Monday, July 6, 2020

ಮಲ್ಲಯುದ್ಧ ಮತ್ತು ಜಿಂಕೆ ಬೇಟೆಯ ಸ್ಮಾರಕ ಶಿಲ್ಪಗಳು ಪತ್ತೆ.


ಕಳಸ: ತಾಲ್ಲೂಕಿನ ಇಡಕಣಿ ಗ್ರಾಮದ ಹೆಮ್ಮಕ್ಕಿ ಎಂಬ ಪ್ರದೇಶದಲ್ಲಿ 12ನೇ ಶತಮಾನಕ್ಕೆ ಸೇರಿದ ವಿಶೇಷವಾಗಿರುವ ಎರಡು ಸ್ಮಾರಕ ಶಿಲ್ಪಗಳನ್ನು ಇತಿಹಾಸ ಮತ್ತು ಪುರಾತತ್ವ ಸಂಶೋಧಕರಾದ ಸುಪ್ರೀತ ಕೆ.ಎನ್, ಕಳಸ ಅವರು ಪತ್ತೆ ಮಾಡಿದ್ದಾರೆ. 
ಮಲ್ಲಯುದ್ಧ ವೀರಗಲ್ಲು: ಹೆಮ್ಮಕ್ಕಿಯ ಕೋಟೆಮಕ್ಕಿ ಎಂಬ ಸ್ಥಳದಲ್ಲಿ ಮಲ್ಲಾಯುದ್ಧವನ್ನು ತೋರಿಸುವ ವೀರಗಲ್ಲು ಇದ್ದು, ಹಿಂದಿನ ಅಧ್ಯಯನವನ್ನು ಗಮನಿಸಿದಾಗ ದೇವಾಲಯದ ಭಿತ್ತಿಗಳಲ್ಲಿ ಮಲ್ಲಾಯುದ್ಧದ ದೃಶ್ಯವನ್ನು ಕೆತ್ತಿರುವುದನ್ನು ಗಮನಿಸಬಹುದು. ಆದರೆ ಕರ್ನಾಟಕದಲ್ಲಿಯೇ ಪ್ರಥಮ ಬಾರಿಗೆ ವೀರಗಲ್ಲಿನಲ್ಲಿ ಮಲ್ಲಾಯುದ್ಧದ ಚಿತ್ರಣವನ್ನು ಕೆತ್ತಿರುವುದು ಬೆಳಕಿಗೆ ಬಂದಿದೆ ಎಂಬುದು ಸಂಶೋಧಕರ ಅಭಿಪ್ರಾಯವಾಗಿದೆ. ಈ ವೀರಗಲ್ಲು 4.7 ಅಡಿ ಉದ್ದ ಮತ್ತು 3.3 ಅಡಿ ಅಗಲವನ್ನು ಹೊಂದಿದೆ. ವೀರಗಲ್ಲು ನಾಲ್ಕು ಹಂತವನ್ನು ಒಳಗೊಂಡಿದ್ದು ಕೆಳಗಿನ ಹಂತದಲ್ಲಿ ಮಲ್ಲಯುದ್ದದ ದೃಶ್ಯವನ್ನು, ಎರಡನೇ ಹಂತದಲ್ಲಿ ವೀರ ಮರಣವನ್ನು ಹೊಂದಿದ ವೀರನನ್ನು ಅಪ್ಸರೆಯರು ಪಲ್ಲಕ್ಕಿಯಲ್ಲಿ ಕರೆದೊಯ್ಯುವ ದೃಶ್ಯವಿದೆ, ನಂತರದ ಹಂತದಲ್ಲಿ ವೀರನು ಸ್ವರ್ಗದಲ್ಲಿರುವ ಚಿತ್ರಣವನ್ನು ಕೆತ್ತಲಾಗಿದೆ ಹಾಗೂ ಮೇಲಿನ ಹಂತವು ಪ್ರಸ್ತುತ ತೃಟಿತಗೊಂಡಿದೆ. ವೀರಗಲ್ಲಿನ ಕಲಾಶೈಲಿಯನ್ನು ಗಮನಿಸಿ ಇದರ ಕಾಲಮಾನವನ್ನು 12ನೇ ಶತಮಾನ ಎಂದು ಸಂಶೋಧಕರು ತಿಳಿಸಿದ್ದಾರೆ.
ಜಿಂಕೆ ಬೇಟೆ ವೀರಗಲ್ಲು: ಮಲ್ಲಯುದ್ಧ ಇರುವ ವೀರಗಲ್ಲಿನಿಂದ ಸುಮಾರು 2 ಕಿ,ಮೀ ದೂರದಲ್ಲಿ ಈ ಸ್ಮಾರಕ ಶಿಲ್ಪವಿದೆ. ಇದು 5 ಅಡಿ ಉದ್ದ ಮತ್ತು 2.6 ಅಡಿ ಅಗಳವಿದ್ದು ಈ ಸ್ಮಾರಕಶಿಲ್ಪವು ನಾಲ್ಕು ಹಂತಗಳನ್ನು ಒಳಗೊಂಡಿದ್ದು, ಕೆಳಗಿನ ಹಂತದಲ್ಲಿ ಬಿಲ್ಲು ಬಾಣವನ್ನು ಹಿಡಿದುಕೊಂಡು ವೀರನು ತನ್ನ ಬೇಟೆ ನಾಯಿಗಳೊಂದಿಗೆ ಜಿಂಕೆಯನ್ನು ಬೇಟೆಯಾಡುವ ದೃಶ್ಯವಿದೆ. ನಂತರದ ಹಂತದಲ್ಲಿ ಮರಣ ಹೊಂದಿದ ವೀರನನ್ನು ಅಪ್ಸರೆಯರು ಸ್ವರ್ಗಕ್ಕೆ ಕರೆದೊಯ್ಯುವ ದೃಶ್ಯದ ಕೆತ್ತನೆಯಿದೆ. (ಬೇಟೆಯಾಡುವ ಸಂದರ್ಭದಲ್ಲಿ ಯಾವುದೋ ಒಂದು ಅವಘಡದಿಂದ ವೀರನು ಮರಣ ಹೊಂದಿರಬೇಕೆಂದು ಸಂಶೋಧಕರು ಅಭಿಪ್ರಾಯ ಪಟ್ಟಿದ್ದಾರೆ). ನಂತರದ ಹಂತದಲ್ಲಿ ವೀರನ ಸತಿಯರು  ಕೈಮುಗಿದು ಕುಳಿತಿರುವ ಚಿತ್ರಣವಿದೆ. ಮೇಲಿನ ಹಂತದಲ್ಲಿ ಸೂರ್ಯ-ಚಂದ್ರ, ಶಿವಲಿಂಗ, ನಂದಿ, ಹಸು ಮತ್ತು ಕರುವಿನ ಕೆತ್ತನೆಯಿದ್ದು, ವೀರನು ಸ್ವರ್ಗಸ್ತನಾದ ಎಂಬ ಚಿತ್ರಣವನ್ನು ತೋರಿಸಿ ಕೊಡುತ್ತದೆ. ಈ ರೀತಿಯ ಜಿಂಕೆ ಬೇಟೆಯಾಡುವ ವೀರಗಲ್ಲು ಕರ್ನಾಟಕದಲ್ಲಿ ಈ ಮೊದಲು ಬೆಂಗಳೂರಿನ ಬನಶಂಕರಿಯಲ್ಲಿ ಹಾಗೂ ಕಳಸದ ಮರಸಣಿಗೆ ಎಂಬ ಪ್ರದೇಶದಲ್ಲಿ ದೊರೆತಿದೆ. ಮರಸಣಿಗೆ ಮತ್ತು ಹೆಮ್ಮಕ್ಕಿಯಲ್ಲಿ ದೊರೆತ ಈ ಜಿಂಕೆ ಬೇಟೆಯ ಸ್ಮಾರಕಶಿಲ್ಪಗಳನ್ನು ಗಮನಿಸಿದಾಗ ಇಲ್ಲಿ ಜಿಂಕೆಗಳು ಅಧಿಕವಾಗಿದ್ದವು ಎಂದು ಕಂಡುಬರುತ್ತದೆ.ಈ ಹಿನ್ನಲೆಯಲ್ಲಿ ಮಲ್ಲಯುದ್ಧ ಮತ್ತು ಜಿಂಕೆ ಬೇಟೆಯಾಡುವ ಸ್ಮಾರಕಶಿಲ್ಪಗಳು ವಿಶೇಷವೆನಿಸಿವೆ ಎಂದು ಸುಪ್ರೀತ ಕೆ.ಎನ್ ಕಳಸ ಇವರು ಅಭಿಪ್ರಾಯ ಪಟ್ಟಿದ್ದಾರೆ. ಕ್ಷೇತ್ರಕಾರ್ಯದ ಸಂದರ್ಭದಲ್ಲಿ ಸುಮಂತ್ ಕೆ.ಎನ್ ಕಳಸ, ಅವಿನ್ ಗೌಡ ಅಬ್ಬುಗುಡಿಗೆ, ಪ್ರೀತಮ್ ಹೆಬ್ಬಾರ್, ಪರಮೇಶ್ವರ್ ಹೆಬ್ಬಾರ್ ಅವರು ಸಹಕಾರ ನೀಡಿದ್ದರು.

1 Comments:

At January 8, 2021 at 10:10 PM , Blogger Unknown said...

Very good job

 

Post a Comment

Subscribe to Post Comments [Atom]

<< Home