Friday, January 8, 2021

ಅಕೇಶಿಯಾ ಎಂಬ ವಿಷಬೀಜಾಸುರ!





ಲ್ಲ ಸಸ್ಯಗಳೂ ತಾನು ಜೀವಿಸುವ ಮಣ್ಣಿಗೆ, ತನ್ನ ಸುತ್ತಲಿನ ಪ್ರದೇಶಕ್ಕೆ ಒಳ್ಳೆಯದೇ ಮಾಡುತ್ತದೆ. ಪಶ್ಚಿಮ ಘಟ್ಟದ ಪ್ರದೇಶಗಳಲ್ಲಿ ವಾಸಿಸುವ ನಮಗೆ ಇದರ ಬಗ್ಗೆ ತಿಳಿದಿರದೆ ಇರದು. ಆದರೆ ನಮಗೆ ತಿಳಿಯದೆ ಇರುವ ವಿಷಯ ಏನೆಂದರೆ ಒಂದೇ ಜಾತಿಯ ಸಸ್ಯವನ್ನು ಅವಶ್ಯಕತೆಗೂ ಮೀರಿ ನೀಡುವುದರಿಂದ ಪರಿಸರಕ್ಕೆ ಅತ್ಯಂತ ಹಾನಿಕಾರಕ ಎಂದು. ಈಗ ಅದೇ ರೀತಿಯಾಗಿ ನೆಟ್ಟ ಮರ ಪಶ್ಚಿಮ ಘಟ್ಟಗಳ ಅಮೂಲ್ಯ ಜೀವ ಸಂಕುಲಗಳ ಅಳಿವಿಗೆ ಕಾರಣವಾಗಿದೆ. ಹಸಿರನ್ನೇ ಕಾಣುತ್ತ ಬೆಳೆಯುವ ನಮಗೆ ಈ ಹಸಿರು ಎಲೆಗಳ ಬಗ್ಗೆ ಗೊತ್ತೇ ಇದೆ. ಅದುವೇ ಅಕೇಶಿಯಾ ಮರ.

ತುಂಬಾ ವರ್ಷಗಳಿಂದ ಅಕೇಶಿಯಾ ಮರಗಳ ಬಗ್ಗೆ ವಿರೋಧಗಳು ಎದ್ದಿದ್ದರೂ ಹಲವು ದಿನಗಳಿಂದ ಅಕೇಶಿಯಾ ಬಗ್ಗೆ ಕೇಳುತ್ತಿದ್ದೇವೆ. ಹಾಗಾದರೆ ಅದರಲ್ಲಿ ಅಷ್ಟು ಹಾನಿಕಾರಕ ಅಂಶಗಳು ಏನಿದೆ ಎಂದು ಯೋಚಿಸಿರುತ್ತೇವೆ. ಅಕೇಶಿಯಾ ಎನ್ನುವ ಮರ ನಮ್ಮ ಊಹೆಗೂ ಮೀರಿದಂತಹ ಕೆಟ್ಟ ಸಸ್ಯ ಅಥವಾ ಮರ. ಪಶ್ಚಿಮ ಘಟ್ಟದ ಅನಂತ ಸಸ್ಯರಾಶಿಗಳನ್ನು ಎಷ್ಟು ಹಾಳುಮಾಡಿದೆ, ನಮಗೆ ಗೊತ್ತಿಲ್ಲದೆಯೇ ಅಕೇಶಿಯಾ ನಮ್ಮೆಲ್ಲರ ಬಾಳನ್ನು ಹೇಗೆ ಕಿತ್ತುಕೊಳ್ಳುತ್ತಿದೆ ಎಂದು ತಿಳಿಸುವುದು ಈ ಲೇಖನದ ಉದ್ದೇಶ.

ಮೊದಲು ಹೆಸರನ್ನೇ ತೆಗೆದು ಕೊಳ್ಳುವ. ನಂದಿ, ಬೀಟೆ, ಗಂಧ, ತೇಗ, ಹಲಸು, ಅಶೋಕ..... ಎಲ್ಲವೂ ಸರಿ ಆದರೆ ಈ ಅಕೇಶಿಯಾ ಹೆಸರು ಯಾಕೆ ವಿಚಿತ್ರವಾಗಿದೆ? ಇದರ ಹೆಸರನ್ನು ಕೇಳಿದರೆ ಯಾವುದೋ ಉಚ್ಚರಿಸಲಾರದ ಪಾರವೂರಿನವರು ಇಟ್ಟಹಾಗಿದೆಯಲ್ಲ ಎನ್ನಿಸುತ್ತದೆ. ಹೌದು, ಇದು ಮೂಲತಃ ಭಾರತದ್ದಲ್ಲ. ಅಕೇಶಿಯಾ ಎನ್ನುವುದು ಆಸ್ಟ್ರೇಲಿಯಾದಲ್ಲಿ ಕಂಡುಬರುವ ಸಸ್ಯದ ಪ್ರಭೇಧ. ಆಸ್ಟ್ರೇಲಿಯಾದ ಕಾಡುಗಳಲ್ಲಿ ಹೆಚ್ಚು ನೀರು ಕುಡಿದು, ಬಹುಬೇಗನೆ ಬೆಳೆಯುವ ಇವು ಅಲ್ಲಿ ಸಾಮಾನ್ಯ ಮರಗಳು. ಅಲ್ಲಿ ಸಾಮಾನ್ಯವಾಗಿ ಬೆಳೆವ ಈ ಸಸ್ಯ ನಮಗೆ ಮಾತ್ರ ಶಾಪವಾಗಿದೆ.

ಇನ್ನು ಇದರ ಇತಿಹಾಸಕ್ಕೆ ಬರುವ. ಬ್ರಿಟಿಷರು ಮಾಡಿದ್ದೆ ಇಷ್ಟು. ದೊಡ್ಡ ಅರಣ್ಯಗಳನ್ನು ಅನ್ವೇಷಿಸುವ ನೆಪದಲ್ಲಿ ತಮ್ಮ ಧನದಾಹಿತ್ವಕ್ಕೆ ಅದೇ ಕಾಡುಗಳನ್ನು ಕಡಿದು ಎಸ್ಟೇಟುಗಳನ್ನಾಗಿ ಮಾಡಿ ಅಭಿವೃದ್ಧಿಯ ಹೆಸರಿನಲ್ಲಿ ಕಾಡು ಕಡಿದರು. ಕಾಡು ಕಡಿದಿದ್ದರೆ ಹೇಗೋ ಮತ್ತೆ ಮರಳಿ ಬೆಳೆಯುತ್ತಿತ್ತೇನೋ..... ಆದರೆ ಅಲ್ಲಿಗೆ ಅಕೇಶಿಯದ ವಿಷಬೀಜವನ್ನು ಟಿಂಬರಿಗಾಗಿ ಬಿತ್ತಿದರು. ಬಿತ್ತಿ ಅವರು ನೆಡೆದರು, ಈಗ ಅನುಭವಿಸುತ್ತಿರುವವರು ಹಾಗೂ ಅನುಭವಿಸಲೇಬೇಕಾದವರು ನಾವು !!! 

ಮೊದಮೊದಲು ಇದರ ಬಗ್ಗೆ ಯಾರಿಗೂ ಅರಿವೇ ಇರಲಿಲ್ಲ. ಹಸಿರು ಹೇಗೆ ಉಸಿರು ತೆಗೆದೀತು !? ಅಲ್ವಾ. ನಿಜಾಂಶವೇನೆಂದರೆ 50ರ ದಶಕದ ಹೊತ್ತಿಗೆ ಸರ್ಕಾರವೂ ಅಕೇಶಿಯಾ ಪ್ಲಾಂಟೇಶನ್ ಗಳಿಗೆ ಗ್ರೀನ್ ಸಿಗ್ನಲ್ ನೀಡಿತ್ತು. ಆಗ ಆರ್ಥಿಕತೆಯ ಚಿಂತೆಯಿತ್ತೆ ಹೊರತು ಭವಿಷ್ಯವನ್ನು ಕಟ್ಟಿಕೊಂಡು ಯಾರಿಗೂ ಏನೂ ಆಗಬೇಕಿರಲಿಲ್ಲ. ಖಾಲಿ ಇದ್ದ ಜಾಗಗಳಿಗೆಲ್ಲ ಅಕೇಶಿಯಾ ಸಸಿಗಳನ್ನು ಅರಣ್ಯ ಇಲಾಖೆ ನೆಟ್ಟಿದ್ದೋ ನೆಟ್ಟಿದ್ದು. ದುಡ್ಡು ಮಾಡಿದ್ದೋ ಮಾಡಿದ್ದು.

ಸರ್ಕಾರ ಏಕೆ ಈ ಅಕೇಶಿಯಾ ಮರಗಳನ್ನು ನೆಡಲು ಉತ್ತೇಜಿಸಿತು ಎಂಬ ಪ್ರಶ್ನೆಗೆ ಉತ್ತರ ಹುಡುಕುವ ಪ್ರಯತ್ನ ಮಾಡೋಣ. ಅಕೇಶಿಯಾ ಮರಗಳು ಮೊದಲೇ ಹೇಳಿದ ಹಾಗೆ ಅತ್ಯಂತ ವೇಗವಾಗಿ ಬೆಳೆಯುತ್ತವೆ. ಅದರ ಕೊಂಬೆಗಳು ಕಡಿದಷ್ಟೇ ವೇಗವಾಗಿ ಚಿಗುರುತ್ತದೆ. ನೀರಿನ ಖನಿಜಾವಾಗಿದ್ದ ಪಶ್ಚಿಮ ಘಟ್ಟದಲ್ಲಿ ನೆಟ್ಟರೆ ಒಳ್ಳೆಯ ಬೆಳವಣಿಗೆ. ಪ್ಲೇ ವುಡ್ ಮತ್ತು ಇನ್ನಿತರ ಮರಗೆಲಸಗಳಿಗೆ ಅಕೇಶಿಯಾ ಹೇಳಿಮಾಡಿಸಿದ್ದು. ಇದನ್ನು ಪೋಷಿಸವುದು ಸುಲಭ. ಇಳುವರಿ ಬಹುಬೇಗ. ಇದರಿಂದ ರಾಜ್ಯದ ಬೊಕ್ಕಸ ಬೇಗ ತುಂಬುತ್ತದೆ ಎಂದು ಕಂಡುಕೊಂಡು ಸರ್ಕಾರ ಆಗ ಉತ್ತೇಜಿಸಿತ್ತು. ಕೆಲವೇ ವರ್ಷಗಳಲ್ಲಿ ಅಕೇಶಿಯಾ ಮರಗಳು ಪಶ್ಚಿಮ ಘಟ್ಟದ ಲಕ್ಷಗಟ್ಟಲೆ ಹೆಕ್ಟೇರ್ ಗಳ ವರೆಗೆ ಕಬಂಧಬಾಹುವನ್ನು ಚಾಚತೊಡಗಿತು.

ಅರೆ !! ಚಾಚಲಿ ಬಿಡಿ..... ಕಾಫಿ ಮತ್ತು ಟೀ ಗಿಡಗಳು ಹೀಗೆಯೇ ಬೆಳೆದದ್ದು ಎಂದುಕೊಳ್ಳುವುದು ನಾವು ಮಾಡುವ ಕೆಟ್ಟ ಯೋಚನೆ. ಏಕೆಂದರೆ ಅವುಗಳ ಎಲೆಯಂತಲ್ಲ ಇದರ ಎಲೆ. ಅಕೇಶಿಯಾ ಮರದ ಎಲೆಗಳು ಪ್ಲಾಸ್ಟಿಕಿನಂತವು. ಎಲೆಗಳು ಫೆನೊಲಿಕ್ ಮತ್ತು ಲಿಗ್ನಿನ್ ಎಂಬ ಅಂಶಗಳನ್ನು ಜಾಸ್ತಿ  ಹೊಂದಿರುವುದರಿಂದ ಒಣಗಿ ಬಿದ್ದ ಎಲೆಗಳು ಅಷ್ಟು ಬೇಗನೆ ಕೊಳೆಯುವುದೇ ಇಲ್ಲ. ಇದರಿಂದ ಮಣ್ಣಿನಲ್ಲಿರುವ ಸೂಕ್ಶ್ಮ ಜೀವಿಗಳು ಸಾಯುತ್ತವೆ. ಈ ಮರ ಎಷ್ಟು ಹಾನಿಕಾರಕ ಎಂದರೆ ತನ್ನ ಬೇರುಗಳಿಂದ ಅಂತರ್ಜಲ ಮಟ್ಟವನ್ನೂ ಬತ್ತಿಸುತ್ತದೆ. ಇದರಿಂದಲೇ ಕ್ರಮೇಣ ಭೂಮಿಯೂ ಫಲವತ್ತತೆಯನ್ನು ಕಳೆದುಕೊಳ್ಳುತ್ತದೆ. ಯಾವ ಪಶು ಪಕ್ಷಿಯೂ ಇದರ ಎಲೆಯನ್ನು ತಿನ್ನುವುದಿಲ್ಲ ಎಂದರೆ ಇದೆಷ್ಟು ಕೆಟ್ಟ ಸಸ್ಯ ಎಂದು ನೀವೇ ಯೋಚಿಸಿ. ಹೀಗೆ ಆಗಿಯೇ ಆನೆ, ಜಿಂಕೆ ಮತ್ತು ಅನೇಕ ಪ್ರಾಣಿಗಳಿಗೆ ತಿನ್ನಲು ಮೇವಿಲ್ಲದೆ ತೋಟ ಗದ್ದೆಗಳಿಗೆ ಲಗ್ಗೆ ಇಡುತ್ತಿರುವುದು. ಅಕೇಶಿಯಾ ಮತ್ತು ನೀಲಗಿರಿ ಮರಗಳಿಂದಲೇ ಈಗ ಅಕಾಲಿಕ ಮಳೆ ಮತ್ತು ಮಣ್ಣಿನ ಸವಕಳಿ ಜಾಸ್ತಿಯಾಗುತ್ತಿರುವುದು.

3500ಕ್ಕೂ ಹಳೆಯದಾದ ಪಶ್ಚಿಮಘಟ್ಟದ ಸಸ್ಯರಾಶಿಗಳನ್ನು ಶತಮಾನದ ಹಿಂದಷ್ಟೇ ಭಾರತಕ್ಕೆ ಕಾಲಿಟ್ಟ ಅಕೇಶಿಯಾ ತಿಂದುಹಾಕುತ್ತಿದೆ ಎಂದರೆ ನೀವೇ ಯೋಚಿಸಿ ಅಕೇಶಿಯಾ ಜೀವ ಸಂಕುಲಕ್ಕೆ ಎಷ್ಟು ಮಾರಕ ಎಂದು. ಹಾಗಾದರೆ ಇವನ್ನೆಲ್ಲ ಕಡಿದು ಹಾಕೋಣವ?? ಊಹೂಂ .... ಪ್ರಯೋಜನವೇ ಇಲ್ಲ. ಅಕೇಶಿಯಾದ ಬೀಜಗಳು ತುಂಬಾ ಹಗುರವಾಗಿರುತ್ತವೆ. ಬೇಗ ಪರಾಗಸ್ಪರ್ಶಕ್ಕೆ ಒಳಗಾಗುವ ಇವು ಎಷ್ಟು ಮೈಲಿಗಳಷ್ಟು ದೂರ ಬೇಕಾದರೂ ಸಂಚರಿಸಿ ಬೆಳೆದು ಪರಿಸರವನ್ನು ಹಾಳಿಮಾಡುತ್ತವೆ. ಹೀಗಾಗಿಯೇ ಕಾಡುಗಳ ಮಧ್ಯೆಯೂ ಇವು ತಲೆಯೆತ್ತಿದೆ. ಕಡಿದ ಮಾತ್ರಕ್ಕೆ ನಾಶವಾಗುವಷ್ಟು ದುರ್ಬಲವಾದ ಸಸ್ಯದ ಜಾತಿ ಇದಲ್ಲ.

ಹಾಗಾದರೆ ಇನ್ನೇನು ಮಾಡುವುದು ......? ಇನ್ನು ಮೇಲಾದರೂ ಇದನ್ನು ಅರಿತು ಅರಣ್ಯ ಇಲಾಖೆ ಮತ್ತು ಸರ್ಕಾರಕ್ಕೆ ಈ ದುಷ್ಟ ಅಕೇಶಿಯಾ ಮರಗಳನ್ನು ನೆಡದಂತೆ ಮಾಡೋಣ. ಈಗಾಗಲೇ ಅಕೇಶಿಯದಿಂದ ನಾವು ಅನುಭವಿಸಿದ್ದು ಸಾಕು. ನಾವಾದರೂ ಭವಿಷ್ಯದ ಬಗ್ಗೆ ಚೂರಾದರೂ ಯೋಚಿಸೋಣ. ನಮ್ಮ ಕಣ್ಣ ಮುಂದೆಯೇ ಈಗಾಗಲೇ ಸೂಕ್ಷ್ಮ ವಲಯದಲ್ಲಿರುವ ಪಶ್ಚಿಮಘಟ್ಟಗಳನ್ನು ಹಾಳು ಮಾಡಲು ಬಿಡುವುದೇ ಬೇಡ. ಅಕೇಶಿಯಾ ಮರಗಳನ್ನು ಪೋಷಿಸುವವರನ್ನು ವಿರೋಧಿಸೋಣ. ಏಕೆಂದರೆ ನಮ್ಮ ಭವಿಷ್ಯವನ್ನು ರಕ್ಷಿಸುವುದು ನಮ್ಮ ಹಕ್ಕು.

- ಅಮಿತ ಹೆಬ್ಬಾರ್.




1 Comments:

At January 8, 2021 at 9:42 PM , Blogger Shivu said...

👌

 

Post a Comment

Subscribe to Post Comments [Atom]

<< Home