ಮಳೆಗಾಲದಲ್ಲಿ ದ್ವೀಪವಾಗುವ ಪರಿಸ್ಥಿತಿಯಲ್ಲಿ ಕಗ್ಗುಂಡಿ! ಕಳಸ ಹೋಬಳಿಯ ಇಡಕಣಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಬರುವ ಊರು.
ಇದು ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕಳಸ ಹೋಬಳಿಯ ಇಡಕಣಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಕಗ್ಗುಂಡಿ ಎಂಬ ಊರು. ಕಳೆದ ಮಳೆಗಾಲದಲ್ಲಿ ಸುರಿದ ಭಾರಿ ಮಳೆಯಿಂದಾಗಿ ಈ ಭಾಗದ ಹಲವು ಪ್ರದೇಶಕ್ಕೆ ಅಪಾರ ಹಾನಿಯಾಗಿತ್ತು. ಅದರಲ್ಲೂ ಮುಖ್ಯವಾಗಿ ನಗರಕ್ಕೆ ಸಂಪರ್ಕಿಸುವ ರಸ್ತೆಗೆ ಸಂಪೂರ್ಣ ಹನಿಯಾಗಿ ಆ ರಸ್ತೆ ಓಡಾಡಲು ಯೋಗ್ಯವಾಗದ ರೀತಿಯಲ್ಲಿ ಇತ್ತು.ಮಕ್ಕಳು ಶಾಲೆಗೆ ಹೋಗಬೇಕಾದ ಕಾರಣ ಮತ್ತು ಅಲ್ಲಿನ ನಿವಾಸಿಗಳು ತುರ್ತುಪರಿಸ್ಥಿತಿಯಲ್ಲಿ ಪಟ್ಟಣಕ್ಕೆ ಹೋಗಬೇಕಾಗಿದ್ದ ಕಾರಣ ಆ ರಸ್ತೆಯನ್ನು ಅವರೇ ತಾತ್ಕಾಲಿಕವಾಗಿ ದುರಸ್ತಿ ಮಾಡಿದ್ದರು. ಪ್ರಕೃತಿ ವಿಕೋಪ ಸಂಭವಿಸಿ ಸುಮಾರು 5 ತಿಂಗಳು ಕಳೆದರೂ ಆ ರಸ್ತೆ ದುರಸ್ತಿ ಕೆಲಸದ ಬಗ್ಗೆ ಯಾವುದೇ ಜನಪ್ರತಿನಿಧಿಗಳು ಇದುವರೆಗೂ ಗಮನಹರಿಸಿಲ್ಲ. ಹಲವು ಬಾರಿ ಈ ಸಮಸ್ಯೆಯ ಬಗ್ಗೆ ಸ್ಥಳೀಯ ಜನಪ್ರತಿನಿಧಿಗಳಿಗೆ ತಿಳಿಸಿದರೂ ಕೂಡ ಸಮಸ್ಯೆಯನ್ನು ಬಗೆಹರಿಸುವ ಬಗ್ಗೆ ಯಾವುದೇ ಭರವಸೆಯನ್ನು ನೀಡಿಲ್ಲ. ಇನ್ನು 3-4 ತಿಂಗಳಲ್ಲಿ ಮಳೆಗಾಲ ಪ್ರಾರಂಭವಾಗಲಿದ್ದು ಆ ಸಮಯದ ಒಳಗೆ ರಸ್ತೆ ದುರಸ್ತಿ ಕಾರ್ಯ ಮಾಡದೆ ಇದ್ದಲ್ಲಿ ಪುನಃ ರಸ್ತೆ ಕುಸಿಯುವ ಸಾಧ್ಯತೆ ಇದೆ.ಹಾಗಾದಲ್ಲಿ ಇಲ್ಲಿರುವ ಮನೆಗಳಿಗೆ ರಸ್ತೆ ಸಂಪರ್ಕ ಕಡಿದು ದ್ವಿಪದಂತಾಗುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎಂದು ಕಗ್ಗುಂಡಿಯ ನಿವಾಸಿಯಾದ ರೂಪ ಗುರುಮೂರ್ತಿಯವರು ಆತಂಕ ವ್ಯಕ್ತಪಡಿಸಿದ್ದಾರೆ. ಪುನಃ ರಸ್ತೆ ಕುಸಿದರೆ ನಮಗೆ ಓಡಾಡಲು ಮತ್ತು ಮಕ್ಕಳನ್ನು ಶಾಲೆಗೆ ಕಳುಹಿಸಲು ತುಂಬಾ ತೊಂದರೆಯಾಗಲಿದೆ. ಆದ್ದರಿಂದ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಆದಷ್ಟು ಬೇಗ ಈ ಸಮಸ್ಯೆಯನ್ನು ಬಗೆಹರಿಸಬೇಕು ಇಲ್ಲವಾದರೆ ಮುಂಬರುವ ಗ್ರಾ.ಪಂ. ಚುನಾವಣೆಯನ್ನು ಬಹಿಷ್ಕರಿಸುವುದಾಗಿ ಕಗ್ಗುಂಡಿ ನಿವಾಸಿಗಳು ಮಲ್ನಾಡ್ ವಾಣಿಗೆ ತಿಳಿಸಿದ್ದಾರೆ.
FOLLOW US ON-


0 Comments:
Post a Comment
Subscribe to Post Comments [Atom]
<< Home