Saturday, December 28, 2019

ಉಡುಪಿ:ಪೇಜಾವರ ಶ್ರೀಗಳ‌ ಆರೋಗ್ಯ ಕ್ಷಣಕ್ಷಣಕ್ಕೂ ಕ್ಷೀಣ : ಶೀಘ್ರದಲ್ಲೇ ಮಠಕ್ಕೆ ಸ್ಥಳಾಂತರ.

ಉಡುಪಿ: ಪೇಜಾವರ ಶ್ರೀಗಳ‌ ಆರೋಗ್ಯ ಕ್ಷಣದಿಂದ ಕ್ಷಣಕ್ಕೆ‌ ಕ್ಷೀಣಿಸುತ್ತಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಷಾದಿಸಿದ್ದಾರೆ. ಅವರು ಶನಿವಾರ‌ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು. ಜೀವ ರಕ್ಷಕ ಸಾಧನ ಸಂಪರ್ಕ ಹೊಂದಿದ ಶ್ರೀಪಾದರ ದೇಹಸ್ಥಿತಿಯಲ್ಲಿ ಸುಧಾರಣೆ ಕಾಣುತ್ತಿಲ್ಲ ಎಂದರು.

ತಜ್ಞ ವೈದ್ಯರು, ಬೆಂಗಳೂರು ಹಾಗೂ ದಿಲ್ಲಿಯ ಏಮ್ಸ್ ವೈದ್ಯರ ಯತ್ನದ ಹೊರತಾಗಿಯೂ ಕಳೆದ 24 ಗಂಟೆಗಳಲ್ಲಿ ಯಾವುದೇ ಪ್ರಗತಿಯಾಗಿಲ್ಲ. ಭಾನುವಾರವೂ ಉಡುಪಿಯಲ್ಲಿರಲಿದ್ದು ಶ್ರೀಗಳಿಗಾಗಿ ದೇವರಲ್ಲಿ ಪ್ರಾರ್ಥಿಸುವೆ ಎಂದರು. ಪೇಜಾವರ ಶ್ರೀಗಳಿಗೆ 48 ಗಂಟೆಗಳ ವಿಶೇಷ‌ ಚಿಕಿತ್ಸೆ ಶುಕ್ರವಾರ ರಾತ್ರಿ‌ ಆರಂಭವಾಗಿದ್ದು ಫಲಿತಾಂಶದ ಆಧಾರದಲ್ಲಿ‌ ಭಾನುವಾರ ತಜ್ಞ ವೈದ್ಯರು ನಿರ್ಧಾರ ಕೈಗೊಳ್ಳಿದ್ದಾರೆ.

ಪೇಜಾವರ ಮಠಕ್ಕೆ ಸ್ಥಳಾಂತರ

ಪೇಜಾವರಶ್ರೀಗಳ ಆರೋಗ್ಯದಲ್ಲಿ‌ ಚೇತರಿಕೆ ಲಕ್ಷಣವಿಲ್ಲದ ಹಿನ್ನೆಲೆಯಲ್ಲಿ ಭಾನುವಾರ ಪೇಜಾವರ ಮಠಕ್ಕೆ ಸ್ಥಳಾಂತರಿಸಲಾಗುವುದು ಎಂದು ಪೇಜಾವರ ಮಠದ ಕಿರಿಯ ಯತಿ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರು ತಿಳಿಸಿದ್ದಾರೆ. ಅವರು ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಅಗತ್ಯ ಜೀವರಕ್ಷಕ ವ್ಯವಸ್ಥೆಯೊಂದಿಗೆ ಭಾನುವಾರದಿಂದ ಶ್ರೀಪಾದರು ಮಠದಲ್ಲಿರಲಿದ್ದು ಸಾರ್ವಜನಿಕರು ಮಠಕ್ಕೆ ಬಾರದೆ ಸಹಕರಿಸುವಂತೆ ಮನವಿ ಮಾಡಿದರು. ಜೀವ ರಕ್ಷಕ ಸಾಧನಗಳ ಜತೆ ವೈದ್ಯರೂ ಇರಲಿದ್ದಾರೆ ಎಂದು ಹೇಳಿದರು.

ಅಂಗಾಂಗಳ ಸುಸ್ಥಿತಿಗೆ ಯಂತ್ರ ಅಳವಡಿಕೆ: ವೀರೇಂದ್ರ ಹೆಗ್ಗಡೆ


ಪೇಜಾವರ ಶ್ರೀಗಳ ಆರೋಗ್ಯ ಕ್ಷೀಣಿಸುತ್ತಿದ್ದು ವಿವಿಧ‌ ಅಂಗಾಂಗಳ ಸುಸ್ಥಿತಿಗೆ ಯಂತ್ರ ಅಳವಡಿಸಲಾಗಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ. ಅವರು ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಗೆ ಶನಿವಾರ‌ ಭೇಟಿ‌ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಆರೋಗ್ಯ‌ಪರಿಸ್ಥಿತಿ‌ ಅವಲೋಕಿಸಿ ಭಾನುವಾರ ಚಿಕಿತ್ಸೆಯಲ್ಲಿ ಪರಿವರ್ತನೆ, ಮುಂದುವರಿಕೆ ಕುರಿತು ವೈದ್ಯರು ಸಮಾಲೋಚಿಸಿ ನಿರ್ಧರಿಸಲಿದ್ದಾರೆ. ಪೇಜಾವರಶ್ರೀಗಳಿಗಾಗಿ ಪ್ರಾರ್ಥನೆ‌ ಮುಂದುವರಿಯಲಿದ್ದು ಅವರು ನಮ್ಮನ್ನು ಬಿಟ್ಟು ಹೋಗೋದಿಲ್ಲ. ಸೇವಾ ಕಾರ್ಯಗಳೊಂದಿಗೆ ನಮ್ಮ ಜತೆಗಿರುತ್ತಾರೆ. ದೇಶದ ಜನತೆ ಶ್ರೀಗಳಿಗೆ ಪ್ರಾರ್ಥನೆ ಸಲ್ಲಿಸಲಿ ಎಂದರು.

ದೇಶ‌ಕಂಡ ಅಪರೂಪದ ಸಂತ: ಉಮಾಭಾರತಿ

ಸಮಾಜದ ಎಲ್ಲ ಜಾತಿ, ವರ್ಗ, ಧರ್ಮದ ಜನರ ಪ್ರೀತಿ, ಗೌರವಕ್ಕೆ ಪಾತ್ರರಾದ ಪೇಜಾವರಶ್ರೀಪಾದರು ದೇಶ‌ಕಂಡ ಅಪರೂಪದ ಸಂತ ಎಂದು ಶಿಷ್ಯೆ ಉಮಾಭಾರತಿ ಹೇಳಿದ್ದಾರೆ. ಅವರು ಶನಿವಾರ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಗೆ ಭೇಟಿ ಸುದ್ದಿಗಾರರೊಂದಿಗೆ ಮಾತನಾಡಿದರು. ಗುರುವಲ್ಲಿ ತಂದೆಯನ್ನೂ ಕಂಡಿದ್ದೇನೆ. ಏಳು ದಿನದಿಂದ ಉಡುಪಿಯಲ್ಲೇ ಇದ್ದು ಶ್ರೀಗಳ ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತಿದ್ದೇನೆ. ತಜ್ಞ ವೈದ್ಯರ ಯತ್ನದ ಹೊರತಾಗಿಯೂ ಸುಧಾರಣೆ ಕಾಣುತ್ತಿಲ್ಲ.‌ದೇವರಲ್ಲಿ ಎಲ್ಲರೂ ಸೇರಿ ಶ್ರೀಗಳ ಆರೋಗ್ಯಕ್ಕಾಗಿ ಪ್ರಾರ್ಥಿಸಬೇಕು ಎಂದರು.

Thursday, December 26, 2019

ದಕ್ಷಿಣ ಕನ್ನಡ : 163 ಕಿ.ಮೀ. ರಸ್ತೆ ಅಭಿವೃದ್ಧಿ.

Read more »

Wednesday, December 25, 2019

ಇಂದು ಬೆಳಗ್ಗೆ 8ರಿಂದ 11 ಗಂಟೆವರೆಗೆ ಕಂಕಣ ಸೂರ್ಯಗ್ರಹಣ; ಬೆಂಗಳೂರಿನಲ್ಲಿ ಗೋಚರವಾಗೋದು ಡೌಟ್​

ಇಂದು ಬೆಳಗ್ಗೆ ಸಂಭವಿಸುವ ಸೂರ್ಯಗ್ರಹಣವನ್ನು ಬರಿಗಣ್ಣಿನಿಂದ ನೋಡಲೇಬಾರದು ಎಂದು ಪ್ರಮೋದ್​ ಗಲಗಲಿ ಎಚ್ಚರಿಕೆ ನೀಡಿದ್ದಾರೆ.  ಈ ಗ್ರಹಣವನ್ನು ಬರಿಗಣ್ಣಿನಿಂದ ನೋಡಲೇಬಾರದು. ಸುರಕ್ಷಿತಾ ವಿಧಾನವಾದ ಸೋಲಾರ್ ಗಾಗಲ್ಸ್, ವೆಲ್ಡರ್ಸ್ ಗ್ಲಾಸ್, ಅಲ್ಟ್ರಾ ವೈಲೆಟ್ ರೇಸ್ ಮೂಲಕ ಗ್ರಹಣ ವೀಕ್ಷಿಸಬಹುದು.  2010 ರಲ್ಲಿ ಈ ಕಂಕಣ ಗ್ರಹಣ ಗೋಚರವಾಗಿತ್ತು. ಅದಾದ ಬಳಿಕ ಈ ವರ್ಷ ಬರುತ್ತಿದೆ ಎಂದರು.

ಇಂದು ಕಂಕಣ ಸೂರ್ಯಗ್ರಹಣ ಸಂಭವಿಸಲಿದ್ದು, ಎಲ್ಲಾ ದೇವಾಲಯಗಳ ಬಾಗಿಲು ಮುಚ್ಚಲಿವೆ. ಯಾವುದೇ ಪೂಜೆ-ಪುನಸ್ಕಾರ ಇರುವುದಿಲ್ಲ.  ಇಂದು ಸಂಭವಿಸಲಿರುವ ಕಂಕಣ ಸೂರ್ಯಗ್ರಹಣದ ಬಗ್ಗೆ ಬೆಂಗಳೂರು ನೆಹರೂ ತಾರಾಯಲದ ನಿರ್ದೇಶಕ ಪ್ರಮೋದ್​ ಗಲಗಲಿ ಮಾಹಿತಿ ನೀಡಿದ್ದಾರೆ. 

9 ವರ್ಷಗಳ ಬಳಿಕ ಸಂಭವಿಸುತ್ತಿರುವ ಕಂಕಣ ಸೂರ್ಯ ಗ್ರಹಣ ಇದಾಗಿದೆ. ಇದನ್ನು ಕಣ್ತುಂಬಿಕೊಳ್ಳಲು ವಿಜ್ಞಾನಿಗಳು ಹಾಗೂ ಜನರು ಕಾತರರಾಗಿದ್ದಾರೆ. ಬೆಂಗಳೂರು  ನೆಹರೂ ಪ್ಲಾನಿಟೋರಿಯಂನಲ್ಲಿ ಸೂರ್ಯಗ್ರಹಣ ವೀಕ್ಷಿಸಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. 5 ಟೆಲಿಸ್ಕೋಪ್ ಇರಿಸಲಾಗಿದೆ. ಸಿಲೋಸ್ಟಾಟ್ ನ ಮೂಲಕ ಗ್ರಹಣ ವೀಕ್ಷಣೆ ಮಾಡಲಾಗುತ್ತದೆ. ಸಿಲೋಸ್ಟಾಟ್ ಮೂಲಕ ಸೂರ್ಯನ ಚಲನೆ ನೋಡಬಹುದಾಗಿದೆ. ಸೋಲಾರ್ ಗಾಗಲ್ಸ್​​​ ಗಳನ್ನು ನೀಡಲಾಗುತ್ತದೆ. ಸೋಲಾರ್ ಗಾಗಲ್ಸ್ ನಿಂದ ಸೂರ್ಯನನ್ನು ನೋಡಬಹುದು. ಯಾವುದೇ ಬೈನಾಕ್ಯುಲರ್ ಬಳಕೆ ಮಾಡುವಂತಿಲ್ಲ. ಬೆಳಕಿನ ತೀಕ್ಷ್ಣ ತೆ ಹೆಚ್ಚಿರುವ ಹಿನ್ನೆಲೆ ಬೈನಾಕ್ಯುಲರ್ ವ್ಯವಸ್ಥೆ ಕಲ್ಪಿಸಿಲ್ಲ.

ಬಾಳೆಹೊನ್ನೂರು- ಶೃಂಗೇರಿ ರಸ್ತೆಯಲ್ಲಿ ಬಿರುಕು! ವಾಹನ ಸವಾರರಲ್ಲಿ ಆತಂಕ

ಬಾಳೆಹೊನ್ನೂರು- ಶೃಂಗೇರಿ ರಸ್ತೆಯ ಇಟ್ಟಿಗೆ ಸೀಗೋಡು ಎಂಬಲ್ಲಿ ಇಡೀ ರಸ್ತೆಯು ಒಂದು ಬದಿಯಿಂದ ಮತ್ತೊಂದು ಬದಿಯವರೆಗೂ ಸಂಪೂರ್ಣ ಬಿರುಕುಬಿಟ್ಟಿದ್ದು ವಾಹನ ಸವಾರರಲ್ಲಿ ಆತಂಕ ಮೂಡಿದ್ದು ಸಂಬಂಧಪಟ್ಟ ಅಧಿಕಾರಿಗಳು ಆದಷ್ಟು ಬೇಗ ರಸ್ತೆಯನ್ನು ಸರಿಪಡಿಸಬೇಕೆಂದು ವಾಹನ ಸವಾರರು ಮತ್ತು ಸ್ಥಳೀಯರು ಆಗ್ರಹಿಸಿದ್ದಾರೆ. ಚಿಕ್ಕಮಗಳೂರು, ಬಾಳೆಹೊನ್ನೂರು, ಜಯಪುರ, ಶೃಂಗೇರಿ ಮತ್ತು ಕೊಪ್ಪ ಸಂಪರ್ಕಕ್ಕೆ ಇಟ್ಟಿಗೆ ಸಿಗೋಡು ರಸ್ತೆ ಮುಖಾಂತರವೇ ಹೋಗ್ಬೇಕಾಗಿರುವುದರಿಂದ ಈ ರಸ್ತೆ ಸಂಪೂರ್ಣ ಬಿರುಕು ಬಿಟ್ಟಿರೆ ಎನ್.ಆರ್.ಪುರ ಮೂಲಕ ಈ ಊರುಗಳಿಗೆ ಹೋಗಬೇಕಾದ ಅನಿವಾರ್ಯತೆ ಇದೆ.ಆದ್ದರಿಂದ ಅಧಿಕಾರಿಗಳು ಶೀಘ್ರವಾಗಿ ಈ ರಸ್ತೆಯನ್ನು ಪರಿಶೀಲಿಸಿ ಇದನ್ನು ದುರಸ್ಥಿಗೊಳಿಸಬೇಕಾಗಿ ಮಲ್ನಾಡ್ ವಾಣಿ ಈ ಮೂಲಕ ಕೇಳಿಕೊಳ್ಳುತ್ತದೆ.