ಕಾಫಿಘಮ ದೇಶಾದ್ಯಂತ ಪರಿಚಯಿಸಬೇಕು- ಶೋಭಾ ಕರಂದ್ಲಾಜೆ.
ಚಿಕ್ಕಮಗಳೂರು ಜಿಲ್ಲೆಯ ಕಲಾ, ಸಾಂಸ್ಕೃತಿಕ, ಮತ್ತು ಪ್ರವಾಸೋದ್ಯಮದ ವೈಶಿಷ್ಟ್ಯತೆಯ ಕಾಫಿ ನಾಡಿನ ಘಮವನ್ನು ದೇಶಾದ್ಯಂತ ಪರಿಚಯಿಸಬೇಕು ಎಂದು ಉಡುಪಿ ಚಿಕ್ಕಮಗಳೂರು ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು. ಚಿಕ್ಕಮಗಳೂರು ಜಿಲ್ಲಾ ಉತ್ಸವದ ಅಂಗವಾಗಿ ನಗರಕ್ಕೆ ಆಗಮಿಸಿದ ಅವರು ಡೊಳ್ಳು ಭಾರಿಸುವ ಮೂಲಕ ಚಿಕ್ಕಮಗಳೂರು ಹಬ್ಬಕ್ಕೆ ಅಧಿಕೃತ ಚಾಲನೆ ನೀಡಿದರು. ನಂತರ ಮಾತನಾಡಿದ ಶೋಭಾ ಕರಂದ್ಲಾಜೆ ಕರ್ನಾಟಕವು ವಿವಿಧತೆಯಲ್ಲಿ ಏಕತೆ ಹೊಂದಿರುವಂತಹ ರಾಜ್ಯವಾಗಿದೆ. ಚಿಕ್ಕಮಗಳೂರು ಜಿಲ್ಲಾ ಉತ್ಸವ ಮೈಸೂರು ದಸರಾದಷ್ಟು ವಿಜೃಂಭಣೆಯಾಗಿ ನಡೆಯುತ್ತಿದೆ. ಚಿಕ್ಕಮಗಳೂರು ಜಿಲ್ಲೆಯನ್ನು ದೊಡ್ಡ ಪ್ರವಾಸೋದ್ಯಮ ಕ್ಷೇತ್ರವನ್ನಾಗಿ ಮಾಡುವ ಗುರಿ ಹೊಂದಿದ್ದೇವೆ ಎಂದ ಅವರು, ಕನ್ನಡಕ್ಕೆ ಬಹುದೊಡ್ಡ ಇತಿಹಾಸವಿದೆ ಕನ್ನಡಕ್ಕೆ ಶಾಸ್ತ್ರಿಯ ಸ್ಥಾನಮಾನ ದೊರಕಿಸಲು ಸಕಲ ರೀತಿಯಲ್ಲೂ ಪ್ರಯತ್ನಿಸಲಾಗುವುದು ಇದಕ್ಕಾಗಿ ಮೈಸೂರಿನಲ್ಲಿ ಜಾಗ ಮೀಸಲಿರಿಸಲಾಗಿದೆ ಎಂದು ಈ ಸಂದರ್ಭದಲ್ಲಿ ಹೇಳಿದರು. ಕಾರ್ಯಕ್ರಮದಲ್ಲಿ ಈ ಬಗ್ಗೆ ಮಾತನಾಡಿದ ವಿಧಾನಸಭಾ ಸದಸ್ಯ ಪ್ರಾಣೇಶ್ ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ಬೇಸತ್ತಿರುವ ಜನರಿಗೆ ಅದನ್ನು ಮರೆಯಲು ಇದೊಂದು ಒಳ್ಳೆಯ ಕಾರ್ಯಕ್ರಮ ಎಂದರು. ಜಿ.ಪಂ. ಅಧ್ಯಕ್ಷೆ ಸುಜಾತ ಕೃಷ್ಣಪ್ಪ ಮಾತನಾಡಿ ಕನ್ನಡ ಸಂಸ್ಕೃತಿ ಇಲಾಖೆ ಕೇವಲ ರಂಗ ಮಂದಿರಕ್ಕೆ ಸೀಮಿತವಾಗದೆ ಇಂತಹ ದೊಡ್ಡ ಹಬ್ಬಕ್ಕೂ ಸಾಕ್ಷಿಯಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ ರವಿ ಈ ಹಬ್ಬದ ಯೋಚನೆ ಮಾತ್ರ ನನ್ನದು ಆದರೆ ಅದ್ದೂರಿಯಾಗಿ ಯೋಜನೆ ಮಾಡಿದ್ದು ನೀವುಗಳು ಹಾಗಾಗಿ ಇದರ ಸಂಪೂರ್ಣ ಶ್ರೇಯಸ್ಸು ಚಿಕ್ಕಮಗಳೂರು ಸಾರ್ವಜನಿಕರಿಗೆ ಸಲ್ಲಬೇಕು ಎಂದರು. ಇಂತಹ ಒಳ್ಳೆ ಕಾರ್ಯಕ್ರಮಕ್ಕೆ ಕಾರಣವಿಲ್ಲದೆ ಹೊಟ್ಟೆಕಿಚ್ಚು ಪಡುವವರಿಗೆ ಜನರ ಸಂಭ್ರಮವೇ ಉತ್ತರ ಕೊಟ್ಟಿದೆ ಎಂದ ಅವರು, ಚಿಕ್ಕಮಗಳೂರು ಜಿಲ್ಲೆಯಲ್ಲಿ ಆದಂತಹ ಅತಿವೃಷ್ಟಿಗೂ ಶೀಘ್ರದಲ್ಲೇ ಪರಿಹಾರ ಒದಗಿಸುವ ಕಾರ್ಯವೂ ಕೂಡ ನಡೆಯುತ್ತದೆ ಎಂದರು.
ಇದಕ್ಕೂ ಮುನ್ನ ಜಿಲ್ಲಾ ಹಬ್ಬದ ಪ್ರಯುಕ್ತ ಸುಮಾರು 100 ಕ್ಕೂ ಹೆಚ್ಚು ವಿವಿಧ ಜಾನಪದ ಕಲಾ ತಂಡಗಳಿಂದ ಆಕರ್ಷಕ ಬೀದಿ ಉತ್ಸವ ನಡೆದಿದ್ದು ಈ ಉತ್ಸವ ಚಿಕ್ಕಮಗಳೂರು ಉತ್ಸವಕ್ಕೆ ಇನ್ನಷ್ಟು ಮೆರಗನ್ನು ನೀಡಿತು.
ಕಾರ್ಯಕ್ರಮದಲ್ಲಿ ಜಿ.ಪಂ ಅಧ್ಯಕ್ಷೆ ಸುಜಾತ ಕೃಷ್ಣಪ್ಪ. ಆಯನೂರು ಮಂಜುನಾಥ, ಮೂಡಿಗೆರೆ ಶಾಸಕ ಎಂ.ಪಿ. ಕುಮಾರಸ್ವಾಮಿ, ವಿಧಾನ ಪರಿಷತ್ ಸದಸ್ಯ ಪ್ರಾಣೇಶ್, ತಾ.ಪಂ. ಸದಸ್ಯ ಜಯಣ್ಣ, ಜಿ.ಪಂ. ಸದಸ್ಯ ವಿಜಯ್ ಕುಮಾರ್, ಜಿಲ್ಲಾಧಿಕಾರಿ ಬಗಾದಿ ಗೌತಮ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರೀಶ್ ಪಾಂಡೆ, ಮೋಹನ್ ಆಳ್ವ , ಶೃಂಗೇರಿ ಶಾಸಕ ರಾಜೇಗೌಡ ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.
ಸಂಜೆ ಕರ್ನಾಟಕದ ಮೂಲೆ ಮೂಲೆ ಇಂದ ಬಂದ ಸುಮಾರು 55 ತಂಡಗಳ 600 ಕ್ಕೂ ಹೆಚ್ಚು ಕಲಾವಿದರಿಂದ ಸುಮಾರು 3 ಗಂಟೆಗಳ ಕಾಲ ಜಾನಪದ ಜಾತ್ರೆ ಕಾರ್ಯಕ್ರಮವೂ ಅದ್ದೂರಿಯಾಗಿ ನಡೆಯಿತು.
























0 Comments:
Post a Comment
Subscribe to Post Comments [Atom]
<< Home