮಯದಲ್ಲಿ ಅಂತರಾಷ್ಟ್ರೀಯ ವಿಜ್ಞಾನಿಗಳು ನೆಡೆಸಿರುವ ಅಧ್ಯಯನಗಳಲ್ಲಿ ಬಹಿರಂಗವಾಗಿದೆ.ಧೀರ್ಘಕಾಲ ಥರ್ಮೋಕೂಲ್ ಉತ್ಪನ್ನಗಳನ್ನು ಬಳಸುವುದರಿಂದ ರಕ್ತ ಕ್ಯಾನ್ಸರ್ ಮೊದಲಾದ ಕ್ಯಾನ್ಸರ್‌ಗಳು ಬರುವ ಸಾಧ್ಯತೆ ಇದೆ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.


ಕೆಲವು ಕಡೆ ಥರ್ಮೋಕೂಲ್ ತ್ಯಾಜ್ಯವನ್ನು ಸುಡುವುದನ್ನು ಮಾಡಲಾಗುತ್ತಿದೆ.ಆದರೆ ಹೀಗೆ ಮಾಡುವುದರಿಂದ ಹಾನಿಕಾರಕ ಕ್ಲೋರೊ ಫ್ಲೋರೋ ಕಾರ್ಬನ್ (ಸಿ.ಎಫ್.ಸಿ) ಅನಿಲಗಳು ಬಿಡುಗಡೆಯಾಗುತ್ತವೆ.ಅದಲ್ಲದೆ ಥಮೋಕೂಲ್ ಪೂರ್ಣವಾಗಿ ಬೂದಿಯಾಗುವುದಿಲ್ಲ. ಡಾಂಬರಿನಂತಹ ವಸ್ತು ಕೊನೆಯಲ್ಲಿ ಉಳಿಯುತ್ತದೆ ಮತ್ತು ಕೆಟ್ಟ ದುರ್ನಾತವನ್ನು ಬೀರುತ್ತದೆ.ಆದ್ದರಿಂದ ಯಾವ ಕಾರಣಕ್ಕೂ ಥರ್ಮೋಕೂಲ್ ತ್ಯಾಜ್ಯವನ್ನು ಸುಡುವ ಕೆಲಸ ಮಾಡಬೇಡಿ ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.
ಥರ್ಮೋಕೂಲ್‌ನಿಂದ ಮಾಡಿದ ತಟ್ಟೆ, ಲೋಟ, ಚಮಚಗಳನ್ನು ಆಹಾರ, ಪಾನೀಯಗಳ ಸೇವನೆಗಾಗಿ ಬಳಸುವ ಪ್ರವೃತ್ತಿ ಹೆಚ್ಚಾಗುತ್ತಿದೆ.ಇವುಗಳನ್ನು ಉಪಯೋಗಿಸಿ, ಕಸದ ಬುಟ್ಟಿಗೆ ಬಿಸಾಡಿದರೆ ಆಯಿತು, ತೊಳೆಯ ಬೇಕು ಎನ್ನುವ ಸಮಸ್ಯೆ ಇಲ್ಲ ಎನ್ನುವುದು ಒಂದು ಕಾರಣವಿರಬಹುದು.ಆದರೆ ಇಂತಹ ಉತ್ಪನ್ನಗಳನ್ನು ಬಳಸಿ ಆಹಾರ, ಟೀ, ಕಾಫಿ ಮೊದಲಾದ ಪಾನೀಯಗಳನ್ನು ಸೇವಿಸಿದಾಗ ಥರ್ಮೋಕೂಲ್‌ನಲ್ಲಿರುವ ಹಾನಿಕಾರಕ ರಾಸಾಯನಿಕಗಳು ನಮ್ಮ ದೇಹವನ್ನು ಸೇರುತ್ತವೆ.ವಯಸ್ಕರಲ್ಲಿ ಸಂತಾನ ಸಮಸ್ಯೆಯನ್ನುಂಟು ಮಾಡಿದರೆ, ಮಕ್ಕಳಲ್ಲಿ ಇದು ಥೀರ್ಘಕಾಲಿನ ಮಾನಸಿಕ ಮತ್ತು ದೈಹಿಕ ಅನಾರೋಗ್ಯ ಸಮಸ್ಯೆಯನ್ನುಂಟು ಮಾಡಬಲ್ಲದು.ಕೆಲವರು ಥರ್ಮೋಕೂಲ್ ಡಬ್ಬಗಳಲ್ಲಿರುವ ಆಹಾರವನ್ನು, ಅದೇ ಡಬ್ಬದಲ್ಲಿರುವಂತೆ ಮತ್ತೆ ಬಿಸಿ ಮಾಡುತ್ತಾರೆ, ಇದರಿಂದಾಗಿ ಆರೋಗ್ಯಕ್ಕೆ ಹೆಚ್ಚು ಹಾನಿಯಾಗುತ್ತದೆ.


ಥರ್ಮೋಕೊಲ್ ಬಳಸಿ ಕಲಾಕೃತಿಗಳನ್ನು ತಯಾರಿಸಿವುದು, ಕೃತಕ ಛಾವಣಿ, ಶಬ್ದ ನಿರೋಧಕ ವ್ಯವಸ್ಥೆ ಮೊದಲಾದ ಕೆಲಸಗಳನ್ನು ಮಾಡುವವರು ಎಚ್ಚರಿಕೆ ವಹಿಸಬೇಕು.ಥರ್ಮೋಕೂಲ್ ಕತ್ತರಿಸುವಾಗ ಉಂಟಾಗುವ ಸೂಕ್ಷ್ಮಕಣಗಳು ಕಣ್ಣು, ಚರ್ಮ, ಶ್ವಾಸಕೋಶ, ಜೀರ್ಣಾಂಗ, ಲಿವರ್, ಮೂತ್ರಪಿಂಡ ಮತ್ತು ನರಮಂಡಲಗಳನ್ನು ಹಾನಿ ಮಾಡಿರುವ ಉದಾಹರಣೆಗಳಿವೆ.ಹೀಗಿರುವಾಗ ಥರ್ಮೋಕೂಲ್ ಉತ್ಪನ್ನಗಳನ್ನು ಉಪಯೋಗಿಸುವಾಗ, ಆಟಿಕೆಗಳನ್ನು ಮಕ್ಕಳಿಗೆ ಕೊಡುವಾಗ ಜಾಗ್ರತೆ ವಹಿಸಬೇಕು.
ಥರ್ಮೋಕೂಲ್ ಪರಿಸರ ಸ್ನೇಹಿಯಲ್ಲ. ಇದರಲ್ಲಿರುವ ಹೈಡ್ರೋಫ್ಲೋರೋ ಕಾರ್ಬನ್‌ಗಳು (ಹೆಚ್.ಎಫ್.ಸಿ), ಬೆನ್‌ಜೀನ್ ರಾಸಾಯನಿಕಗಳು ಆರೋಗ್ಯ ಮತ್ತು ಪರಿಸರಕ್ಕೆ ಹಾನಿಯುಂಟು ಮಾಡುತ್ತವೆ.ಇನ್ನು ಡೈಆಕ್ಸಿನ್‌ಗಳು ತಾಯಿ ಹೊಟ್ಟೆಯಲ್ಲಿರುವ ಭ್ರೂಣದ ಬೆಳವಣಿಗೆ, ರೋಗ ನಿರೋಧಕ ಶಕ್ತಿ ಮತ್ತು ಹಾರ್ಮೋನ್‌ಗಳಲ್ಲಿ ವ್ಯತ್ಯಯವನ್ನುಂಟು ಮಾಡುತ್ತವೆ.


ಥರ್ಮೋಕೂಲ್ ತ್ಯಾಜ್ಯ ಬಳಸಿ ಸಿ.ಡಿ.ಕವರ್‌ಗಳು.ಫೋಟೋ ಫ್ರೇಮ್‌ಗಳು, ಇತ್ಯಾದಿಗಳನ್ನು ತಯಾರಿಸುವ ಯೋಜನೆಗಳನ್ನು ಪುಣೆ, ಥಾಣೆ ಮೊದಲಾದ ಕಡೆಯ ಪುರಸಭೆ ಅಧಿಕಾರಿಗಳು ಪ್ರಾರಂಭಿಸಿದರು.ಪ್ರತಿದಿನ ಒಂದು ಟನ್ ಥರ್ಮೋಕೂಲ್ ತ್ಯಾಜ್ಯವನ್ನು ಈ ರೀತಿ ಪರಿವರ್ತಿಸಬಹುದು ಮತ್ತು ಹೀಗೆ ತಯಾರಾದ ಉತ್ಪನ್ನಗಳಿಂದ ಸ್ಥಳೀಯ ಸಂಸ್ಥೆಗೆ ಆದಾಯ ದೊರೆಯುತ್ತದೆ ಎಂದು ಹೇಳಲಾಯಿತು.ತ್ಯಾಜ್ಯ ಥರ್ಮೋಕೂಲ್ ಬಳಸಿ ಉದ್ಯಮಗಳು ಬಳಸುವ ಅಂಟು ತಯಾರಿಸಬಹುದು ಎಂದು ಕೆಲವರು ಪ್ರಾತ್ಯಕ್ಷಿಕೆಗಳ ಮೂಲಕ ತೋರಿಸಿದ್ದಾರೆ.ಆದರೆ ನಮ್ಮ ದೇಶದ ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಬೆಟ್ಟಗಳಷ್ಟು ಇರುವ ಥರ್ಮೋಕೂಲ್ ತ್ಯಾಜ್ಯವನ್ನು ವೈಜ್ಞಾನಿಕವಾಗಿ ಸಂಸ್ಕರಿಸದಿದ್ದರೆ, ಜನ ಮತ್ತು ಪರಿಸರದ ಮೇಲಾಗುವ ಹಾನಿ ಹೆಚ್ಚಾಗುತ್ತದೆ.ಸಾಧ್ಯವಾದಷ್ಟು ಥರ್ಮೋಕೂಲ್ ನಂತಹ ಉತ್ಪನ್ನಗಳ ಬಳಕೆಯನ್ನು ಸಾರ್ವಜನಿಕರು ಕಡಿಮೆ ಮಾಡುವುದರಿಂದ ಈ ಸಮಸ್ಯೆಯನ್ನು ಸ್ಪಲ್ಪ ಮಟ್ಟಿಗಾದರೂ ಕಡಿಮೆ ಮಾಡಲು ಸಾಧ್ಯವಿದೆ.ಉದಾಹರಣೆಗೆ ಬೆಂಗಳೂರಿನ ಮಾಹಿತಿ ತಂತ್ರಜ್ಞಾನ ಸಂಸ್ಥೆಯೊಂದರ ಉಪಹಾರ ಗೃಹಗಳಲ್ಲಿ ಥರ್ಮೋಕೂಲ್ ಲೋಟ, ತಟ್ಟೆ, ಡಬ್ಬ, ಚಮಚಗಳ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಕೊನೆಯ ಮಾತು

ಪ್ಲಾಸ್ಟಿಕ್ ತ್ಯಾಜ್ಯ ಬಳಸಿ ಇಂಧನ ತೈಲ ತಯಾರಿಕೆಯ ಅವಕಾಶವನ್ನು ಭಾರತ ಬಳಸಿಕೊಳ್ಳಬೇಕಾಗಿದೆ.ಇಂತಹ ಉದ್ಯಮಗಳನ್ನು ಖಾಸಗಿ ಕ್ಷೇತ್ರದಲ್ಲಿ ಸ್ಥಾಪಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ.ರಾಜ್ಯ ಸರ್ಕಾರ ಇಂತಹ ಉದ್ಯಮಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಿದರೆ, ಸ್ಥಳೀಯರಿಗೂ ಉದ್ಯೋಗವಕಾಶಗಳು ಹೆಚ್ಚಾಗುತ್ತವೆ ಮತ್ತು ಪ್ಲಾಸ್ಟಿಕ್ ತ್ಯಾಜ್ಯದ ಸಮಸ್ಯೆ ಕಡಿಮೆಯಾಗಲು ಸಾಧ್ಯವಿದೆ.

Thursday, February 6, 2020

ಪ್ರತಿದಿನ 3GB ಡೇಟಾಗೆ ಬಿಎಸ್ಎನ್ಎಲ್‌......

ದೇಶದ ಟೆಲಿಕಾಂ ವಲಯವು ಸದ್ಯ ಪೈಪೋಟಿಯಲ್ಲಿದ್ದು, ಖಾಸಗಿ ಟೆಲಿಕಾಂಗಳು ಚಂದಾದಾರರನ್ನು ಹೆಚ್ಚಿಸಿಕೊಳ್ಳಲು ಹೆಣಗಾಡುತ್ತಿವೆ. ಈ ನಡುವೆ ಸರ್ಕಾರಿ ಸ್ವಾಮ್ಯದ ಬಿಎಸ್ಎನ್ಎಲ್ ಟೆಲಿಕಾಂ ಖಾಸಗಿ ಟೆಲಿಕಾಂಗಳಿಗೆ ನೇರವಾಗಿ ಟಕ್ಕರ್ ನೀಡುತ್ತಾ ಸಾಗಿದೆ. ಬಿಎಸ್ಎನ್ಎಲ್ ಇತ್ತೀಚಿನ ಹೊಸ ಪ್ರೀಪೇಡ್‌ ಪ್ಲ್ಯಾನ್‌ಗಳ ಪ್ರಯೋಜನಗಳನ್ನು ನೋಡಿ ಖಾಸಗಿ ಟೆಲಿಕಾಂಗಳು ದಂಗಾಗಿ ಹೋಗಿವೆ. ಏಕೆಂದರೇ ಬಿಎಸ್ಎನ್ಎಲ್ ಹೆಚ್ಚು ವ್ಯಾಲಿಡಿಟಿ ಮತ್ತು ಅಧಿಕ ಡೇಟಾ ಪ್ಲ್ಯಾನ್‌ಗಳನ್ನು ಪರಿಚಯಿಸಿದೆ.ಬಿಎಸ್ಎನ್ಎಲ್ ನೆಟವರ್ಕ ಸರಿಯಿಲ್ಲ ಎಂದು ಮೂಗು ಮುರಿಯುವವರೇ ಹೆಚ್ಚು, ಆದರೆ ಇರುವುದರಲ್ಲಿ ಬಿಎಸ್ಎನ್ಎಲ್ ನೆಟವರ್ಕ ಎಷ್ಟೋ ಉತ್ತಮ ಅಂತಾ ಅಪ್ಪಿಕೊಳ್ಳುವ ಗ್ರಾಹಕರು ಇದ್ದಾರೆ. ಬಿಎಸ್ಎನ್ಎಲ್ ಇದೀಗ 4G ನೆಟವರ್ಕಗೆ ಲಗ್ಗೆ ಇಟ್ಟಿದ್ದು, ಸದ್ಯದಲ್ಲಿಯೇ ದೇಶದಾದ್ಯಂತ ಎಲ್ಲಾ ಟೆಲಿಕಾಂ ಸರ್ಕಲ್‌ಗಳಲ್ಲಿ ಬಿಎಸ್ಎನ್ಎಲ್ 4G ಸೇವೆ ಲಭ್ಯವಾಗಲಿದೆ. ಇನ್ನು ಬಹುತೇಕ ಗ್ರಾಹಕರು ಬಯಸುವ ಅಧಿಕ ಡೇಟಾ ಮತ್ತು ದೀರ್ಘ ವ್ಯಾಲಿಡಿಟಿ ಸೌಲಭ್ಯಗಳಿರುವ ಪ್ಲ್ಯಾನ್‌ಗಳನ್ನು ಬಿಎಸ್ಎನ್ಎಲ್ ಪರಿಚಯಿಸಿದ್ದು, ಆ ಪ್ಲ್ಯಾನ್‌ಗಳು ಈಗಾಗಲೇ ಚಾಲ್ತಿಯಲ್ಲಿವೆ. ಹಾಗಾದರೆ ಬಿಎಸ್ಎನ್ಎಲ್ ಟೆಲಿಕಾಂನ ದೀರ್ಘಾವಧಿಯ ಪ್ರೀಪೇಡ್‌ ಪ್ಲ್ಯಾನ್‌ಗಳು ಯಾವುವು? ಏನೆಲ್ಲಾ ಪ್ರಯೋಜನಗಳನ್ನು ಒಳಗೊಂಡಿದೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.


ಬಿಎಸ್ಎನ್ಎಲ್ ಪ್ರೀಪೇಡ್‌ ಪ್ಲ್ಯಾನ್‌

ಳೆದ ಡಿಸೆಂಬರ್‌ನಲ್ಲಿ ಖಾಸಗಿ ಟೆಲಿಕಾಂಗಳು ತಮ್ಮ ಪ್ರೀಪೇಡ್‌ ಬೆಲೆಯಲ್ಲಿ ಏರಿಕೆ ಮಾಡಿದವು. ಬಿಎಸ್‌ಎನ್ಎಲ್ ಸಹ ಬೆಲೆ ಹೆಚ್ಚಳ ಮಾಡುವ ಮಾತುಗಳು ಕೇಳಿಬಂದಿದ್ದವು ಆದರೆ ಯಾವುದೇ ದರ ಏರಿಕೆ ಮಾಡಲಿಲ್ಲ. ಬಿಎಸ್ಎನ್ಎಲ್ ತನ್ನ ಜನಪ್ರಿಯ ಪ್ರೀಪೇಡ್‌ ಪ್ಲ್ಯಾನ್‌ಗಳಲ್ಲಿ ಮತ್ತಷ್ಟು ಹೆಚ್ಚುವರಿ ಪ್ರಯೋಜನಗಳನ್ನು ನೀಡುವ ಯೋಜನೆಗಳನ್ನು ಮಾಡಿತು. ಅವುಗಳಲ್ಲಿ ವಾರ್ಷಿಕ ಪ್ರೀಪೇಡ್ರ್ ಪ್ಲ್ಯಾನ್ ಹೆಚ್ಚು ಪ್ರಯೋಜನಗಳನ್ನು ಪಡೆದಿದೆ.

ಬಿಎಸ್ಎನ್ಎಲ್ 1,999ರೂ ಪ್ಲ್ಯಾನ್

ಬಿಎಸ್ಎನ್ಎಲ್ 1,999ರೂ ಪ್ಲ್ಯಾನ್ ಇದು ವಾರ್ಷಿಕ ಪ್ರೀಪೇಡ್ ಯೋಜನೆ ಆಗಿದೆ. ಒಂದು ವರ್ಷದ 365 ದಿನಗಳ ವ್ಯಾಲಿಡಿಟಿಯನ್ನು ಪಡೆದಿರುವ ಈ ಪ್ಲ್ಯಾನ್ ದೀರ್ಘಾವಧಿಯ ವ್ಯಾಲಿಡಿಟಿ ಮತ್ತು ಅಧಿಕ ಡೇಟಾ ಬಯಸುವ ಗ್ರಾಹಕರಿಗೆ ಉತ್ತಮ. ಇನ್ನು ಈ ಪ್ಲ್ಯಾನ್ ಪ್ರತಿದಿನ 3GB ಡೇಟಾ ಸೌಲಭ್ಯ ಒದಗಿಸುತ್ತದೆ. ಇದರೊಂದಿಗೆ ಪ್ರತಿದಿನ 250 ನಿಮಿಷಗಳ ಉಚಿತ ವಾಯಿಸ್‌ ಕರೆಗಳ ಸೌಲಭ್ಯವನ್ನು ಪಡೆದಿದೆ. ಹಾಗೂ ಪ್ರತಿದಿನ 100 ಎಸ್ಎಮ್ಎಸ್‌ಗಳ ಪ್ರಯೋಜನಗಳು ಸೇರಿವೆ. ಇದರೊಂದಿಗೆ ಬಿಎಸ್ಎನ್ಎಲ್ ಟ್ಯೂನ್ ಚಂದಾದಾರಿಕೆ ಸೇವೆ ಪಡೆದಿದೆ.

ಬಿಎಸ್ಎನ್ಎಲ್ 1,699ರೂ ಪ್ಲ್ಯಾನ್

ಬಿಎಸ್ಎನ್ಎಲ್ 1,699ರೂ ಪ್ಲ್ಯಾನ್ ಸಹ ಒಂದು ವಾರ್ಷಿಕ ಅವಧಿಯ ಪ್ರೀಪೇಡ್ ಯೋಜನೆ ಆಗಿದ್ದು, 365 ದಿನಗಳ ವ್ಯಾಲಿಡಿಟಿಯನ್ನು ಪಡೆದಿದೆ. ಈ ಅವಧಿಯಲ್ಲಿ ಪ್ರತಿದಿನ 2GB ಡೇಟಾ ಸೌಲಭ್ಯ ಒದಗಿಸುವ ಜೊತೆಗೆ ಪ್ರತಿದಿನ 250 ನಿಮಿಷಗಳ ಉಚಿತ ವಾಯಿಸ್‌ ಕರೆಗಳ ಸೌಲಭ್ಯವನ್ನು ನೀಡುತ್ತದೆ. ಹಾಗೂ ಪ್ರತಿದಿನ 100 ಎಸ್ಎಮ್ಎಸ್‌ಗಳ ಪ್ರಯೋಜನಗಳು ಸೇರಿವೆ. ಇದರೊಂದಿಗೆ ಬಿಎಸ್ಎನ್ಎಲ್ ಟ್ಯೂನ್ ಚಂದಾದಾರಿಕೆ ಸೇವೆ ಪಡೆದಿದೆ.

3GB ಡೇಟಾ ಯಾವ ಪ್ಲ್ಯಾನ್ ಬೆಸ್ಟ್?

ಸ್ಮಾರ್ಟ್‌ಫೋನಿನಲ್ಲಿ ಇಂದಿನ ಪ್ರತಿಯೊಂದು ಕೆಲಸಕ್ಕೂ ಇಂಟರ್ನೆಟ್ ಅಗತ್ಯ ಇದೆ. ಹೀಗಾಗಿ ಪ್ರತಿದಿನ ಅಧಿಕ ಇಂಟರ್ನೆಟ್ ಅವಶ್ಯಕತೆ ಬೇಕಾಗುತ್ತದೆ. ಬಹುತೇಕರು 2GB ಡೇಟಾ ಮತ್ತು 3GB ಡೇಟಾ ಸೌಲಭ್ಯವನ್ನು ಬಯಸುತ್ತಾರೆ. ಅಧಿಕ ಡೇಟಾ ಪ್ರಯೋಜನ ಬೇಕಿದ್ದರೇ ಸದ್ಯ ಬಿಎಸ್ಎನ್ಎಲ್‌ನ 1999ರೂ ಹಾಗೂ 1699ರೂ ಪ್ರೀಪೇಡ್‌ ಪ್ಲ್ಯಾನ್‌ಗಳು ಹೆಚ್ಚು ಗಮನ ಸೆಳೆಯುತ್ತವೆ. ಏಕೆಂದರೇ ಜಿಯೋ, ಏರ್‌ಟೆಲ್ ಮತ್ತು ವೊಡಾಫೋನ್‌ ವಾರ್ಷಿಕ ಪ್ರೀಪೇಡ್‌ ಪ್ಲ್ಯಾನ್‌ಗಳಿಗಿಂತ ಬಿಎಸ್‌ನ್ಎಲ್ ಪ್ಲ್ಯಾನ್ ಯೋಗ್ಯ ಅನಿಸುತ್ತದೆ.

ಅಂಡರ್ 19 ವಿಶ್ವಕಪ್ ಕ್ರಿಕೆಟ್ : ಫೈನಲ್ ನಲ್ಲಿ ಹಾಲಿ ಚಾಂಪಿಯನ್ ಭಾರತದ ಜೊತೆ ಸೆಣೆಸಲಿರುವ ಬಾಂಗ್ಲಾ.................

ಪೊಚೆಫ್‌ಸ್ಟ್ರೂಮ್ಅಂಡರ್ 19 ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಅದಾಗಲೇ ಫೈನಲ್ ಪ್ರವೇಶಿಸಿದ್ದು ಇದೀಗ ನ್ಯೂಜಿಲ್ಯಾಂಡ್ ವಿರುದ್ಧ ಗೆದ್ದು ಬೀಗಿರುವ ಬಾಂಗ್ಲಾದೇಶ ಭಾರತದ ಜೊತೆ ಚಾಂಪಿಯನ್ ಪಟ್ಟಕ್ಕಾಗಿ ಸೆಣಸಾಡಲಿದೆ.
ನ್ಯೂಜಿಲ್ಯಾಂಡ್ ವಿರುದ್ಧ ನಡೆದಿದ್ದ ಸೆಮಿಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶ 6 ವಿಕೆಟ್ ಗಳಿಂದ ಭರ್ಜರಿ ಗೆಲುವು ಸಾಧಿಸಿ ಫೈನಲ್ ಪ್ರವೇಶಿಸಿದೆ. ಫೆಬ್ರವರಿ 9  ರಂದು ಪೊಚೆಫ್‌ಸ್ಟ್ರೂಮ್ ನಲ್ಲಿ ಫೈನಲ್ ಪಂದ್ಯ ನಡೆಯಲಿದೆ.
ಸೆಮಿಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ನ್ಯೂಜಿಲ್ಯಾಂಡ್ ನಿಗದಿತ ಓವರ್ ನಲ್ಲಿ 8 ವಿಕೆಟ್ ನಷ್ಟಕ್ಕೆ 211 ರನ್ ಪೇರಿಸಿತ್ತು. 212 ರನ್ ಗುರಿ ಬೆನ್ನಟ್ಟಿದ ಬಾಂಗ್ಲಾದೇಶ ಇನ್ನು 35 ಎಸೆತಗಳು ಬಾಕಿ ಇರುವಂತೆ ಬಾಂಗ್ಲಾ ಗೆಲುವಿನ ನಗೆ ಬೀರಿತು.ಈ ಮೂಲಕ ಬಾಂಗ್ಲಾದೇಶ ಮೊದಲ ಬಾರಿಗೆ ಫೈನಲ್ ಪ್ರವೇಸಿಶಿದ್ದು ಹಾಲಿ ಚಾಂಪಿಯನ್ ಬಲಿಷ್ಠ ಭಾರತ ತಂಡವನ್ನು ಎದುರಿಸಲಿದೆ.


ಎಚ್ಚರ..ವಿಶ್ವವ್ಯಾಪ್ತಿಯಾಗುತ್ತಿದೆ ಡೆಡ್ಲಿ 'ಕೊರೊನಾ ವೈರಸ್'.!


ಬೀಜಿಂಗ್‌: ಚೀನಾದಲ್ಲಿ ಹಬ್ಬಿರುವ ಮಹಾಮಾರಿಗೆ ಜೀವ ಕಳೆದುಕೊಳ್ಳುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕೊರೊನಾ ಸೋಂಕಿಗೆ ಚೀನಾದಲ್ಲಿ ಬಲಿಯಾದವರ ಸಂಖ್ಯೆ ಸದ್ಯ 563ಕ್ಕೆ ತಲುಪಿದೆ.ವರದಿ ಪ್ರಕಾರ ಮಂಗಳವಾರ 73 ಮಂದಿ ಮೃತಪಟ್ಟಿದ್ದು, 3,887 ಮಂದಿ ಹೊಸ ಸೋಂಕಿತರು ಪತ್ತೆಯಾಗಿದ್ದಾರೆ.
ಎಲ್ಲೆಲ್ಲಿ ಪ್ರಕರಣ ಪತ್ತೆ..?
ಶ್ರೀಲಂಕಾದಲ್ಲಿ 1, ಮಲೇಷ್ಯಾದಲ್ಲಿ 14 ಕಾಂಬೋಡಿಯಾದಲ್ಲಿ 1 ಹಾಗೂ ವಿಯೆಟ್ನಾನಲ್ಲಿ 10 ಪ್ರಕರಣಗಳು ವರದಿಯಾಗಿದ್ರೆ, ಥಾಯ್ಲೆಂಡ್‌ನಲ್ಲಿ 25 ಪ್ರಕರಣಗಳು ಪತ್ತೆಯಾಗಿದೆ, ಸಿಂಗಾಪುರದಲ್ಲಿ 28 ಪ್ರಕರಣಗಳು ವರದಿಯಾಗಿದ್ರೆ, ಜರ್ಮನಿಯಲ್ಲಿ 12 ಪ್ರಕರಣ, ನೇಪಾಳದಲ್ಲಿ 1 ಪ್ರಕರಣ ಹಾಗೂ ಭಾರತದಲ್ಲಿ ಈವರೆಗೆ 3 ಪ್ರಕರಣ ವರದಿಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಇನ್ನೂ, ಕೆನಡಾ ದೇಶದಲ್ಲಿ 5 ಕೊರೊನಾ ಸೋಂಕಿತರು ಪತ್ತೆಯಾಗಿದ್ದಾರೆ. ಅಮೆರಿಕದಲ್ಲಿ 15 ಮಂದಿಗೆ ಕೊರೊನಾ ತಗುಲಿದ್ದು, ಫ್ರಾನ್ಸ್‌ನಲ್ಲಿ 6 ಪ್ರಕರಣ, ಸ್ಪೇನ್‌ನಲ್ಲಿ 1 ಪ್ರಕರಣ ಹಾಗೂ ಯುಎಇನಲ್ಲಿ 5 ಪ್ರಕರ ಪತ್ತೆಯಾಗಿದೆ.. ಬೆಲ್ಜಿಯಂನಲ್ಲಿ 1 ಬ್ರಿಟನ್‌ನಲ್ಲಿ 2 ಪ್ರಕರಣ, ಫಿನ್ಲೆಂಡ್‌ನಲ್ಲಿ 1 ಪ್ರಕರಣ, ಪತ್ತೆಯಾಗಿದೆ. ಚೀನಾದಲ್ಲಿ ಹಬ್ಬಿರುವ ಮಹಾಮಾರಿಗೆ ಜೀವ ಕಳೆದುಕೊಳ್ಳುತ್ತಿರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಇಡೀ ವಿಶ್ವವನ್ನೇ ತಲ್ಲಣಗೊಳಿಸಿದೆ.

Saturday, February 1, 2020

💼ಕೇಂದ್ರ ಬಜೆಟ್ 2020.💼

ಬೆಲೆ ಏರಿಕೆ
ಆಮದು ಪಾದರಕ್ಷೆ ಹಾಗೂ ಪೀಠೋಪಕರಣದ ಮೇಲೆ ಸೀಮಾಸುಂಕ ಏರಿಕೆ.
ಆಮದು ವೈದ್ಯಕೀಯ ಉಪಕರಣಗಳ ಮೇಲೆ ಆರೋಗ್ಯ ಸೆಸ್ ಏರಿಕೆ.
ಆಮದು ಗೋಡೆ ಫ್ಯಾನ್ಸ್ ಮೇಲೆ ಸೀಮಾಸುಂದ ಶೇ 7.5 ರಿಂದ ಶೇ 20ರಷ್ಟು ಏರಿಕೆ.
ಟೇಬಲ್ ವೇರ್, ಕಿಚನ್ ವೇರ್ (ಚೀನಾ ಸೆರಾಮಿಕ್ಸ್ ಅಥವಾ ಪೊರ್ಸಿಲಿನ್ ಪದಾರ್ಥ), ಉಕ್ಕು, ತಾಮ್ರ ಮೇಲಿನ ಸುಂಕ ಶೇ 20ಕ್ಕೇರಿಕೆ.
ಕಾರಿನ ಬಿಡಿ ಭಾಗಗಳು, ಕ್ಯಾಟಲಿಸ್ಟ್ ಕನ್ವರ್ಟರ್, ಸುಗಂಧ ದ್ರವ್ಯ ಹಾಗೂ ಟಾಯ್ಲೆಟ್ ಸ್ಪ್ರೇ, ಡಿಯೋಡ್ರಂಟ್, ಶೇವಿಂಗ್ ಕ್ರೀಮ್ ಹಾಗೂ ಸಂಬಂಧಿಸಿದಂತ ಉತ್ಪನ್ನಗಳು.

ಸಿಗರೇಟು, ತಂಬಾಕು ಉತ್ಪನ್ನಗಳ ಮೇಲೆ ಅಬಕಾರಿ ಸುಂಕ ಏರಿಕೆ ಮಾಡಲಾಗಿದೆ.


ಬೆಲೆ ಇಳಿಕೆ
ನ್ಯೂಸ್ ಪ್ರಿಂಟ್, ಹಗುರವಾದ ಕೋಟೆಡ್ ಮೇಲೆ 5% ರಷ್ಟು ಸುಂಕ ಇಳಿಕೆ.
ಜವಳಿ ಹಾಗೂ ಪ್ಲಾಸ್ಟಿಕ್ ಉತ್ಪನ್ನ ತಯಾರಿಕೆಯಲ್ಲಿ ಬಳಸುವ ಶುದ್ದೀಕರಿಸಿದ ತೆರೆಫಾಥಾಲಿಕ್ ಆಮ್ಲದ ಮೇಲಿನ ಸುಂಕ ಕಡಿತ.
ಕೃಷಿ ಮತ್ತು ಪಶು ಆಧಾರಿತ ಉತ್ಪನ್ನ, ತುನಾ ಬೈಟ್, ಸ್ಕಿಮ್ಡ್ ಹಾಲು ಕೇಲವು ಆಲ್ಕೊಹಾಲ್ ಯುಳ್ಳ ಪೇಯಗಳು, ಸೋಯಾ ಫೈಬರ್ ಗಳು ಸೋಯಾ ಪ್ರೋಟಿನ್ ಮೇಲಿನ ಸೀಮಾ ಸುಂಕ ರದ್ದು.
ಆದಾಯ ತೆರಿಗೆ ವಿನಾಯ್ತಿ
ಆದಾಯ ಮಿತಿ ಮತ್ತು ತೆರಿಗೆ.
5 ಲಕ್ಷ 0%
5 ರಿಂದ 7.5 ಲಕ್ಷ 10%
7.5 ರಿಂದ 10 ಲಕ್ಷ 15%
10 ರಿಂದ 12.5 ಲಕ್ಷ 20%
12.5 ರಿಂದ 15 ಲಕ್ಷ 25%
15 ಲಕ್ಷಕ್ಕೂ ಅಧಿಕ 30%

ಕೀವಿಸ್ ನಲ್ಲಿ ವಿಲಿಯಮ್ಸನ್ ಬಳಗದ ಕಿವಿ ಹಿಂಡಿದ ಬ್ಲೂ ಬಾಯ್ಸ್

ಸತತ 2ನೇ ಸೂಪರ್ ಒವರ್ ಗೆ ಸಾಕ್ಷಿಯಾದ ಪಂದ್ಯದಲ್ಲಿ ಪ್ರವಾಸಿ ಭಾರತ ನ್ಯೂಜಿಲೆಂಡ್ ವಿರುದ್ದ ರೋಚಕ ಗೆಲುವು ಸಾಧಿಸಿದೆ.

ನ್ಯೂಜಿಲೆಂಡ್ ನ ಸ್ಕೈ ಕ್ರೀಡಾಂಗಣದಲ್ಲಿ ನಡೆದ 4ನೇ ಟಿ20 ಪಂದ್ಯದಲ್ಲಿ ಟಾಸ್ ಗೆದ್ದು ವಿಲಿಯಮ್ಸನ್ ಭಾರತಕ್ಕೆ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಒದಗಿಸಿದರು. ಭಾರತ ನಿಗದಿತ 20 ಒವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 165 ರನ್ ಗಳ ಸಾಧರಣ ಮೊತ್ತ ಪೇರಿಸಿತು.

ಪ್ರಥಮ ಇನ್ನಿಂಗ್ಸ್ ಆರಂಭಿಸಿದ ಪ್ರವಾಸಿಗರು ಆರಂಭದಲ್ಲೇ ಮುಗ್ಗರಿಸಿದರು, ಕನ್ನಡಿಗ ಕೆ.ಎಲ್.ರಾಹುಲ್ ಒಂದೆಡೆ ಕ್ರೀಸ್ ನಲ್ಲಿ ಸುರಕ್ಷಿತವಾಗಿದ್ದರೆ ಉಳಿದವರು ಅಲ್ಪ ಮೊತ್ತಕ್ಕೆ ಔಟಾಗಿ ಫೆವಿಲಿಯನ್ ಸೇರಿಕೊಂಡರು.

ತಂಡ 84 ರನ್ ಗಳಿಸುವಸ್ಟರಲ್ಲಿ ರಾಹುಲ್ (39) ಕೂಡ ಸೋದಿ ಬೌಲಿಂಗ್ ನಲ್ಲಿ ಸ್ಯಾಂಟ್ನರ್ ಗೆ ಕ್ಯಾಚಿತ್ತು ನಿರ್ಗಮಿಸಿದರು. 
ತದನಂತರ ಮನೀಷ್ ಪಾಂಡೆ (50) ಬಿರುಸಿನ ಆಟವಾಡಿ ಆಕರ್ಷಕ ಅರ್ಧಶತಕ ಗಳಿಸಿ ಭಾರತವನ್ನು 150 ರ ಗಡಿ ದಾಟುವಂತೆ ಮಾಡಿದರು.

ನ್ಯೂಜಿಲೆಂಡ್ ಪರ ಸೋದಿ 3 ವಿಕೆಟ್ ಪಡೆದು ಮಿಂಚಿದರೆ ಬೆನೆಟ್ಟ್ 2 ವಿಕೆಟ್ ಗಳಿಸಿದರು.
165 ರನ್ ಗಳ ಸಾಧರಣ ಮೊತ್ತ ಬೆನ್ನತ್ತಿದ ಅತಿಥೇಯರು ಆರಂಭದಲ್ಲಿ ಗುಪ್ಟಿಲ್ ವಿಕೆಟ್ ಕಳೆದುಕೊಂಡರೂ ಕೂಡ ಮುನ್ರೊ ಮತ್ತು ಸೈಫರ್ಟ 74 ರನ್ ಗಳ ಬೃಹತ್ ಜೊತೆಯಾಟ ಆಡಿದರು. ಮುನ್ರೊ 64 ರನ್ ಗಳಿಸಿ ರನೌಟ್ ಗೆ ಬಲಿಯಾದರೆ ಸೈಫರ್ಟ ಕೂಡ 57 ರನ್ ಗಳಿಸಿ ರನೌಟಾದರು.
ತದನಂತರ ರಾಸ್ ಟೇಲರ್ 24 ರನ್ ಗಳಿಸಿ ತಂಡವನ್ನು 150 ರ ಗಡಿ ದಾಟಿಸಿದರೂ ಗೆಲುವಿನ ಹೊಸ್ತಿಲಲ್ಲಿ ಫೆವಿಲಿಯನ್ ಹಾದಿ ಹಿಡಿದರು. 

ಅಂತಿಮ ಒವರ್ ನಲ್ಲಿ ಮಿಂಚಿದ ಶಾರ್ದೂಲ್ ಠಾಕೂರ್ ಪಂದ್ಯ ಟೈ ಆಗುವಂತೆ ಮಾಡಿದರು.
ಭಾರತ ಪರ ಠಾಕೂರ್ 2, ಚಾಹಲ್ ಮತ್ತು ಜಸ್ಪ್ರೀತ್ ಬೂಮ್ರಾ 1 ವಿಕೆಟ್ ಪಡೆದುಕೊಂಡರು.
ಸೂಪರ್ ಒವರ್ ನಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲ್ಯಾಂಡ್ ಕೇವಲ 13 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಗುರಿ ಬೆನ್ನಟ್ಟಿದ ಭಾರತ ಇನ್ನೂ ಒಂದು ಎಸೆತ ಬಾಕಿ ಇರುವಾಗಲೇ ಗೆಲುವಿನ ನಗೆ ಬೀರಿತು.
ಈ ಗೆಲುವಿನೊಂದಿಗೆ ಭಾರತ ಸರಣಿಯಲ್ಲಿ 4-0 ಇಂದ ಮುನ್ನಡೆ ಸಾಧಿಸಿತು. 2 ವಿಕೆಟ್ ಪಡೆದಿದ್ದ ಠಾಕೂರ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.