Thursday, February 27, 2020

ಅಡಿಕೆ ಕೊಳೆರೋಗಕ್ಕೆ ಅಗರವುಡ್ ಪರ್ಯಾಯ ಬೆಳೆ - ಕೆ.ಆರ್.ವೆಂಕಟೇಶ್

ಮಲೆನಾಡಿನಲ್ಲಿ ಅಡಕೆ ಬೆಳೆ ಸಂಕಷ್ಟದಲ್ಲಿರುವುದರಿಂದ ಪರ್ಯಾಯ ಬೆಳೆಯಾಗಿ ಅಗರ್‍ವುಡ್ ಬೆಳೆಯನ್ನು ಬೆಳೆಯುವುದು ಆಶಾದಾಯಕವಾಗಿದೆ ಎಂದು ತಾಪಂ ಸದಸ್ಯ ಕೆ.ಆರ್.ವೆಂಕಟೇಶ್ ಹೇಳಿದರು.

ಅಡ್ಡಗದ್ದೆ ಗ್ರಾಪಂ ಯ ನೇತ್ರವಳ್ಳಿ ನಾಗಾನಂದರವರ ತೋಟದಲ್ಲಿ ಮಂಗಳವಾರ ಪ್ರಕೃತಿ ರೈತ ಮಿತ್ರ ಕೂಟ ಏರ್ಪಡಿಸಿದ್ದ ಅಗರ್‍ವುಡ್ ಬೆಳೆಯ ಕ್ಷೇತ್ರೋತ್ಸವದಲ್ಲಿ ಮಾತನಾಡಿದರು. ಅಗರ್‍ವುಡ್ ಮಲೆನಾಡಿನ ಪರಿಸರಕ್ಕೆ ಹೊಂದಿಕೊಂಡು ಬೆಳೆಯುವ ಮರವಾಗಿದ್ದು,ಸುಲಭವಾಗಿ ಬೆಳೆಯುತ್ತದೆ.ರೈತರು ತಮ್ಮ ತೋಟದ ಸುತ್ತಲೂ,ಮುಖ್ಯ ಬೆಳೆಯಾಗಿಯೂ ಬೆಳೆಯಬಹುದಾಗಿದೆ ಎಂದರು.

ಧರ್ಮೇಂದ್ರಕುಮಾರ್ ಮಾತನಾಡಿ,ಭಾರತದ ಅಗರ್‍ವುಡ್ ಸುಗಂಧ ಒಳ್ಳೆಯ ಗುಣಮಟ್ಟದಾಗಿದ್ದು,ಹೆಚ್ಚು ಬೆಲೆ ಹೊಂದಿದ್ದು,ಮೊದಲ ಸ್ಥಾನದಲ್ಲಿದೆ. ಈ ಬೆಳೆ ಬೆಳೆಯುತ್ತಿರುವ ಕಾಂಬೋಡಿಯಾ,ಜಾವಾ,ಮಲೇಷಿಯಾ ಮುಂತಾದ ದೇಶಗಳು ನಂತರದ ಸ್ಥಾನದಲ್ಲಿದೆ.ದೇಶದ ಅಗರ್‍ವುಡ್ ಸುಗಂಧ ದ್ರವ್ಯಕ್ಕೆ ಹೆಚ್ಚು ಬೇಡಿಕೆ ಇದೆ ಎಂದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ರೈತ ಮಿತ್ರ ಕೂಟದ ಪ್ರತಿನಿಧಿ ನಾಗಾನಂದ ಅಗರ್‍ವುಡ್ ಕೃಷಿಯಲ್ಲಿ ಇನಾಕ್ಯುಲೇಷನ್ ಪ್ರಮುಖ ಘಟ್ಟವಾಗಿದೆ.16 ವಿವಿಧ ಇನಾಕ್ಯುಲೇಷನ್ ತಂತ್ರಜ್ಞಾನವನ್ನು ಇದೀಗ ಅಭಿವೃದ್ಧಿಪಡಿಸಲಾಗಿದೆ. ಇದರಿಂದ ದ್ರವ್ಯ ಉತ್ಪಾದನೆಗೆ ಅನುಕೂಲವಾಗಿದೆ.ರೈತರು ಹೆಚ್ಚಿನ ಮಾಹಿತಿ ಪಡೆದುಕೊಳ್ಳಲು ಅನುಕೂಲವಾಗುವಂತೆ ಕ್ಷೇತ್ರೋತ್ಸವ ಆಯೋಜಿಸಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ತಾಪಂ ಸದಸ್ಯ ರಾಮಕೃಷ್ಣರಾವ್,ಕೆ.ಆರ್.ಅವಿನಾಶ್,ಹೆಬ್ಬಿಗೆ ಕೃಷ್ಣಮೂರ್ತಿ,ಅರುಣಾಚಲಾ,ಶ್ರೀಧರರಾವ್,ಮಲ್ಲೇಶ್,ವಿಜಯ ಉಪಸ್ಥಿತರಿದ್ದರು.

0 Comments:

Post a Comment

Subscribe to Post Comments [Atom]

<< Home