12ನೆ ಶತಮಾನದ ಅಪರೂಪದ ವೀರಗಲ್ಲು ಪತ್ತೆ.
ಕಳಸ : ತಾಲೂಕಿನ ಸಂಸೆಯ ನಲ್ಲಿಬೀಡು ಪ್ರದೇಶದ ಕೆಳಮನೆ ಪುಟ್ಟಯ್ಯ ಅವರ ಜಮೀನಿನಲ್ಲಿ ಬಲು ಅಪರೂಪವೆನಿಸಿರುವ ವೀರಗಲ್ಲು ಸ್ಮಾರಕ ಶಿಲ್ಪವನ್ನು ಹೆಚ್. ಆರ್. ಪಾಂಡುರಂಗ ಹಿರೇನಲ್ಲೂರು ಅವರು ಈ ಮೊದಲು ಪತ್ತೆಮಾಡಿದ್ದರು. ಇದೀಗ ಇದರ ಮರು ಅಧ್ಯಯನವನ್ನು ಡಾ.ಸುಪ್ರೀತ ಕೆ.ಎನ್ ಕಳಸ ಇವರು ಮಾಡಿದ್ದು ಈ ಕ್ಷೇತ್ರಕಾರ್ಯ ಶೋಧನೆಯಲ್ಲಿ ಹೊಸ ವಿಚಾರಗಳನ್ನು ಬೆಳಕಿಗೆ ತಂದಿದ್ದಾರೆ.
ಈ ಸ್ಮಾರಕ ಶಿಲ್ಪವನ್ನು ಮೊದಲು ಗುರುತಿಸಿದ್ದ ಪಾಂಡುರಂಗ ಹಿರೇನಲ್ಲೂರು ಅವರು ಇದರಲ್ಲಿ ಐದು ಹಂತಗಳನ್ನು ಗುರುತಿಸಿದ್ದರು. ಆದರೆ ಸುಪ್ರೀತ ಕೆ.ಎನ್ ಅವರು ಕ್ಷೇತ್ರಕಾರ್ಯದ ಸಂದರ್ಭದಲ್ಲಿ 6 ಹಂತಗಳನ್ನು ಗುರುತಿಸಿದ್ದಾರೆ. ಈ ಸ್ಮಾರಕ ಶಿಲ್ಪವು 7 ಅಡಿ ಉದ್ದ ಮತ್ತು 4 ಅಡಿ ಅಗಲವನ್ನು ಹೊಂದಿದ್ದು, ಗ್ರಾನೈಟ್ ಶಿಲೆಯಿಂದ ನಿರ್ಮಾಣವಾಗಿದೆ.
ಸ್ಮಾರಕ ಶಿಲ್ಪದ ಮೊದಲನೆಯ ಮತ್ತು ಎರಡನೆಯ ಹಂತದಲ್ಲಿ ವೀರರು ಬಿಲ್ಲು-ಬಾಣ, ಬಾಕುಗಳನ್ನು ಹಿಡಿದುಕೊಂಡು ಕಾಡು ಪ್ರಾಣಿಗಳಾದ ಜಿಂಕೆ ಮತ್ತು ವ್ಯಾಘ್ರ ವನ್ನು ಬೇಟೆಯಾಡುವ ದೃಶ್ಯವನ್ನು ಕೆತ್ತಲಾಗಿದೆ. ಮೂರನೆಯ ಹಂತದಲ್ಲಿ ಸಮುದ್ರ ಮಂಥನದ ಚಿತ್ರಣವನ್ನು ತೋರಿಸಲಾಗಿದೆ. ಈ ದೃಶ್ಯವನ್ನು ಗಮನಿಸಿದಾಗ, ಒಂದು ಅಭಿಪ್ರಾಯದಂತೆ ಶತ್ರು ಪಡೆಯನ್ನು ದಾನವರಂತೆ ಹಾಗೂ ವೀರನ ಸೇನೆಯನ್ನು ದೇವರಂತೆ ತೋರಿಸಿರಬಹುದು. ಇನ್ನೊಂದು ಅಭಿಪ್ರಾಯದ ಪ್ರಕಾರ ದಾನವರಿಗೂ ದೇವರಿಗೂ ಅಮೃತಕ್ಕೋಸ್ಕರ ಯುದ್ಧವಾದಗೇ ಶತ್ರು ಪಡೆಗೂ ವೀರರಿಗೂ ಭೂಮಿಯ ವಿಚಾರದಲ್ಲಿ ಯುದ್ಧವಾಗಿರಬಹುದು ಎಂದು ಡಾ. ಸುಪ್ರೀತ ಕೆ.ಎನ್ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಮುದ್ರ ಮಂಥನದ ಚಿತ್ರಣವನ್ನು ಈ ರೀತಿಯಾಗಿ ಸ್ಮಾರಕ ಶಿಲ್ಪದಲ್ಲಿ ತೋರಿಸಿರುವುದು ವಿಶೇಷವೆನಿಸಿದೆ. ನಾಲ್ಕನೆಯ ಹಂತದಲ್ಲಿ ಅಶ್ವದಳದ ಮೂಲಕ ವೀರನನ್ನು ಪಲ್ಲಕಿಯಲ್ಲಿ ಯುದ್ಧ ಭೂಮಿಗೆ ಹೊತ್ತುಕೊಂಡು ಹೋಗುವ ಚಿತ್ರಣವಿದೆ. ಐದನೇ ಹಂತದಲ್ಲಿ ಮಡಿದ ವೀರರ ಬಲ ಭಾಗದಲ್ಲಿ ಕಿನ್ನರ (ಅಪ್ಸರೆ) ಸ್ತ್ರೀಯರನ್ನು ಮತ್ತು ಎಡ ಭಾಗದಲ್ಲಿ ಧ್ಯಾನಸಕ್ತರಾಗಿರುವ ಯತಿಯರನ್ನು ತೋರಿಸಲಾಗಿದೆ.ಕೊನೆಯ ಹಂತದಲ್ಲಿ ಸೂರ್ಯ-ಚಂದ್ರ, ಶಿವಲಿಂಗವನ್ನು ಪೂಜಿಸುತ್ತಿರುವ ಯತಿ, ವೀರ ನಂದಿ ಶಿಲ್ಪ ಮತ್ತು ಹಸು-ಕರುವಿನ ಚಿತ್ರಣವಿದೆ.
ವೀರಗಲ್ಲಿನ ಶಿಲ್ಪ ಲಕ್ಷಣವನ್ನು ಆಧಾರವಾಗಿರಿಸಿಕೊಂಡು ಇದರ ಕಾಲಮಾನವನ್ನು 12ನೆ ಶತಮಾನ ಎಂದು ಡಾ.ಸುಪ್ರೀತ ಕೆ.ಎನ್ ಅವರು ಅಭಿಪ್ರಾಯಿಸಿದ್ದಾರೆ.
ಅಧ್ಯಯನ ದೃಷ್ಟಿಯಿಂದ ಈ ಸ್ಮಾರಕ ಶಿಲ್ಪವು ಕಳಸ ಪರಿಸರದಲ್ಲಿ ಬಲು ಅಪರೂಪವಾಗಿದ್ದು, ಯುದ್ಧ ಸನ್ನಿವೇಶವನ್ನು ಸಮುದ್ರ ಮಂಥನಕ್ಕೆ ಹೋಲಿಸಿರುವುದು ವಿಶೇಷವೆನಿಸುತ್ತದೆ. ಕಳಸ ಪರಿಸರದಲ್ಲಿ ದೊರೆತಿರುವ ಜಿಂಕೆ ಬೇಟೆಯಾಡುವ ವೀರಗಲ್ಲುಗಳಲ್ಲಿ ಇದು ಮೂರನೆಯದ್ದಾಗಿದೆ.
ಈ ಕ್ಷೇತ್ರಕಾರ್ಯ ಶೋಧನೆಯಲ್ಲಿ ತೇಜು ನಲ್ಲಿಬೀಡು, ಸುಮಂತ್ ಕೆ.ಎನ್ ಕಳಸ ಮತ್ತು ಮಂಜುನಾಥ ಅವರು ಸಹಕಾರ ನೀಡಿದ್ದರು.

0 Comments:
Post a Comment
Subscribe to Post Comments [Atom]
<< Home