Monday, September 28, 2020

ಭಗತ್ ಎಂಬ ಕ್ರಾಂತಿಯ ಜ್ವಾಲೆ....!


ಭಗತ್ ಸಿಂಗ್ ಎಂದೊಡನೆ ನಮಗೆ ನೆನಪಾಗುವುದು  "ಇನ್ಕ್ವಿಲಾಬ್ ಜಿಂದಾಬಾದ್" ಎಂಬ ದೇಶಭಕ್ತಿ ಘೋಷಣೆ . ಇಂದು ಭಾರತ ಮಾತೆಯ ಹೆಮ್ಮೆಯ ಪುತ್ರ ಭಗತ್ ಸಿಂಗ್ ಅವರ 113ನೇ ಜನ್ಮದಿನ. ಈ ಮಹಾನ್ ಹೋರಾಟಗಾರನ ಪಾದ ಚರಣಗಳಿಗೆ ನಮ್ಮದೊಂದು ಸಲಾಂ.

ಭಗತ್ ಸಿಂಗ್ 1907 ಸೆಪ್ಟೆಂಬರ್ 28 ರಂದು  ಈಗಿನ ಪಾಕಿಸ್ತಾನದ ಲಾಯಲ್ಪುರ್ ಜಿಲ್ಲೆಯ ಜರಾನ್ ವಾಲಾ ತಾಲ್ಲೂಕಿನಲ್ಲಿರುವ ಬಂಗಾ ಹಳ್ಳಿಯಲ್ಲಿ ಜನಿಸಿದರು.ಬ್ರಿಟಿಷರ ಅಧಿನದಲ್ಲಿದ್ದ ಭಾರತವನ್ನು ಅವರ ಮುಷ್ಟಿಯಿಂದ ಮುಕ್ತಗೊಳಿಸಲು ಕ್ರಾಂತಿಕಾರಿ ಮಾರ್ಗ ಅನುಸರಿಸಿದ್ದ ಯುವ ವೀರ ಸೇನಾನಿ ಭಗತ್ ಸಿಂಗ್ ಇವರ ಈ ಹೋರಾಟದ ಹಾದಿ ಎಷ್ಟೋ ಯುವ ಜನತೆಗೆ ಪ್ರೇರಣೆಯಾಯಿತು.

ಏಪ್ರಿಲ್ 13, 1919ರಂದು ನಡೆದ ಜಲಿಯನ್ ವಾಲಾ ಬಾಗ್ ದುರಂತ ನಡೆದ ದಿನ ಶಾಲೆಯಿಂದ ತಪ್ಪಿಸಿಕೊಂಡ ಹೋದ ಭಗತ್ ಸಿಂಗ್ ದುರಂತ ನಡೆದ ಸ್ಥಳಕ್ಕೆ ಹೋಗಿ ಖಾಲಿ ಬಾಟಲಿಯಲ್ಲಿ ರಕ್ತಸಿಕ್ತವಾಗಿದ್ದ ಮಣ್ಣನ್ನು ತುಂಬಿಕೊಂಡು ಬಂದಿದ್ದ. ನಂತರ ಅದನ್ನು ಪ್ರತಿದಿನವೂ ಪೂಜಿಸುತ್ತಿದ್ದರು.
ಬಾಲ್ಯದಲ್ಲಿ ಭಗತ್ ಸಿಂಗ್ ಬ್ರಿಟಿಷರೊಂದಿಗೆ ಹೋರಾಟ ನಡೆಸಲು ಹೊಲಗದ್ದೆಗಳಲ್ಲಿ ಭತ್ತದ ಬದಲು ಬಂದೂಕುಗಳನ್ನು ಬೆಳೆಯಬೇಕೆಂದು ಹೇಳುತ್ತಿದ್ದರು.
ನ್ಯಾಶನಲ್ ಕಾಲೇಜಿನಲ್ಲಿ ಓದುತ್ತಿದ್ದಾಗ ಭಗತ್ ಸಿಂಗ್ ಚಂದ್ರಶೇಖರ್ ಆಜಾದ್ ಅವರ ಹಿಂದೂಸ್ತಾನ್ ರಿಪಬ್ಲಿಕನ್ ಅಸೋಸಿಯೇಶನ್ ಸೇರಿ ಕ್ರಾಂತಿಕಾರಿ ಚಳವಳಿಯಲ್ಲಿ ಭಾಗವಹಿಸಿದರು. ಭಗತ್ ಸಿಂಗ್ ಹೆಚ್‌ಆರ್‌ಎ ಅನ್ನು ಹಿಂದೂಸ್ಥಾನ್ ಸೋಷಿಯಲಿಸ್ಟ್ ರಿಪಬ್ಲಿಕನ್ ಅಸೋಸಿಯೇಶನ್ ಎಂದು ಮರು ನಾಮಕರಣ ಮಾಡಿದ್ದರು.

ಭಗತ್ ಸಿಂಗ್ ಅವರ ಪ್ರಮುಖ ಮಾತುಗಳಲ್ಲಿ 
"ಕ್ರಾಂತಿ ಎಂದರೆ ಅದರಲ್ಲಿ ರಕ್ತಮಯ ಕಲಹ ಇರಬೇಕು ಎಂದೇನೂ ಇಲ್ಲ. ಹಾಗೆಯೇ ವೈಯುಕ್ತಿಕ ದ್ವೇಷಕ್ಕೂ ಇದರಲ್ಲಿ ಅವಕಾಶ ಇಲ್ಲ. ಅದು ಬಾಂಬ್ ಮತ್ತು ಪಿಸ್ತೂಲುಗಳ ಸಂಸ್ಕೃತಿ ಅಲ್ಲ. ನಮ್ಮ ಪ್ರಕಾರ ಕ್ರಾಂತಿ ಎಂದರೆ ಎದ್ದು ಕಾಣುವ ಅನ್ಯಾಯದಿಂದ ಕೂಡಿದ ಈಗಿನ ವ್ಯವಸ್ಥೆ ಬದಲಾಗಬೇಕು" 
ಈ ಮಾತು ಹಲವಾರು ಯುವ ಜನರಲ್ಲಿ ಸ್ವಾತಂತ್ರ್ಯದ ಕಿಚ್ಚು ಹತ್ತಿ, ಹಲವಾರು ಯುವಕರು ಸ್ವಾತಂತ್ರ್ಯ ಚಳುವಳಿಯಲ್ಲಿ ಧುಮುಕಿದರು.

ಸೈಮನ್ ಆಯೋಗದವಿರುದ್ಧ ರಣಕಹಳೆ.
1928 ರಲ್ಲಿ ಸೈಮನ್ ಕಮಿಷನ್ ಭಾರತಕ್ಕೆ ಆಗಮಿಸಿತು. ಭಾರತದ ಮುಂದಿನ ದಿಶೆಯನ್ನು ನಿರ್ಧರಿಸುವುದು ಈ ಮಂಡಲದ ಉದ್ದೇಶವಾಗಿತ್ತು. ಭಾರತದಾದ್ಯಂತ ಈ ಮಂಡಲಕ್ಕೆ ತೀವ್ರ ವಿರೋಧ ವ್ಯಕ್ತವಾಯಿತು. ಲಾಲಾ ಲಜಪತ ರಾಯ್ ನೇತೃತ್ವದಲ್ಲಿ ಜನರು ‘ಸೈಮನ್ ಗೋ ಬ್ಯಾಕ್’ (ಸೈಮನ್ ಹಿಂದಿರುಗು) ಎಂದು ನಿಷೇಧ ಯಾತ್ರೆಯೊಂದಿಗೆ ಬೀದಿಗಿಳಿದರು! ಪರಿಸ್ಥಿತಿಯನ್ನು ನಿಯಂತ್ರಿಸಲು ಆಂಗ್ಲ ಅಧಿಕಾರಿಗಳು ನೆರೆದವರ ಮೇಲೆ ಅಮಾನುಷ ಲಾಠಿ ಪ್ರಹಾರ ಮಾಡಿಸಿದರು. ಇದರಲ್ಲಿ ಲಾಲಾ ಲಜಪತ ರಾಯ್ ಅಸುನೀಗಿದರು. ಇದನ್ನು ಸಹಿಸದ ಕ್ರಾಂತಿಕಾರಿಗಳು, ಲಾಲಾಜಿ ಸಾವಿಗೆ ಕಾರಣನಾದ ಆಂಗ್ಲ ಅಧಿಕಾರಿ ಸ್ಕಾಟ್ ನನ್ನು ಕೊಲ್ಲುವ ನಿರ್ಧಾರ ಮಾಡಿದರು. ಅದರಂತೆ ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ಸೇರಿ ಸ್ಕಾಟ್ ನಿವಾಸದ ಹೊರಗೆ ಹೊಂಚು ಹಾಕಿದರು. ಆದರೆ ಸ್ಕಾಟ್ ಬದಲು ಸೌಂಡರ್ಸ್ ಎಂಬ ಇನ್ನೋರ್ವ ಕ್ರೂರ ಅಧಿಕಾರಿಯು ಭಗತ್ ಸಿಂಗ್ ಹಾರಿಸಿದ ಗುಂಡಿಗೆ ಬಲಿಯಾದನು.

ಹತ್ಯೆಯ ನಂತರ ಅವರು ಕೈ ಹಾಕಿದ ಯೋಜನೆ  ಬ್ರಿಟಿಶ್ ಸರ್ಕಾರದ ಡಿಫೆನ್ಸ್ ಆಕ್ಟ್ ಅನ್ನು ವಿರೋಧಿಸಿ ‘ಅಸೆಂಬ್ಲಿಯಲ್ಲಿ ಬಾಂಬ್ ಹಾಕುವುದು,ಮತ್ತು ಪೊಲೀಸರಿಗೆ ಭಗತ್ ಸಿಂಗ್ ಶರಣಾಗುವುದು!’.ಭಗತ್ ಸಿಂಗ್ ಏಕೆ ಅಲ್ಲಿ ಬಾಂಬ್ ಹಾಕಬೇಕು ಮತ್ತೆ ಶರಣಾಗಬೇಕು ಎಂದು ಉಳಿದ ಕ್ರಾಂತಿಕಾರಿಗಳು ಕೇಳಿದ್ದಕ್ಕೆ “ಕಿವುಡರಿಗೆ ಕೇಳಿಸುವಂತೆ ಮಾಡಲು ಭಾರಿ ಸದ್ದನ್ನೇ ಮಾಡಬೇಕು.ಹಾಗೆ ಮುದುಡಿ ಮಲಗಿರುವ ದೇಶದ ಜನರನ್ನ ಕ್ರಾಂತಿಯ ಅವಿಸ್ಸಿನಿಂದ ಬಡಿದ್ದೆಬ್ಬಿಸಬೇಕು ಎಂದು ಭಗತ್ ಸಿಂಗ್ ಹೇಳಿದ್ದರು.

23ನೇ ವರ್ಷಕ್ಕೆ ಹುತಾತ್ಮರಾದ ವೀರಯೋಧ.
ಮಾರ್ಚ್ 23, 1931ರಂದು ಭಗತ್ ಸಿಂಗ್ ಮತ್ತು ಅವರ ಸಹಚರರಾದ ರಾಜಗುರು ಮತ್ತು ಸುಖದೇವ್ ಅವರನ್ನು ಗಲ್ಲಿಗೆರಿಸಲಾಯಿತು.
ಜೈ ಹಿಂದ್ 🇮🇳

✍ ಪ್ರೀತಮ್ ಹೆಬ್ಬಾರ್.

Thursday, September 24, 2020

ಸುರೇಶ್ ಅಂಗಡಿ ನಿಧನ : ಬಿಜೆಪಿ ಮುಖಂಡರಿಂದ ಶ್ರದ್ಧಾಂಜಲಿ.

ಕಳಸ : ಕೊರೊನಾ ಸೋಂಕಿನಿಂದ ನಿಧನರಾದ ಕೇಂದ್ರ ರೈಲ್ವೆ ಖಾತೆಯ ರಾಜ್ಯ ಸಚಿವರಾದ ಸುರೇಶ್ ಅಂಗಡಿಯವರಿಗೆ ಹೋಬಳಿ ಬಿಜೆಪಿ ಪಕ್ಷದ ಕಚೇರಿಯಲ್ಲಿ ಬಿಜೆಪಿ ಪಕ್ಷದ ಮುಖಂಡರು ಸಂತಾಪ ಸೂಚಿಸಿ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದರು.

ಸಂತಾಪ ಸಭೆಯಲ್ಲಿ   ಹೋಬಳಿ ಅಧ್ಯಕ್ಷರಾದ ನಾಗಭೂಷಣ್,ಮಾಜಿ ತಾಲ್ಲೂಕು ಪಂಚಾಯತ್ ಅಧ್ಯಕ್ಷರಾದ  ಶೇಷಗಿರಿ, ಮಾಜಿ  ಹೋಬಳಿ ಅಧ್ಯಕ್ಷರಾದ ನಾಗೇಶ್ , ಸುಜಯಾ ಕೃಷ್ಣ , ಮಹೇಶ್ ಬಸರಿಕಲ್ಲು ಹಾಗೂ ಇನ್ನಿತರರು ಭಾಗವಹಿಸಿದ್ದರು.

ಬಿಜೆಪಿ ಯುವಮೋರ್ಚಾ ವತಿಯಿಂದ ರಕ್ತದಾನ ಶಿಬಿರ.


ಮೂಡಿಗೆರೆ: ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ತಾಲ್ಲೂಕು ಬಿಜೆಪಿ ಯುವಮೋರ್ಚಾ ವತಿಯಿಂದ ತಾಲ್ಲೂಕು ಪಂಚಾಯತಿಯ  ಪಂಡಿತ್ ದೀನ್ ದಯಾಳ್ ಉಪಾಧ್ಯಾಯ ಸಭಾಂಗಣದಲ್ಲಿ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.

ಈ ಶಿಬಿರದಲ್ಲಿ 100ಕ್ಕೂ ಹೆಚ್ಚು ಜನ ಭಾಗವಹಿಸಿ ರಕ್ತದಾನ ಮಾಡಿದರು.ಈ ಕಾರ್ಯಕ್ರಮದಲ್ಲಿ ತಾಲ್ಲೂಕು ಬಿಜೆಪಿ ಅಧ್ಯಕ್ಷರಾದ ರಘು ಜೆ ಎಸ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾದ ಕೆ ಸಿ ರತನ್, ಪ್ರಧಾನ ಕಾರ್ಯದರ್ಶಿಗಳಾದ ಗಜೇಂದ್ರ, ಪಂಚಾಕ್ಷರಿ, ಶಶಿಧರ್, ಉಪಾಧ್ಯಕ್ಷರಾದ ವಿನೋದ್ ಕಣಚೂರು, ಮುಖಂಡರಾದ ಜಯಂತ್ ಬಿದರಹಳ್ಳಿ, ಯುವ ಮೋರ್ಚಾ ತಾಲ್ಲೂಕು ಅಧ್ಯಕ್ಷರಾದ ಸಂಜಯ್ ಕೊಟ್ಟಿಗೆಹಾರ ಪ್ರಧಾನ ಕಾರ್ಯದರ್ಶಿಗಳಾದ ಬಾಲು ಶೆಟ್ಟಿ, ರಕ್ಷಿತ್ ಬಡವನದಿಣ್ಣೆ ಮತ್ತಿತರರು ಭಾಗವಹಿಸಿದ್ದರು.

Thursday, September 10, 2020

ಹಳೆ ವಿದ್ಯಾರ್ಥಿ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ.


ನರಸಿಂಹರಾಜಪುರ : ತಾಲೂಕಿನ ಮೆಣಸೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘಕ್ಕೆ ನೂತನ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.

2020-21 ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆಯು ಗುರುವಾರ ಕಾಲೇಜಿನ ಆವರಣದಲ್ಲಿ ಜರುಗಿದ್ದು ನಿಕಟಪೂರ್ವ ಅಧ್ಯಕರಾಗಿ ಪ್ರಶಾಂತ್ ಶೆಟ್ಟಿ ಅವರನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಸಂತೋಷ್ ಕುಮಾರ್, ಉಪಾಧ್ಯಕ್ಷರಾಗಿ ಗುರುಶಾಂತಪ್ಪ, ಪ್ರಧಾನ ಕಾರ್ಯದರ್ಶಿಯಾಗಿ ಉದಯ್ ಕುಮಾರ್. ಸಂಘಟನಾ ಕಾರ್ಯದರ್ಶಿಗಳಾಗಿ ಶೃಜಿತ್, ಹನೀಫ್, ಪುರುಷೋತ್ತಮ್, ಮುರುಳಿ, ಪ್ರಣಮ್ಯ ಜೈನ್, ಹಾಗೂ ಖಜಾಂಚಿಯಾಗಿ ಜಿವೇಂದ್ರ ಕುಮಾರ್ ಅವರನ್ನು ಆಯ್ಕೆ ಮಾಡಲಾಯಿತು.

ನಿರ್ದೇಶಕರುಗಳಾಗಿ ಪ್ರವೀಣ್ ಕುಮಾರ್, ಸಲೀಂ, ರತ್ನಾಕರ, ಅಶೋಕ್, ನಿತಿನ್, ಡೈಸನ್, ಡೇವಿಡ್, ಪ್ರಶಾಂತ್ ಮತ್ತು ನಿಶ್ಚಿತಾ ಅವರು ಆಯ್ಕೆಯಾಗಿದ್ದಾರೆ. ಹಾಗೆ ಕಾನೂನು ಸಲಹೆಗಾರರಾಗಿ ಶಿವಕುಮಾರ್ ಅವರನ್ನು ಆಯ್ಕೆ ಮಾಡಲಾಯಿತು.

12ನೆ ಶತಮಾನದ ಅಪರೂಪದ ವೀರಗಲ್ಲು ಪತ್ತೆ.


ಕಳಸ : ತಾಲೂಕಿನ ಸಂಸೆಯ ನಲ್ಲಿಬೀಡು ಪ್ರದೇಶದ ಕೆಳಮನೆ ಪುಟ್ಟಯ್ಯ ಅವರ ಜಮೀನಿನಲ್ಲಿ ಬಲು ಅಪರೂಪವೆನಿಸಿರುವ ವೀರಗಲ್ಲು ಸ್ಮಾರಕ ಶಿಲ್ಪವನ್ನು ಹೆಚ್. ಆರ್‌. ಪಾಂಡುರಂಗ ಹಿರೇನಲ್ಲೂರು ಅವರು ಈ ಮೊದಲು ಪತ್ತೆಮಾಡಿದ್ದರು. ಇದೀಗ ಇದರ ಮರು ಅಧ್ಯಯನವನ್ನು  ಡಾ‌.ಸುಪ್ರೀತ ಕೆ.ಎನ್ ಕಳಸ ಇವರು ಮಾಡಿದ್ದು ಈ ಕ್ಷೇತ್ರಕಾರ್ಯ ಶೋಧನೆಯಲ್ಲಿ ಹೊಸ ವಿಚಾರಗಳನ್ನು ಬೆಳಕಿಗೆ ತಂದಿದ್ದಾರೆ.

ಈ ಸ್ಮಾರಕ ಶಿಲ್ಪವನ್ನು ಮೊದಲು ಗುರುತಿಸಿದ್ದ ಪಾಂಡುರಂಗ ಹಿರೇನಲ್ಲೂರು ಅವರು ಇದರಲ್ಲಿ ಐದು ಹಂತಗಳನ್ನು‌ ಗುರುತಿಸಿದ್ದರು. ಆದರೆ ಸುಪ್ರೀತ ಕೆ.ಎನ್ ಅವರು ಕ್ಷೇತ್ರಕಾರ್ಯದ ಸಂದರ್ಭದಲ್ಲಿ 6 ಹಂತಗಳನ್ನು ಗುರುತಿಸಿದ್ದಾರೆ. ಈ ಸ್ಮಾರಕ ಶಿಲ್ಪವು 7 ಅಡಿ ಉದ್ದ ಮತ್ತು 4 ಅಡಿ‌ ಅಗಲವನ್ನು ಹೊಂದಿದ್ದು, ಗ್ರಾನೈಟ್ ಶಿಲೆಯಿಂದ ನಿರ್ಮಾಣವಾಗಿದೆ‌.

ಸ್ಮಾರಕ ಶಿಲ್ಪದ ಮೊದಲನೆಯ‌ ಮತ್ತು ಎರಡನೆಯ ಹಂತದಲ್ಲಿ ವೀರರು ಬಿಲ್ಲು‌-ಬಾಣ, ಬಾಕುಗಳನ್ನು ಹಿಡಿದುಕೊಂಡು ಕಾಡು ಪ್ರಾಣಿಗಳಾದ ಜಿಂಕೆ ಮತ್ತು ವ್ಯಾಘ್ರ ವನ್ನು ಬೇಟೆಯಾಡುವ ದೃಶ್ಯವನ್ನು ಕೆತ್ತಲಾಗಿದೆ‌‌‌‌. ಮೂರನೆಯ ಹಂತದಲ್ಲಿ ಸಮುದ್ರ ಮಂಥನದ ಚಿತ್ರಣವನ್ನು ತೋರಿಸಲಾಗಿದೆ‌. ಈ ದೃಶ್ಯವನ್ನು ಗಮನಿಸಿದಾಗ, ಒಂದು ಅಭಿಪ್ರಾಯದಂತೆ ಶತ್ರು ಪಡೆಯನ್ನು ದಾನವರಂತೆ ಹಾಗೂ ವೀರನ ಸೇನೆಯನ್ನು‌ ದೇವರಂತೆ ತೋರಿಸಿರಬಹುದು‌. ಇನ್ನೊಂದು ಅಭಿಪ್ರಾಯದ ಪ್ರಕಾರ ದಾನವರಿಗೂ ದೇವರಿಗೂ ಅಮೃತಕ್ಕೋಸ್ಕರ ಯುದ್ಧವಾದಗೇ ಶತ್ರು ಪಡೆಗೂ ವೀರರಿಗೂ ಭೂಮಿಯ ವಿಚಾರದಲ್ಲಿ ಯುದ್ಧವಾಗಿರಬಹುದು ಎಂದು ಡಾ‌. ಸುಪ್ರೀತ ಕೆ.ಎನ್‌ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಮುದ್ರ ಮಂಥನದ ಚಿತ್ರಣವನ್ನು‌ ಈ ರೀತಿಯಾಗಿ ಸ್ಮಾರಕ ಶಿಲ್ಪದಲ್ಲಿ ತೋರಿಸಿರುವುದು ವಿಶೇಷವೆನಿಸಿದೆ. ನಾಲ್ಕನೆಯ ‌ಹಂತದಲ್ಲಿ ಅಶ್ವದಳದ ಮೂಲಕ ವೀರನನ್ನು ಪಲ್ಲಕಿಯಲ್ಲಿ ಯುದ್ಧ ಭೂಮಿಗೆ ಹೊತ್ತುಕೊಂಡು ಹೋಗುವ ಚಿತ್ರಣವಿದೆ. ಐದನೇ ಹಂತದಲ್ಲಿ ಮಡಿದ‌ ವೀರರ ಬಲ ಭಾಗದಲ್ಲಿ ಕಿನ್ನರ (ಅಪ್ಸರೆ) ಸ್ತ್ರೀಯರನ್ನು ಮತ್ತು ಎಡ ಭಾಗದಲ್ಲಿ ಧ್ಯಾನಸಕ್ತರಾಗಿರುವ ಯತಿಯರನ್ನು ತೋರಿಸಲಾಗಿದೆ.ಕೊನೆಯ ಹಂತದಲ್ಲಿ ಸೂರ್ಯ-ಚಂದ್ರ, ಶಿವಲಿಂಗವನ್ನು ಪೂಜಿಸುತ್ತಿರುವ ಯತಿ, ವೀರ ನಂದಿ ಶಿಲ್ಪ ಮತ್ತು ಹಸು-ಕರುವಿನ ಚಿತ್ರಣವಿದೆ‌.
ವೀರಗಲ್ಲಿನ ಶಿಲ್ಪ ಲಕ್ಷಣವನ್ನು ಆಧಾರವಾಗಿರಿಸಿಕೊಂಡು ಇದರ ಕಾಲಮಾನವನ್ನು‌ 12ನೆ ಶತಮಾನ ಎಂದು ಡಾ‌‌.ಸುಪ್ರೀತ ಕೆ.ಎನ್‌ ಅವರು ಅಭಿಪ್ರಾಯಿಸಿದ್ದಾರೆ.

ಅಧ್ಯಯನ ದೃಷ್ಟಿಯಿಂದ ಈ ಸ್ಮಾರಕ ಶಿಲ್ಪವು ಕಳಸ ಪರಿಸರದಲ್ಲಿ ಬಲು ಅಪರೂಪವಾಗಿದ್ದು, ಯುದ್ಧ ‌ಸನ್ನಿವೇಶವನ್ನು ಸಮುದ್ರ ಮಂಥನಕ್ಕೆ ಹೋಲಿಸಿರುವುದು ವಿಶೇಷವೆನಿಸುತ್ತದೆ.‌ ಕಳಸ ಪರಿಸರದಲ್ಲಿ ದೊರೆತಿರುವ ಜಿಂಕೆ ಬೇಟೆಯಾಡುವ ವೀರಗಲ್ಲುಗಳಲ್ಲಿ ಇದು ಮೂರನೆಯದ್ದಾಗಿದೆ.

ಈ ಕ್ಷೇತ್ರಕಾರ್ಯ ಶೋಧನೆಯಲ್ಲಿ ತೇಜು ನಲ್ಲಿಬೀಡು, ಸುಮಂತ್ ಕೆ‌‌.ಎನ್ ಕಳಸ ಮತ್ತು ಮಂಜುನಾಥ ಅವರು ಸಹಕಾರ ನೀಡಿದ್ದರು.