ಅವ್ಯವಸ್ಥೆಗಳ ಆಗರ ಶೃಂಗೇರಿ ತಾಲ್ಲೂಕು ಸರ್ಕಾರಿ ಆಸ್ಪತ್ರೆ
ವಿದ್ಯಾದೇವತೆ ಶಾರದೆಯ ನೆಲೆಬೀಡು ಆದಿಶಂಕರರು ಸ್ಥಾಪಿಸಿದ 4 ಪೀಠಗಳಲ್ಲಿ ಒಂದಾದ ಶೃಂಗೇರಿಯು ಚಿಕ್ಕಮಗಳೂರು ಜಿಲ್ಲೆಯ ಉತ್ತಮ ಪ್ರವಾಸಿ ತಾಣಗಳಲ್ಲೊಂದಾಗಿ ಗುರುತಿಸಿಕೊಂಡಿದೆ.
ಇಂತಹ ಪ್ರವಾಸಿ ಕ್ಷೇತ್ರದಲ್ಲಿ ಒಂದು ಸುಸಜ್ಜಿತ ಆಸ್ಪತ್ರೆ ಇಲ್ಲ ಅಂದರೆ ಅದನ್ನು ನಂಬಲು ಕೂಡ ಅಸಾಧ್ಯ. ಆದರೆ ಸುಮಾರು 40 ಸಾವಿರಕ್ಕೂ ಅಧಿಕ ಜನಸಂಖ್ಯೆ ಇರುವ ಈ ತಾಲ್ಲೂಕಿನಲ್ಲಿ ಸುಸಜ್ಜಿತವಾದ ತಾಲ್ಲೂಕು ಆಸ್ಪತ್ರೆ ಇಲ್ಲದಿರುವುದು ಇಂತಹ ಪ್ರಸಿದ್ಧ ಪ್ರವಾಸಿ ತಾಣಕ್ಕೆ ಕಪ್ಪು ಚುಕ್ಕೆಯಾಗಿದೆ.
ಪ್ರಸ್ತುತ ತಾಲ್ಲೂಕು ಆಸ್ಪತ್ರೆಯನ್ನು ನೋಡಿದರೆ ಯಾವುದೋ ಪಾಳುಬಿದ್ದ ಕಟ್ಟಡದಂತೆ ಗೋಚರವಾಗುತ್ತದೆ. ಒಮ್ಮೆ ಆಸ್ಪತ್ರೆ ಒಳಹೊಕ್ಕು ನೋಡಿದರೆ, ಫಂಗಸ್ ಬಂದಿರುವ ಹಾಸಿಗೆಗಳು, ಸರಿಯಾಗಿ ತಿರುಗದ ಫ್ಯಾನ್ ಗಳು, ಎಷ್ಟೋ ವರ್ಷಗಳಿಂದ ತೊಳೆಯದೆ ಕಲೆಗಟ್ಟಿರುವ ವಾಷ್ ಬೇಷನ್ ಗಳು, ಗಂಟೆಗಟ್ಟಲೆ ಕಾದರೂ ನೀರು ಬರದ ನಲ್ಲಿಗಳು, ಮುರಿದು ಹೋಗಿರುವ ಬಾಗಿಲುಗಳು, ತುಕ್ಕು ಹಿಡಿದಿರುವ ಕಂಬಿಗಳು, ಕರೆಂಟ್ ಹೋದರೆ ಬೆಳಕಿಗೆ ಯಾವುದೇ ಪರ್ಯಾಯ ವ್ಯವಸ್ತೆಕೂಡ ಇಲ್ಲ. ಹೀಗೆ ಇನ್ನೆಷ್ಟೋ ಅವ್ಯವಸ್ಥೆಗಳಿರುವ ಆಸ್ಪತ್ರೆ ಶೃಂಗೇರಿ ಪಟ್ಟಣದಲ್ಲಿ ಇರುವುದು ವಿಪರ್ಯಾಸವೇ ಸರಿ. ಕೊರೋನದಂತಹ ಸಮಯದಲ್ಲೂ ಕೂಡ ಆಸ್ಪತ್ರೆಯನ್ನು ಸರಿಯಾಗಿ ನಿರ್ವಹಣೆ ಮಾಡದಿರುವುದು ಇಲಾಖೆಯ ಕಾರ್ಯದಕ್ಷತೆಯನ್ನು ಎತ್ತಿ ತೋರಿಸುತ್ತದೆ.
40 ಸಾವಿರಕ್ಕೂ ಅಧಿಕ ಜನಸಂಖ್ಯೆ ಇರುವ ತಾಲ್ಲೂಕಿನಲ್ಲಿ ಯಾರಿಗಾದರೂ ಏನಾದರೂ ತುರ್ತು ಚಿಕಿತ್ಸೆ ಬೇಕಿದ್ದಲ್ಲಿ ದೂರದ ಶಿವಮೊಗ್ಗ, ಮಣಿಪಾಲ ಅಥವಾ ಮಂಗಳೂರು ಆಸ್ಪತ್ರೆಗೆ ಹೋಗಬೇಕಾದ ಅನಿವಾರ್ಯ ಪರಿಸ್ಥಿತಿ ಇದೆ. ತುರ್ತುಪರಿಸ್ಥಿತಿ ಅಷ್ಟು ದೂರ ಹೋಗುವುದರೊಳಗೆ ರೋಗಿಗೆ ಏನಾದರೂ ಸಮಸ್ಯೆಯಾದರೆ ಅದಕ್ಕೆ ಯಾರು ಹೊಣೆ ಎಂಬುವುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ಅದೂ ಅಲ್ಲದೆ ಇದು ಪ್ರಸಿದ್ಧ ಪ್ರವಾಸಿ ಕ್ಷೇತ್ರ ವಾಗಿರುವುದರಿಂದ ಪ್ರವಾಸಿಗರು ಕೂಡ ತುರ್ತು ಸಂದರ್ಭಗಳಲ್ಲಿ ಈ ಆಸ್ಪತ್ರೆಗೆ ಭೇಟಿ ನೀಡಿಲು ಹಿಂಜರಿಯುವ ಪರಿಸ್ಥಿತಿ ನಿರ್ಮಾಣವಾಗಿದೆ.ಈಗಾಗಲೇ ತಾಲ್ಲೂಕು ಆಸ್ಪತ್ರೆಗೆ 100 ಬೆಡ್ ಗಳ ಸುಸಜ್ಜಿತ ಆಸ್ಪತ್ರೆ ಮಂಜೂರಾಗಿದ್ದರೂ ಕೂಡ ಇದುವರೆಗೂ ಆಸ್ಪತ್ರೆಯನ್ನು ಮೇಲ್ದರ್ಜೆಗೆರಿಸುವ ಯಾವುದೇ ಕಾರ್ಯಗಳು ಕೂಡ ಪ್ರಾರಂಭಗೊಂಡಿಲ್ಲ.
ತಾಲ್ಲೂಕು ಆಸ್ಪತ್ರೆಯಲ್ಲಿ ಇರುವುದು ಇಬ್ಬರೇ ವೈದರು:
ತಾಲ್ಲೂಕು ಆಸ್ಪತ್ರೆಯಲ್ಲಿ ವೈದರ ಸಂಖ್ಯೆ ಕೂಡ ಕಡಿಮೆಯಿದೆ ಈ ಆಸ್ಪತ್ರೆಯಲ್ಲಿ ಇಬ್ಬರು ವೈದ್ಯರು ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ ಅದರಲ್ಲೂ ಒಬ್ಬರು ಕೊರೋನಾ ಕರ್ತವ್ಯದಲ್ಲಿದ್ದು ಇನ್ನೊಬ್ಬ ವೈದ್ಯರು ರಜೆ ಪಡೆದರೆ ಸಣ್ಣ ಪುಟ್ಟ ಕಾಯಿಲೆಗೂ ಕೂಡ ಕೊಪ್ಪ ಆಸ್ಪತ್ರೆಯನ್ನೇ ಅವಲಂಬಿಸಬೇಕಾಗುತ್ತದೆ.
ಈ ಎಲ್ಲಾ ಅವ್ಯವಸ್ಥೆಯಿಂದ ಬೇಸತ್ತಿರುವ ಕೆಲವು ಸಾರ್ವಜನಿಕರು ಸಾಮಾಜಿಕ ಜಾಲತಾಣದ ಮೂಲಕ ಶೃಂಗೇರಿ ಸರ್ಕಾರಿ ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಿ ಎಂಬ ಅಭಿಯಾನಕೂಡ ಪ್ರಾರಂಭವಾಗಿದೆ.
ಈ ಬಗ್ಗೆ ಕ್ಷೇತ್ರದ ಶಾಸಕರು, ಸಂಬಂಧಪಟ್ಟ ಇಲಾಖೆ ಮತ್ತು ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಂಡು ಆದಷ್ಟು ಬೇಗ ತಾಲ್ಲೂಕು ಆಸ್ಪತ್ರೆಯನ್ನು ಮೇಲ್ದರ್ಜೆಗೇರಿಸಬೇಕಾಗಿದೆ.
ಸದ್ಯಕ್ಕೆ ನಮಗಿರುವ ಮಾಹಿತಿ ಪ್ರಕಾರ ನೂರು ಹಾಸಿಗೆಯ ಆಸ್ಪತ್ರೆ ಮಂಜೂರು ಆಗಿದೆ ಅಂತ ತಿಳಿದು ಬಂದಿದೆ. ಆದರೆ ಇದುವರೆಗೂ ಅದರ ಬಗ್ಗೆ ಯಾವುದೇ ಬೆಳವಣಿಗೆ ಗಳು ಕಂಡುಬರುತ್ತಿಲ್ಲ.
ಹಾಗಾಗಿ ಊರಿನ ಜನರ ಅದರಲ್ಲೂ ಬಡ ಜನರ ಆರೋಗ್ಯ ರಕ್ಷಣೆಗಾಗಿ ರಾಜಕೀಯ ಭಿನ್ನಾಭಿಪ್ರಾಯ ಬಿಟ್ಟು ಜನಪ್ರತಿನಿಧಿಗಳು ಎಚ್ಚೆತ್ತುಕೊಂಡು ಆದಷ್ಟು ಬೇಗ 100 ಬೆಡ್ ಗಳ ಸುಸಜ್ಜಿತ ಆಸ್ಪತ್ರೆ ಪ್ರಕ್ರಿಯೆಗೆ ಚಾಲನೆ ನೀಡಬೇಕಾಗಿದ್ದು ಅದರ ಜೊತೆಗೆ ವೈದ್ಯರ ಕೊರತೆಯನ್ನು ಕೂಡ ನೀಗಿಸಬೇಕಾಗಿದೆ ಈ ಬಗ್ಗೆ ಮೊದಲ ಹಂತವಾಗಿ ಸಾಮಾಜಿಕ ಜಾಲತಾಣ ಅಭಿಯಾನ ದಮೂಲಕ ಒತ್ತಡ ಹೇರುತ್ತಿದ್ದೇವೆ.ಇದಕ್ಕೆ ಜನಪ್ರತಿನಿಧಿಗಳು ಸ್ಪಂದಿಸದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಲಾಗುವುದು
posted by MALNADVANI ಮಲ್ನಾಡ್ ವಾಣಿ @ July 13, 2020
0 Comments





