Monday, September 27, 2021

ವನ್ನಿಯಕುಲ ಕ್ಷತ್ರಿಯ ಸಂಘದ ವತಿಯಿಂದ ಜನಸ್ಪಂದನ ಕಾರ್ಯಕ್ರಮ

ನರಸಿಂಹರಾಜಪುರ, ಸೆ 27: ತಾಲ್ಲೂಕು ವನ್ನಿಯಕುಲ ಕ್ಷತ್ರಿಯ ವತಿಯಿಂದ ಆಯೋಜಿಸಿದ್ದ ರಾಜ್ಯ ವನ್ನಿಯಕುಲ ಕ್ಷತ್ರಿಯದ ಜನಸ್ಪಂದನ ಕಾರ್ಯಕ್ರಮನ್ನು ಭಾನುವಾರ ನಗರದಲ್ಲಿ ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಚಿಕ್ಕಮಗಳೂರು, ಬಾಗೂರು, ಚಿತ್ರದುರ್ಗ, ಕಡೂರು, ಬೀರೂರು, ಶಿವಮೊಗ್ಗ, ಭದ್ರಾವತಿ ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಸುಮಾರು 100ಕ್ಕೂ ಆಧಿಕ ಮಂದಿ ವನ್ನಿಯಕುಲ ಕ್ಷತ್ರಿಯದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

Labels:

Wednesday, February 3, 2021

ಬ್ಯಾಂಕ್ ಆಫ್ ಬರೋಡಾ ಅವ್ಯವಸ್ಥೆಯ ಆಗರ!

 


ಬ್ಯಾಂಕ್ ಇರುವುದು ನಮ್ಮೆಲ್ಲರ ಹಣಕಾಸಿನ ಅಗತ್ಯತೆಯನ್ನು ಪೂರೈಸಿಕೊಳ್ಳಲು ಎಂಬುವುದು ಸತ್ಯದ ಮಾತು ಆದರೆ ಕಳಸ ತಾಲ್ಲೂಕಿನ ಹಿರೇಬೈಲ್ ನಲ್ಲಿ ಇರುವ ಬ್ಯಾಂಕ್ ಆಫ್ ಬರೋಡಾ ಶಾಖೆ ಇದಕ್ಕೆ ಸಂಪೂರ್ಣ ತದ್ವಿರುದ್ಧವಾಗಿ ಕೆಲಸ ನಿರ್ವಹಿಸುತ್ತಿದೆ.

ಬ್ಯಾಂಕ್ ನ ಒಂದೊಂದೇ ಅವ್ಯವಸ್ಥೆಗಳನ್ನು ನೋಡುವುದಾದರೆ,

1.ಬ್ಯಾಂಕ್ ಗೆ ಹೋದರೆ ಕೆಲವೊಮ್ಮೆ ಗಂಟೆಗಟ್ಟಲೇ ಸರದಿ ಸಾಲಿನಲ್ಲಿ ನಿಲ್ಲಬೇಕಾದ ಅವಶ್ಯಕತೆ.

2. ಪಾಸ್ ಬುಕ್ ಎಂಟ್ರಿ ಮಾಡಿಕೊಡಿ ಎಂದರೆ ನಾಳೆ ಬನ್ನಿ ಎಂಬ ಉತ್ತರ.

3. ಸಿಬ್ಬಂದಿಗಳಿಂದ ಅಪೂರ್ಣ ಮಾಹಿತಿ.

4. ಕೆಲವು ಸಂದರ್ಭಗಳಲ್ಲಿ ಸರ್ವರ್ ಇಲ್ಲ ಎನ್ನುವ ಉತ್ತರ.

ಇದಿಷ್ಟು ಒಳಗಿನ ಅವ್ಯವಸ್ಥೆಯಾದರೆ ಇನ್ನೊಂದು ಅತಿದೊಡ್ಡ ಸಮಸ್ಯೆ ಎಂದರೆ, ಬ್ಯಾಂಕ್ ಹೊರಗೆ ಒಂದು ಎಟಿಎಂ ಇದೆ ಸಾಕಷ್ಟು ಜನರಿಗೆ ಎಟಿಎಂ ಇದೆಯೋ ಇಲ್ಲವೋ ಎಂಬುವುದೇ ಗೊತ್ತಿಲ್ಲ. ಆ ಎಟಿಎಂ ತಿಂಗಳಲ್ಲಿ 15 ದಿನ ಕಾರ್ಯ ನಿರ್ವಹಿಸಿದರೆ ಹೆಚ್ಚು.

ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ಈ ಬಗ್ಗೆ ಬ್ಯಾಂಕ್ ಮ್ಯಾನೇಜರ್, ಸಿಬ್ಬಂದಿಗಳು ಗಾಢ ನಿದ್ರೆಯಲ್ಲಿರುವುದು ವಿಪರ್ಯಾಸವೇ ಸರಿ.

ಇಂತಹ ಅವ್ಯವಸ್ಥೆ ಸರಿಯಾಗದೆ ಇರುವುದಕ್ಕೆ ಇದಕ್ಕೆ ಪ್ರತಿಸ್ಫರ್ಧಿಯಾಗಿ ಬೇರೆ ಯಾವುದೇ ಬ್ಯಾಂಕ್ ನ ಶಾಖೆ ಇಲ್ಲದೆ ಇರುವುದು ಕೂಡ ಇದಕ್ಕೆ ಪರೋಕ್ಷ ಕಾರಣವಾಗಿದೆ. ಹಿರೇಬೈಲ್ ಪಟ್ಟಣದಲ್ಲಿ ದಿನಕ್ಕೆ ನೂರಾರು ಜನ ಸಂಚರಿಸುತ್ತಿದ್ದು ಇಲ್ಲಿ ಬೇರೆ ಯಾವುದಾದರೂ ಬ್ಯಾಂಕ್ ನ ಇನ್ನೊಂದು ಶಾಖೆ ತೆರೆದರೆ ಉತ್ತಮ ಎನ್ನುವುದು ಸಾರ್ವಜನಿಕರ ಆಶಯವಾಗಿದೆ.


Labels:

Wednesday, January 27, 2021

ರೈತನ ಬಲಿ ಪಡೆಯಲು ಕಾಯುತ್ತಿರುವ ವಿದ್ಯುತ್ ಲೈನ್! Power line waiting for farmer's sacrifice!

 


ಕಳಸ : ತಾಲೂಕಿನ ಇಡಕಣಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಿಡ್ಲಾರ್ ಮಕ್ಕಿ ಸಮೀಪದ ಗದ್ದೆಯೊಂದರ ಮೇಲೆ ವಿದ್ಯುತ್ ಮೈನ್ ಲೈನ್ ಹಾದು ಹೋಗಿದ್ದು ಅದರ ತಂತಿಗಳು ನೆಲಮಟ್ಟದಿಂದ ಸರಿ ಸುಮಾರು ಕೇವಲ 10 ಅಡಿ ಎತ್ತರದಲ್ಲೇ ಇದ್ದು, ಇದು ರೈತರಿಗೆ ಅಪಾಯದ ಮುನ್ಸೂಚನೆಯನ್ನು ನೀಡುತ್ತಿದೆ.

ಈ ಭಾಗದಲ್ಲಿ ಕೃಷಿ ಚಟುವಟಿಕೆ ನಡೆಯುವುದರಿಂದ ರೈತರು ಆ ತಂತಿಯ ಸಮೀಪವೇ ಓಡಾಟ ನಡೆಸಬೇಕಾಗದ ಅನಿವಾರ್ಯತೆ ಇದ್ದು ಹುಲ್ಲಿನ ಹೊರೆ, ಕೃಷಿ ಪರಿಕರಣಗಳನ್ನು ತೆಗೆದುಕೊಂಡು ಹೋಗುವಾಗ ಸ್ವಲ್ಪ ಯಾಮಾರಿದರೂ ಕೂಡ ಪ್ರಾಣ ಕಳೆದುಕೊಳ್ಳುವ ಸಾಧ್ಯತೆ ಇದೆ. 

ಆದ್ದರಿಂದ ಈ ಬಗ್ಗೆ ಮೆಸ್ಕಾಂ ಅಧಿಕಾರಿಗಳು ಆ ಮೈನ್ ಲೈನ್ ಹಾದುಹೋಗಿರುವಲ್ಲಿ ಇನ್ನೊಂದು ಕಂಬವನ್ನು ಹಾಕಿ ಆ ವಿದ್ಯುತ್ ತಂತಿಗಳ ಎತ್ತರವನ್ನು ಹೆಚ್ಚಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.


Labels:

Monday, January 25, 2021

ಸಾರ್ವಜನಿಕ ಶೌಚಾಲಯ ಸೌಲಭ್ಯ ವಂಚಿತ ಹಿರೇಬೈಲ್ ಪಟ್ಟಣ!

ಗ್ರಾಮ ಪಂಚಾಯಿತಿ ಇಡಕಣಿ

ಇಡಕಣಿ ಮತ್ತು ಮರಸಣಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಹಿರೇಬೈಲ್ ಎಂಬ ಪಟ್ಟಣದಲ್ಲಿ ಯಾವುದೇ ಸಾರ್ವಜನಿಕ ಶೌಚಾಲಯವಿಲ್ಲದೆ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ. 

ಸುತ್ತಮುತ್ತಲಿನ ಕೆಲವು ಹಳ್ಳಿಗಳಿಗೆ ಹಿರೇಬೈಲ್ ಒಂದು ಪಟ್ಟಣವಾಗಿದ್ದು ಬ್ಯಾಂಕ್, ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ, ಪ್ರಾಥಮಿಕ ಶಾಲೆ, ಪ್ರೌಢ ಶಾಲೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಹೀಗೆ ಇನ್ನಿತರ  ಸೌಲಭ್ಯಗಳು ಹಿರೇಬೈಲ್ ನಲ್ಲಿ ಇದ್ದು ದಿನನಿತ್ಯ ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ಹಿರೇಬೈಲ್ ಪಟ್ಟಣಕ್ಕೆ ಆಗಮಿಸುತ್ತಾರೆ. ಜೊತೆಗೆ ಈ ಪಟ್ಟಣ ಕೊಟ್ಟಿಗೆಹಾರ ಮತ್ತು ಕಳಸದ ಮುಖ್ಯ ರಸ್ತೆಯಲ್ಲಿದೆ. ಹಿರೇಬೈಲ್ ಪಟ್ಟಣದಿಂದ ಸಮೀಪದ ಹೆಮ್ಮಕ್ಕಿ, ಕೋಟೆಮಕ್ಕಿ, ಎಡೂರು, ಗುಮ್ಮನ್ ಖಾನ್, ಏಳಂದೂರು ಹೀಗೆ ಕೆಲವು ಹಳ್ಳಿಗಳಿಗೆ ಬಸ್ ಸೌಲಭ್ಯಕೂಡ ಇಲ್ಲ ಹಾಗಾಗಿ ಸಾರ್ವಜನಿಕರು ತಮ್ಮ ಊರಿಂದ ಬರಲು ಮತ್ತು ವಾಪಸ್ ತೆರಳಲು ಜೀಪ್, ಆಟೋದಂತಹ ವಾಹನಗಳನ್ನು ಆಶ್ರಯಿಸಿಬೇಕಿದ್ದು, ಕೆಲವೊಮ್ಮೆ ವಾಹನಗಳಿಗೆ ಕೆಲವು ಸಮಯ ಕಾಯಬೇಕಾಗದ ಅನಿವಾರ್ಯತೆ ಕೂಡ ಇದೆ. 

ಇಂತಹ ಒಂದು ಪಟ್ಟಣದಲ್ಲಿ ಸಾರ್ವಜನಿಕ ಶೌಚಾಲಯ ಇಲ್ಲದೆ ಇರುವುದರಿಂದ ಸಾರ್ವಜನಿಕರು ಅದರಲ್ಲೂ ಮಹಿಳೆಯರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಈ ಬಗ್ಗೆ ಇಡಕಣಿ ಮತ್ತು ಮರಸಣಿಗೆ ಗ್ರಾಮ ಪಂಚಾಯಿತಿ ಸೂಕ್ತ ಕ್ರಮ ಕೈಗೊಂಡು ಶೀಘ್ರದಲ್ಲೇ ಹಿರೇಬೈಲ್ ಪಟ್ಟಣದಲ್ಲಿ ಒಂದು ಸಾರ್ವಜನಿಕ ಶೌಚಾಲಯ ನಿರ್ಮಿಸಬೇಕೆಂಬುವುದು ಸಾರ್ವಜನಿಕ ಬೇಡಿಕೆಯಾಗಿದೆ.


"ನಾವು ಬೆಳಗ್ಗೆ ಹಿರೇಬೈಲ್ ಗೆ ಬಂದರೆ ಕೆಲವೊಮ್ಮೆ ನಾವು ಬಂದ ಕೆಲಸ ಬೇಗ ಆಗದ ಕಾರಣ ಅಥವಾ ಬೇರೆ ಊರಿಂದ ಇಲ್ಲಿಗೆ ಬಂದಾಗ ಇಲ್ಲಿಂದ ನಮ್ಮ ಊರಿಗೆ ಹೋಗಲು ಬಸ್ ಸೌಲಭ್ಯ ಇಲ್ಲದ ಕಾರಣ ಖಾಸಗಿ ವಾಹನಕ್ಕೆ ಕಾಯಬೇಕು ಈ ಸಮಯದಲ್ಲಿ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಶೌಚಾಲಯ ಹೋಗಬೇಕಾದ ಸಂದರ್ಭ ಬಂದರೆ ಇಲ್ಲೆಲ್ಲೂ ಕೂಡ ಶೌಚಾಲಯ ಸೌಲಭ್ಯವಿಲ್ಲ ಇದರಿಂದ ಮುಖ್ಯವಾಗಿ ಮಹಿಳೆಯರು ತುಂಬಾ ತೊಂದರೆ ಅನುಭವಿಸುತ್ತಿದ್ದು ಅದಷ್ಟುಬೇಗ ಹಿರೇಬೈಲ್ ನಲ್ಲಿ ಸಾರ್ವಜನಿಕ ಶೌಚಾಲಯ ಆಗಲಿ".

ಹೆಸರು ಹೇಳಲು ಇಚ್ಛಿಸದ ಮಹಿಳೆ

Friday, January 22, 2021

ಉಪನ್ಯಾಸಕನಿಂದ ವಿದ್ಯಾರ್ಥಿ ಮೇಲೆ ಹಲ್ಲೆ ವಿದ್ಯಾರ್ಥಿ ಆಸ್ಪತ್ರೆಗೆ ದಾಖಲು.

ಕಳಸ : ಉಪನ್ಯಾಸಕರೊಬ್ಬರು ವಿದ್ಯಾರ್ಥಿಯನ್ನು ಮನಬಂದಂತೆ ತಳಿಸಿ ವಿದ್ಯಾರ್ಥಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ತಾಲ್ಲೂಕಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದಿದೆ.

ತರಗತಿ ನಡೆಯುತ್ತಿರುವ ವೇಳೆ ವಿದ್ಯಾರ್ಥಿಯು ಹಿಂದೆ ತಿರುಗಿ ನಕ್ಕಿದ್ದ ಎಂಬ ಕಾರಣಕ್ಕೆ ಉಪನ್ಯಾಸಕರು ತರಗತಿಯಿಂದ ಹೊರ ನಡೆಯುವಂತೆ ಸೂಚಿಸಿದ್ದು, ವಿದ್ಯಾರ್ಥಿಕೂಡ ಅವರ ಮಾತಿಗೆ ಬೆಲೆ ಕೊಟ್ಟು ಹೊರನಡೆದು ತನ್ನ ತಪ್ಪಿಗೆ ಶಿಕ್ಷೆಯನ್ನು ಕೂಡ ಪಡೆದಿದ್ದನು. ಆದರೆ ಇದರಿಂದ ತೃಪ್ತನಾಗದ ಉಪನ್ಯಾಸಕ ಮುಂದಿನ ಅವಧಿ ತರಗತಿಗೂ ಹೊರ ನಡೆಯುವಂತೆ ಸೂಚಿಸಿದ್ದು ಆಗಲೂ ಕೂಡ ಮರು ಮಾತಾನಾಡದೆ ವಿದ್ಯಾರ್ಥಿ ಹೊರ ನಡೆಯುತ್ತಿರುವಾಗ ಉಪನ್ಯಾಸಕ ವಿದ್ಯಾರ್ಥಿ ಮೇಲೆ ಏಕಾಏಕಿ ಹಲ್ಲೆ ಮಾಡಿದ್ದು ಆ ವೇಳೆ ವಿದ್ಯಾರ್ಥಿಯು ನೆಲಕ್ಕುರುಳಿದ್ದಾನೆ. ಈ ವೇಳೆ ಆ ಉಪನ್ಯಾಸಕರ ಜೊತೆ ಇನ್ನೊಬ್ಬ ಉಪನ್ಯಾಸಕ ಕೂಡ ಸೇರಿ ಆ ವಿದ್ಯಾರ್ಥಿಗೆ ಕಾಲಿನಿಂದ ಒದ್ದು ಹಲ್ಲೆ ಮಾಡಿದ್ದಾರೆ ಜೊತೆಗೆ ಅಶ್ಲೀಲ ಪದಗಳಿಂದ ನಿಂದಿಸಿದ್ದಾರೆ ಎಂದು ಪ್ರತ್ಯಕ್ಷದರ್ಶಿ ವಿದ್ಯಾರ್ಥಿಗಳು ಮಾಹಿತಿ ನೀಡಿದ್ದಾರೆ. 

ಈ ಪ್ರಕರಣದ ಸಂಪೂರ್ಣ ವಿವರ ಸಿಸಿ ಕ್ಯಾಮರದಲ್ಲಿ ದಾಖಲಾಗಿದೆ ಆದರೆ ಉಪನ್ಯಾಸಕರು ನಮ್ಮ ಕಾಲೇಜಿನ ಸಿಸಿ ಕ್ಯಾಮರಾ ಕಾರ್ಯ ನಿರ್ವಹಿಸುತ್ತಿಲ್ಲ ಎಂದು ಪೊಲೀಸರಿಗೆ ಸುಳ್ಳು ಹೇಳುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸುತ್ತಿದ್ದಾರೆ. ಹಲ್ಲೆಗೊಳಗಾದ  ವಿದ್ಯಾರ್ಥಿಗೆ ನ್ಯಾಯ ಸಿಗುವವರೆಗೂ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸುವುದಾಗಿ ತಿಳಿಸಿದ್ದಾರೆ.

ಈ ಬಗ್ಗೆ ಕಳಸ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Friday, January 8, 2021

ಅಕೇಶಿಯಾ ಎಂಬ ವಿಷಬೀಜಾಸುರ!





ಲ್ಲ ಸಸ್ಯಗಳೂ ತಾನು ಜೀವಿಸುವ ಮಣ್ಣಿಗೆ, ತನ್ನ ಸುತ್ತಲಿನ ಪ್ರದೇಶಕ್ಕೆ ಒಳ್ಳೆಯದೇ ಮಾಡುತ್ತದೆ. ಪಶ್ಚಿಮ ಘಟ್ಟದ ಪ್ರದೇಶಗಳಲ್ಲಿ ವಾಸಿಸುವ ನಮಗೆ ಇದರ ಬಗ್ಗೆ ತಿಳಿದಿರದೆ ಇರದು. ಆದರೆ ನಮಗೆ ತಿಳಿಯದೆ ಇರುವ ವಿಷಯ ಏನೆಂದರೆ ಒಂದೇ ಜಾತಿಯ ಸಸ್ಯವನ್ನು ಅವಶ್ಯಕತೆಗೂ ಮೀರಿ ನೀಡುವುದರಿಂದ ಪರಿಸರಕ್ಕೆ ಅತ್ಯಂತ ಹಾನಿಕಾರಕ ಎಂದು. ಈಗ ಅದೇ ರೀತಿಯಾಗಿ ನೆಟ್ಟ ಮರ ಪಶ್ಚಿಮ ಘಟ್ಟಗಳ ಅಮೂಲ್ಯ ಜೀವ ಸಂಕುಲಗಳ ಅಳಿವಿಗೆ ಕಾರಣವಾಗಿದೆ. ಹಸಿರನ್ನೇ ಕಾಣುತ್ತ ಬೆಳೆಯುವ ನಮಗೆ ಈ ಹಸಿರು ಎಲೆಗಳ ಬಗ್ಗೆ ಗೊತ್ತೇ ಇದೆ. ಅದುವೇ ಅಕೇಶಿಯಾ ಮರ.

ತುಂಬಾ ವರ್ಷಗಳಿಂದ ಅಕೇಶಿಯಾ ಮರಗಳ ಬಗ್ಗೆ ವಿರೋಧಗಳು ಎದ್ದಿದ್ದರೂ ಹಲವು ದಿನಗಳಿಂದ ಅಕೇಶಿಯಾ ಬಗ್ಗೆ ಕೇಳುತ್ತಿದ್ದೇವೆ. ಹಾಗಾದರೆ ಅದರಲ್ಲಿ ಅಷ್ಟು ಹಾನಿಕಾರಕ ಅಂಶಗಳು ಏನಿದೆ ಎಂದು ಯೋಚಿಸಿರುತ್ತೇವೆ. ಅಕೇಶಿಯಾ ಎನ್ನುವ ಮರ ನಮ್ಮ ಊಹೆಗೂ ಮೀರಿದಂತಹ ಕೆಟ್ಟ ಸಸ್ಯ ಅಥವಾ ಮರ. ಪಶ್ಚಿಮ ಘಟ್ಟದ ಅನಂತ ಸಸ್ಯರಾಶಿಗಳನ್ನು ಎಷ್ಟು ಹಾಳುಮಾಡಿದೆ, ನಮಗೆ ಗೊತ್ತಿಲ್ಲದೆಯೇ ಅಕೇಶಿಯಾ ನಮ್ಮೆಲ್ಲರ ಬಾಳನ್ನು ಹೇಗೆ ಕಿತ್ತುಕೊಳ್ಳುತ್ತಿದೆ ಎಂದು ತಿಳಿಸುವುದು ಈ ಲೇಖನದ ಉದ್ದೇಶ.

ಮೊದಲು ಹೆಸರನ್ನೇ ತೆಗೆದು ಕೊಳ್ಳುವ. ನಂದಿ, ಬೀಟೆ, ಗಂಧ, ತೇಗ, ಹಲಸು, ಅಶೋಕ..... ಎಲ್ಲವೂ ಸರಿ ಆದರೆ ಈ ಅಕೇಶಿಯಾ ಹೆಸರು ಯಾಕೆ ವಿಚಿತ್ರವಾಗಿದೆ? ಇದರ ಹೆಸರನ್ನು ಕೇಳಿದರೆ ಯಾವುದೋ ಉಚ್ಚರಿಸಲಾರದ ಪಾರವೂರಿನವರು ಇಟ್ಟಹಾಗಿದೆಯಲ್ಲ ಎನ್ನಿಸುತ್ತದೆ. ಹೌದು, ಇದು ಮೂಲತಃ ಭಾರತದ್ದಲ್ಲ. ಅಕೇಶಿಯಾ ಎನ್ನುವುದು ಆಸ್ಟ್ರೇಲಿಯಾದಲ್ಲಿ ಕಂಡುಬರುವ ಸಸ್ಯದ ಪ್ರಭೇಧ. ಆಸ್ಟ್ರೇಲಿಯಾದ ಕಾಡುಗಳಲ್ಲಿ ಹೆಚ್ಚು ನೀರು ಕುಡಿದು, ಬಹುಬೇಗನೆ ಬೆಳೆಯುವ ಇವು ಅಲ್ಲಿ ಸಾಮಾನ್ಯ ಮರಗಳು. ಅಲ್ಲಿ ಸಾಮಾನ್ಯವಾಗಿ ಬೆಳೆವ ಈ ಸಸ್ಯ ನಮಗೆ ಮಾತ್ರ ಶಾಪವಾಗಿದೆ.

ಇನ್ನು ಇದರ ಇತಿಹಾಸಕ್ಕೆ ಬರುವ. ಬ್ರಿಟಿಷರು ಮಾಡಿದ್ದೆ ಇಷ್ಟು. ದೊಡ್ಡ ಅರಣ್ಯಗಳನ್ನು ಅನ್ವೇಷಿಸುವ ನೆಪದಲ್ಲಿ ತಮ್ಮ ಧನದಾಹಿತ್ವಕ್ಕೆ ಅದೇ ಕಾಡುಗಳನ್ನು ಕಡಿದು ಎಸ್ಟೇಟುಗಳನ್ನಾಗಿ ಮಾಡಿ ಅಭಿವೃದ್ಧಿಯ ಹೆಸರಿನಲ್ಲಿ ಕಾಡು ಕಡಿದರು. ಕಾಡು ಕಡಿದಿದ್ದರೆ ಹೇಗೋ ಮತ್ತೆ ಮರಳಿ ಬೆಳೆಯುತ್ತಿತ್ತೇನೋ..... ಆದರೆ ಅಲ್ಲಿಗೆ ಅಕೇಶಿಯದ ವಿಷಬೀಜವನ್ನು ಟಿಂಬರಿಗಾಗಿ ಬಿತ್ತಿದರು. ಬಿತ್ತಿ ಅವರು ನೆಡೆದರು, ಈಗ ಅನುಭವಿಸುತ್ತಿರುವವರು ಹಾಗೂ ಅನುಭವಿಸಲೇಬೇಕಾದವರು ನಾವು !!! 

ಮೊದಮೊದಲು ಇದರ ಬಗ್ಗೆ ಯಾರಿಗೂ ಅರಿವೇ ಇರಲಿಲ್ಲ. ಹಸಿರು ಹೇಗೆ ಉಸಿರು ತೆಗೆದೀತು !? ಅಲ್ವಾ. ನಿಜಾಂಶವೇನೆಂದರೆ 50ರ ದಶಕದ ಹೊತ್ತಿಗೆ ಸರ್ಕಾರವೂ ಅಕೇಶಿಯಾ ಪ್ಲಾಂಟೇಶನ್ ಗಳಿಗೆ ಗ್ರೀನ್ ಸಿಗ್ನಲ್ ನೀಡಿತ್ತು. ಆಗ ಆರ್ಥಿಕತೆಯ ಚಿಂತೆಯಿತ್ತೆ ಹೊರತು ಭವಿಷ್ಯವನ್ನು ಕಟ್ಟಿಕೊಂಡು ಯಾರಿಗೂ ಏನೂ ಆಗಬೇಕಿರಲಿಲ್ಲ. ಖಾಲಿ ಇದ್ದ ಜಾಗಗಳಿಗೆಲ್ಲ ಅಕೇಶಿಯಾ ಸಸಿಗಳನ್ನು ಅರಣ್ಯ ಇಲಾಖೆ ನೆಟ್ಟಿದ್ದೋ ನೆಟ್ಟಿದ್ದು. ದುಡ್ಡು ಮಾಡಿದ್ದೋ ಮಾಡಿದ್ದು.

ಸರ್ಕಾರ ಏಕೆ ಈ ಅಕೇಶಿಯಾ ಮರಗಳನ್ನು ನೆಡಲು ಉತ್ತೇಜಿಸಿತು ಎಂಬ ಪ್ರಶ್ನೆಗೆ ಉತ್ತರ ಹುಡುಕುವ ಪ್ರಯತ್ನ ಮಾಡೋಣ. ಅಕೇಶಿಯಾ ಮರಗಳು ಮೊದಲೇ ಹೇಳಿದ ಹಾಗೆ ಅತ್ಯಂತ ವೇಗವಾಗಿ ಬೆಳೆಯುತ್ತವೆ. ಅದರ ಕೊಂಬೆಗಳು ಕಡಿದಷ್ಟೇ ವೇಗವಾಗಿ ಚಿಗುರುತ್ತದೆ. ನೀರಿನ ಖನಿಜಾವಾಗಿದ್ದ ಪಶ್ಚಿಮ ಘಟ್ಟದಲ್ಲಿ ನೆಟ್ಟರೆ ಒಳ್ಳೆಯ ಬೆಳವಣಿಗೆ. ಪ್ಲೇ ವುಡ್ ಮತ್ತು ಇನ್ನಿತರ ಮರಗೆಲಸಗಳಿಗೆ ಅಕೇಶಿಯಾ ಹೇಳಿಮಾಡಿಸಿದ್ದು. ಇದನ್ನು ಪೋಷಿಸವುದು ಸುಲಭ. ಇಳುವರಿ ಬಹುಬೇಗ. ಇದರಿಂದ ರಾಜ್ಯದ ಬೊಕ್ಕಸ ಬೇಗ ತುಂಬುತ್ತದೆ ಎಂದು ಕಂಡುಕೊಂಡು ಸರ್ಕಾರ ಆಗ ಉತ್ತೇಜಿಸಿತ್ತು. ಕೆಲವೇ ವರ್ಷಗಳಲ್ಲಿ ಅಕೇಶಿಯಾ ಮರಗಳು ಪಶ್ಚಿಮ ಘಟ್ಟದ ಲಕ್ಷಗಟ್ಟಲೆ ಹೆಕ್ಟೇರ್ ಗಳ ವರೆಗೆ ಕಬಂಧಬಾಹುವನ್ನು ಚಾಚತೊಡಗಿತು.

ಅರೆ !! ಚಾಚಲಿ ಬಿಡಿ..... ಕಾಫಿ ಮತ್ತು ಟೀ ಗಿಡಗಳು ಹೀಗೆಯೇ ಬೆಳೆದದ್ದು ಎಂದುಕೊಳ್ಳುವುದು ನಾವು ಮಾಡುವ ಕೆಟ್ಟ ಯೋಚನೆ. ಏಕೆಂದರೆ ಅವುಗಳ ಎಲೆಯಂತಲ್ಲ ಇದರ ಎಲೆ. ಅಕೇಶಿಯಾ ಮರದ ಎಲೆಗಳು ಪ್ಲಾಸ್ಟಿಕಿನಂತವು. ಎಲೆಗಳು ಫೆನೊಲಿಕ್ ಮತ್ತು ಲಿಗ್ನಿನ್ ಎಂಬ ಅಂಶಗಳನ್ನು ಜಾಸ್ತಿ  ಹೊಂದಿರುವುದರಿಂದ ಒಣಗಿ ಬಿದ್ದ ಎಲೆಗಳು ಅಷ್ಟು ಬೇಗನೆ ಕೊಳೆಯುವುದೇ ಇಲ್ಲ. ಇದರಿಂದ ಮಣ್ಣಿನಲ್ಲಿರುವ ಸೂಕ್ಶ್ಮ ಜೀವಿಗಳು ಸಾಯುತ್ತವೆ. ಈ ಮರ ಎಷ್ಟು ಹಾನಿಕಾರಕ ಎಂದರೆ ತನ್ನ ಬೇರುಗಳಿಂದ ಅಂತರ್ಜಲ ಮಟ್ಟವನ್ನೂ ಬತ್ತಿಸುತ್ತದೆ. ಇದರಿಂದಲೇ ಕ್ರಮೇಣ ಭೂಮಿಯೂ ಫಲವತ್ತತೆಯನ್ನು ಕಳೆದುಕೊಳ್ಳುತ್ತದೆ. ಯಾವ ಪಶು ಪಕ್ಷಿಯೂ ಇದರ ಎಲೆಯನ್ನು ತಿನ್ನುವುದಿಲ್ಲ ಎಂದರೆ ಇದೆಷ್ಟು ಕೆಟ್ಟ ಸಸ್ಯ ಎಂದು ನೀವೇ ಯೋಚಿಸಿ. ಹೀಗೆ ಆಗಿಯೇ ಆನೆ, ಜಿಂಕೆ ಮತ್ತು ಅನೇಕ ಪ್ರಾಣಿಗಳಿಗೆ ತಿನ್ನಲು ಮೇವಿಲ್ಲದೆ ತೋಟ ಗದ್ದೆಗಳಿಗೆ ಲಗ್ಗೆ ಇಡುತ್ತಿರುವುದು. ಅಕೇಶಿಯಾ ಮತ್ತು ನೀಲಗಿರಿ ಮರಗಳಿಂದಲೇ ಈಗ ಅಕಾಲಿಕ ಮಳೆ ಮತ್ತು ಮಣ್ಣಿನ ಸವಕಳಿ ಜಾಸ್ತಿಯಾಗುತ್ತಿರುವುದು.

3500ಕ್ಕೂ ಹಳೆಯದಾದ ಪಶ್ಚಿಮಘಟ್ಟದ ಸಸ್ಯರಾಶಿಗಳನ್ನು ಶತಮಾನದ ಹಿಂದಷ್ಟೇ ಭಾರತಕ್ಕೆ ಕಾಲಿಟ್ಟ ಅಕೇಶಿಯಾ ತಿಂದುಹಾಕುತ್ತಿದೆ ಎಂದರೆ ನೀವೇ ಯೋಚಿಸಿ ಅಕೇಶಿಯಾ ಜೀವ ಸಂಕುಲಕ್ಕೆ ಎಷ್ಟು ಮಾರಕ ಎಂದು. ಹಾಗಾದರೆ ಇವನ್ನೆಲ್ಲ ಕಡಿದು ಹಾಕೋಣವ?? ಊಹೂಂ .... ಪ್ರಯೋಜನವೇ ಇಲ್ಲ. ಅಕೇಶಿಯಾದ ಬೀಜಗಳು ತುಂಬಾ ಹಗುರವಾಗಿರುತ್ತವೆ. ಬೇಗ ಪರಾಗಸ್ಪರ್ಶಕ್ಕೆ ಒಳಗಾಗುವ ಇವು ಎಷ್ಟು ಮೈಲಿಗಳಷ್ಟು ದೂರ ಬೇಕಾದರೂ ಸಂಚರಿಸಿ ಬೆಳೆದು ಪರಿಸರವನ್ನು ಹಾಳಿಮಾಡುತ್ತವೆ. ಹೀಗಾಗಿಯೇ ಕಾಡುಗಳ ಮಧ್ಯೆಯೂ ಇವು ತಲೆಯೆತ್ತಿದೆ. ಕಡಿದ ಮಾತ್ರಕ್ಕೆ ನಾಶವಾಗುವಷ್ಟು ದುರ್ಬಲವಾದ ಸಸ್ಯದ ಜಾತಿ ಇದಲ್ಲ.

ಹಾಗಾದರೆ ಇನ್ನೇನು ಮಾಡುವುದು ......? ಇನ್ನು ಮೇಲಾದರೂ ಇದನ್ನು ಅರಿತು ಅರಣ್ಯ ಇಲಾಖೆ ಮತ್ತು ಸರ್ಕಾರಕ್ಕೆ ಈ ದುಷ್ಟ ಅಕೇಶಿಯಾ ಮರಗಳನ್ನು ನೆಡದಂತೆ ಮಾಡೋಣ. ಈಗಾಗಲೇ ಅಕೇಶಿಯದಿಂದ ನಾವು ಅನುಭವಿಸಿದ್ದು ಸಾಕು. ನಾವಾದರೂ ಭವಿಷ್ಯದ ಬಗ್ಗೆ ಚೂರಾದರೂ ಯೋಚಿಸೋಣ. ನಮ್ಮ ಕಣ್ಣ ಮುಂದೆಯೇ ಈಗಾಗಲೇ ಸೂಕ್ಷ್ಮ ವಲಯದಲ್ಲಿರುವ ಪಶ್ಚಿಮಘಟ್ಟಗಳನ್ನು ಹಾಳು ಮಾಡಲು ಬಿಡುವುದೇ ಬೇಡ. ಅಕೇಶಿಯಾ ಮರಗಳನ್ನು ಪೋಷಿಸುವವರನ್ನು ವಿರೋಧಿಸೋಣ. ಏಕೆಂದರೆ ನಮ್ಮ ಭವಿಷ್ಯವನ್ನು ರಕ್ಷಿಸುವುದು ನಮ್ಮ ಹಕ್ಕು.

- ಅಮಿತ ಹೆಬ್ಬಾರ್.




Tuesday, December 1, 2020

ಅಧಿಕಾರಕ್ಕಿಂತ ಜನಸೇವೆಗೆ ಬಿಜೆಪಿ ಆದ್ಯತೆ - ಸಿ.ಟಿ ರವಿ

 


ಬಿಜೆಪಿ ಪಕ್ಷ ಅಧಿಕಾರಕ್ಕಿಂತ ಸಾಮಾನ್ಯ ಜನರ ಸಂಕಷ್ಟದಲ್ಲಿ ಭಾಗಿಯಾಗುವುದು ಮತ್ತು ಅವರನ್ನು ಸದಾ ನೆಮ್ಮದಿಯಾಗಿ ಇಡುವುದೇ ಬಿಜೆಪಿ ಪಕ್ಷದ ಗುರಿಯಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ತಿಳಿಸಿದರು.

ಸೋಮವಾರ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಬಿಜೆಪಿ ಯುವಮೋರ್ಚಾ ಜಿಲ್ಲಾ ಕಾರ್ಯಕರಣಿಗೆ ಸಭೆಯಲ್ಲಿ ಮಾತನಾಡಿದ ಅವರು ವಾಜಪೇಯಿ ಅವರು ಯಾವತ್ತೂ ಕುರ್ಚಿಗಾಗಿ ಹಂಬಲಿಸಿದವರಲ್ಲ ಅವರಂತಹ ಮಹಾನ್ ನಾಯಕರು ಇರುವ ಪಕ್ಷದಲ್ಲಿ ನಾವಿದ್ದೇವೆ. ಬಿಜೆಪಿಗೆ ತನ್ನದೇ ಆದ ಸಿದ್ದಂತವಿದೆ ಆ ಸಿದ್ದಂತವನ್ನು ನಾವು ಪಾಲಿಸಬೇಕು ಎಂದು ಯುವಮೋರ್ಚಾ ಪದಾಧಿಕಾರಿಗಳಿಗೆ ತಿಳಿಸಿದರು.

ಈ ಸಭೆಯಲ್ಲಿ ಉಪಸ್ಥಿತರಿದ್ದ ಬಿಜೆಪಿ ವಿಭಾಗ ಸಂಘಟನಾ ಪ್ರಧಾನ ಕಾರ್ಯದರ್ಶಿ ಗಣೇಶರಾಯರು ಮಾತನಾಡಿ ಜವಾಬ್ದಾರಿ ಹೊಂದಿರುವ ಪ್ರತಿಯೊಬ್ಬರು ಪಕ್ಷ ಕಟ್ಟುವ ಕೆಲಸದಲ್ಲಿ ಭಾಗಿಯಗಬೇಕು ಜೊತೆಗೆ ಪಕ್ಷವೇ ತಮ್ಮ ಕೆಲಸವನ್ನು ನೋಡಿ ಜವಾಬ್ದಾರಿ ಕೊಡಬೇಕು ಆ ರೀತಿಯಾಗಿ ಪಕ್ಷ ಸಂಘಟನೆಯಲ್ಲಿ ಭಾಗಿಯಾಗಬೇಕೆಂದು ಯುವ ಪದಾಧಿಕಾರಿಗಳಿಗೆ ತಿಳಿಸಿದರು.

ಹಾಗೆ ಸಭೆಯಲ್ಲಿ ರಾಜ್ಯ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿಯಾದ ಅಜಿತ್ ಹೆಗ್ಡೆ ಮತ್ತು ರಾಜ್ಯ ಉಪಾಧ್ಯಕ್ಷರಾದ ಹರ್ಷಿತ ವೆಂಕಟೇಶ್  ಮಂಡಲ ಕಾರ್ಯ ಚಟುವಟಿಕೆಗಳ ಬಗ್ಗೆ ವರದಿಯನ್ನು ಪರಿಶೀಲಿಸಿದರು.

ಈ ಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ಕಲ್ಮುರುಡಪ್ಪ, ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ಸಂದೀಪ್, ರಾಜ್ಯ ಯುವ ಮೋರ್ಚಾ  ಉಪಾಧ್ಯಕ್ಷರಾದ ಅರವಿಂದ್ ರೆಡ್ಡಿ, ನಿಕಟಪೂರ್ವ ಜಿಲ್ಲಾ ಯುವಮೋರ್ಚಾ ಅಧ್ಯಕ್ಷರಾದ ಪುಣ್ಯ ಪಾಲ್, ಯುವ ಮೋರ್ಚಾ ಜಿಲ್ಲಾ ಪ್ರಭಾರಿ ರವಿ,ಯುವಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಗನ್, ಸಂತೋಷ್ ಜಿಲ್ಲಾ ಯುವಮೋರ್ಚಾ ಕಾರ್ಯದರ್ಶಿ ಕಾಂಚನ್ ಹಾಗೂ ಜಿಲ್ಲಾ ಯುವಮೋರ್ಚಾ ಉಪಾಧ್ಯಕ್ಷರು,  ಕಾರ್ಯದರ್ಶಿಗಳು ಹಾಗೂ ಇನ್ನಿತರ ಪದಾಧಿಕಾರಿಗಳು ಹಾಜರಿದ್ದರು.

Saturday, November 28, 2020

ಮೂಡಿಗೆರೆ ಮಂಡಲ ಪ್ರಶಿಕ್ಷಣ ವರ್ಗಕ್ಕೆ ಚಾಲನೆ.


‌ಮೂಡಿಗೆರೆ : ಭಾರತೀಯ ಜನತಾ ಪಾರ್ಟಿಯ ಮೂಡಿಗೆರೆ ಮಂಡಲದ ಪ್ರಶಿಕ್ಷಣ ವರ್ಗಕ್ಕೆ  ಮುಡಿಗೆರೆಯ ರೈತ ಭವನದಲ್ಲಿ ಶನಿವಾರ ಚಾಲನೆ ದೊರೆಯಿತು.

‌ ಈ ಪ್ರಶಿಕ್ಷಣ ವರ್ಗದ ಉದ್ಘಾಟನೆ ಕಾರ್ಯಕ್ರಮದಲ್ಲಿ ಮೂಡಿಗೆರೆ ಮಂಡಲ 

 ಅಧ್ಯಕ್ಷರಾದ ರಘು ಜೆ ಎಸ್,ಶಾಸಕರಾದ ಎಂ ಪಿ ಕುಮಾರಸ್ವಾಮಿ, ಪ್ರಭಾರಿಗಳಾದ ರಾಜ್ ಶೇಖರ್, ಜಿಲ್ಲಾ ಅಧ್ಯಕ್ಷರಾದ ಕಲ್ಮರುಡಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೇವರಾಜ್ ಶೆಟ್ಟರು, ಜಿಲ್ಲಾ ಕಾರ್ಯದರ್ಶಿ ಮನೋಜ್ ಹಳೆಕೊಟೆ, ಕಾರ್ಯಕ್ರಮ ಸಂಚಾಲಕರಾದ ಪುರುಷೋತ್ತಮ, ಪ್ರಧಾನ ಕಾರ್ಯದರ್ಶಿಗಳಾದ ಪಂಚಾಕ್ಷರಿ ಮತ್ತು ಗಜೇಂದ್ರ ಮತ್ತು ಶಶಿಧರ್ ಜಾವಳಿ, ಮಹೇಶ್ ಬೆರಣಗೊಡು ಹಾಜರಿದ್ದರು.

ಪ್ರಶಿಕ್ಷಣ ವರ್ಗದಲ್ಲಿ ಒಟ್ಟು 9 ಗೋಷ್ಠಿಗಳು ನಡೆದಿದ್ದು,  ಸಂಪನ್ಮೂಲ ವ್ಯೆಕ್ತಿಗಳು ಹಲವಾರು ವಿಷಯಗಳ ಬಗ್ಗೆ ವಿಚಾರ ಮಂಡಿಸಿದರು. ಸುಮಾರು 100ಕ್ಕೂ ಹೆಚ್ಚು ಶಿಭಿರಾರ್ಥಿಗಳು ಈ ಪ್ರಶಿಕ್ಷಣ ವರ್ಗದಲ್ಲಿ ಭಾಗವಹಿಸಿದ್ದರು.

ನಾಳೆ ಪ್ರಶಿಕ್ಷಣ ವರ್ಗದ ಅಂತಿಮ ದಿನವಾಗಿದ್ದು, ಹಲವು ವಿಚಾರ ಮಂಡನೆಗಳೊಂದಿಗೆ ಕಾರ್ಯಕ್ರಮಕ್ಕೆ ತೆರೆ ಬೀಳಲಿದೆ.

Monday, November 16, 2020

ದೀಪಾವಳಿಗೆ ಬಡವನ ಮನೆ ದೀಪ ಬೆಳಗಿಸಿದ ಮನ್ವಂತರ ಬಳಗ


ಕುದುರೆಮುಖ ಅರಣ್ಯ ನಿವಾಸಿ, ಕಾಡು ಪ್ರಾಣಿಗಳೊಂದಿಗೆ ಒಡನಾಟದ ಜೀವನ ನಡೆಸುತ್ತಿರುವ ಕುದುರೆಮುಖದ ರೂಬನ್ ಇವರ ಶೆಡ್ ಗೆ ಕಳಸದ powerpointbattaries ಮತ್ತು ಮನ್ವಂತರ ಬಳಗ ಕಳಸ ಇವರ ಸಹಯೋಗದಲ್ಲಿ ಸೋಲಾರ್ ದೀಪದ ವ್ಯವಸ್ಥೆಯನ್ನು ಅಳವಡಿಸಿಕೊಡಲಾಯಿತು.

ಕತ್ತಲೆತುಂಬಿದ ಮನೆಗೆ ಬೆಳಕು ನೀಡುವ ಮೂಲಕ ಮನ್ವಂತರ ತಂಡವು ವಿಶೇಷವಾಗಿ ಈ ಬಾರಿಯ ದೀಪಾವಳಿಯನ್ನು ಆಚರಿಸಿಕೊಂಡಿತು.

ಈ ಸಂದರ್ಭದಲ್ಲಿ ಪ್ರಶಾಂತ್ ,ಮುರುಳಿ ,ಶ್ರೀಕಾಂತ್ ಸುಮಂತ್, ಅಭಿ, ಸುರೇಂದ್ರ, ಜಾಬಿರ್ ,ವಿಘರಾಜ್,ಸಂತೋಷ್, ಅಕ್ಷಯ್,ಪ್ರಶಾಂತ್ ಹಾಜರಿದ್ದರು.


Monday, September 28, 2020

ಭಗತ್ ಎಂಬ ಕ್ರಾಂತಿಯ ಜ್ವಾಲೆ....!


ಭಗತ್ ಸಿಂಗ್ ಎಂದೊಡನೆ ನಮಗೆ ನೆನಪಾಗುವುದು  "ಇನ್ಕ್ವಿಲಾಬ್ ಜಿಂದಾಬಾದ್" ಎಂಬ ದೇಶಭಕ್ತಿ ಘೋಷಣೆ . ಇಂದು ಭಾರತ ಮಾತೆಯ ಹೆಮ್ಮೆಯ ಪುತ್ರ ಭಗತ್ ಸಿಂಗ್ ಅವರ 113ನೇ ಜನ್ಮದಿನ. ಈ ಮಹಾನ್ ಹೋರಾಟಗಾರನ ಪಾದ ಚರಣಗಳಿಗೆ ನಮ್ಮದೊಂದು ಸಲಾಂ.

ಭಗತ್ ಸಿಂಗ್ 1907 ಸೆಪ್ಟೆಂಬರ್ 28 ರಂದು  ಈಗಿನ ಪಾಕಿಸ್ತಾನದ ಲಾಯಲ್ಪುರ್ ಜಿಲ್ಲೆಯ ಜರಾನ್ ವಾಲಾ ತಾಲ್ಲೂಕಿನಲ್ಲಿರುವ ಬಂಗಾ ಹಳ್ಳಿಯಲ್ಲಿ ಜನಿಸಿದರು.ಬ್ರಿಟಿಷರ ಅಧಿನದಲ್ಲಿದ್ದ ಭಾರತವನ್ನು ಅವರ ಮುಷ್ಟಿಯಿಂದ ಮುಕ್ತಗೊಳಿಸಲು ಕ್ರಾಂತಿಕಾರಿ ಮಾರ್ಗ ಅನುಸರಿಸಿದ್ದ ಯುವ ವೀರ ಸೇನಾನಿ ಭಗತ್ ಸಿಂಗ್ ಇವರ ಈ ಹೋರಾಟದ ಹಾದಿ ಎಷ್ಟೋ ಯುವ ಜನತೆಗೆ ಪ್ರೇರಣೆಯಾಯಿತು.

ಏಪ್ರಿಲ್ 13, 1919ರಂದು ನಡೆದ ಜಲಿಯನ್ ವಾಲಾ ಬಾಗ್ ದುರಂತ ನಡೆದ ದಿನ ಶಾಲೆಯಿಂದ ತಪ್ಪಿಸಿಕೊಂಡ ಹೋದ ಭಗತ್ ಸಿಂಗ್ ದುರಂತ ನಡೆದ ಸ್ಥಳಕ್ಕೆ ಹೋಗಿ ಖಾಲಿ ಬಾಟಲಿಯಲ್ಲಿ ರಕ್ತಸಿಕ್ತವಾಗಿದ್ದ ಮಣ್ಣನ್ನು ತುಂಬಿಕೊಂಡು ಬಂದಿದ್ದ. ನಂತರ ಅದನ್ನು ಪ್ರತಿದಿನವೂ ಪೂಜಿಸುತ್ತಿದ್ದರು.
ಬಾಲ್ಯದಲ್ಲಿ ಭಗತ್ ಸಿಂಗ್ ಬ್ರಿಟಿಷರೊಂದಿಗೆ ಹೋರಾಟ ನಡೆಸಲು ಹೊಲಗದ್ದೆಗಳಲ್ಲಿ ಭತ್ತದ ಬದಲು ಬಂದೂಕುಗಳನ್ನು ಬೆಳೆಯಬೇಕೆಂದು ಹೇಳುತ್ತಿದ್ದರು.
ನ್ಯಾಶನಲ್ ಕಾಲೇಜಿನಲ್ಲಿ ಓದುತ್ತಿದ್ದಾಗ ಭಗತ್ ಸಿಂಗ್ ಚಂದ್ರಶೇಖರ್ ಆಜಾದ್ ಅವರ ಹಿಂದೂಸ್ತಾನ್ ರಿಪಬ್ಲಿಕನ್ ಅಸೋಸಿಯೇಶನ್ ಸೇರಿ ಕ್ರಾಂತಿಕಾರಿ ಚಳವಳಿಯಲ್ಲಿ ಭಾಗವಹಿಸಿದರು. ಭಗತ್ ಸಿಂಗ್ ಹೆಚ್‌ಆರ್‌ಎ ಅನ್ನು ಹಿಂದೂಸ್ಥಾನ್ ಸೋಷಿಯಲಿಸ್ಟ್ ರಿಪಬ್ಲಿಕನ್ ಅಸೋಸಿಯೇಶನ್ ಎಂದು ಮರು ನಾಮಕರಣ ಮಾಡಿದ್ದರು.

ಭಗತ್ ಸಿಂಗ್ ಅವರ ಪ್ರಮುಖ ಮಾತುಗಳಲ್ಲಿ 
"ಕ್ರಾಂತಿ ಎಂದರೆ ಅದರಲ್ಲಿ ರಕ್ತಮಯ ಕಲಹ ಇರಬೇಕು ಎಂದೇನೂ ಇಲ್ಲ. ಹಾಗೆಯೇ ವೈಯುಕ್ತಿಕ ದ್ವೇಷಕ್ಕೂ ಇದರಲ್ಲಿ ಅವಕಾಶ ಇಲ್ಲ. ಅದು ಬಾಂಬ್ ಮತ್ತು ಪಿಸ್ತೂಲುಗಳ ಸಂಸ್ಕೃತಿ ಅಲ್ಲ. ನಮ್ಮ ಪ್ರಕಾರ ಕ್ರಾಂತಿ ಎಂದರೆ ಎದ್ದು ಕಾಣುವ ಅನ್ಯಾಯದಿಂದ ಕೂಡಿದ ಈಗಿನ ವ್ಯವಸ್ಥೆ ಬದಲಾಗಬೇಕು" 
ಈ ಮಾತು ಹಲವಾರು ಯುವ ಜನರಲ್ಲಿ ಸ್ವಾತಂತ್ರ್ಯದ ಕಿಚ್ಚು ಹತ್ತಿ, ಹಲವಾರು ಯುವಕರು ಸ್ವಾತಂತ್ರ್ಯ ಚಳುವಳಿಯಲ್ಲಿ ಧುಮುಕಿದರು.

ಸೈಮನ್ ಆಯೋಗದವಿರುದ್ಧ ರಣಕಹಳೆ.
1928 ರಲ್ಲಿ ಸೈಮನ್ ಕಮಿಷನ್ ಭಾರತಕ್ಕೆ ಆಗಮಿಸಿತು. ಭಾರತದ ಮುಂದಿನ ದಿಶೆಯನ್ನು ನಿರ್ಧರಿಸುವುದು ಈ ಮಂಡಲದ ಉದ್ದೇಶವಾಗಿತ್ತು. ಭಾರತದಾದ್ಯಂತ ಈ ಮಂಡಲಕ್ಕೆ ತೀವ್ರ ವಿರೋಧ ವ್ಯಕ್ತವಾಯಿತು. ಲಾಲಾ ಲಜಪತ ರಾಯ್ ನೇತೃತ್ವದಲ್ಲಿ ಜನರು ‘ಸೈಮನ್ ಗೋ ಬ್ಯಾಕ್’ (ಸೈಮನ್ ಹಿಂದಿರುಗು) ಎಂದು ನಿಷೇಧ ಯಾತ್ರೆಯೊಂದಿಗೆ ಬೀದಿಗಿಳಿದರು! ಪರಿಸ್ಥಿತಿಯನ್ನು ನಿಯಂತ್ರಿಸಲು ಆಂಗ್ಲ ಅಧಿಕಾರಿಗಳು ನೆರೆದವರ ಮೇಲೆ ಅಮಾನುಷ ಲಾಠಿ ಪ್ರಹಾರ ಮಾಡಿಸಿದರು. ಇದರಲ್ಲಿ ಲಾಲಾ ಲಜಪತ ರಾಯ್ ಅಸುನೀಗಿದರು. ಇದನ್ನು ಸಹಿಸದ ಕ್ರಾಂತಿಕಾರಿಗಳು, ಲಾಲಾಜಿ ಸಾವಿಗೆ ಕಾರಣನಾದ ಆಂಗ್ಲ ಅಧಿಕಾರಿ ಸ್ಕಾಟ್ ನನ್ನು ಕೊಲ್ಲುವ ನಿರ್ಧಾರ ಮಾಡಿದರು. ಅದರಂತೆ ಭಗತ್ ಸಿಂಗ್, ರಾಜಗುರು ಮತ್ತು ಸುಖದೇವ್ ಸೇರಿ ಸ್ಕಾಟ್ ನಿವಾಸದ ಹೊರಗೆ ಹೊಂಚು ಹಾಕಿದರು. ಆದರೆ ಸ್ಕಾಟ್ ಬದಲು ಸೌಂಡರ್ಸ್ ಎಂಬ ಇನ್ನೋರ್ವ ಕ್ರೂರ ಅಧಿಕಾರಿಯು ಭಗತ್ ಸಿಂಗ್ ಹಾರಿಸಿದ ಗುಂಡಿಗೆ ಬಲಿಯಾದನು.

ಹತ್ಯೆಯ ನಂತರ ಅವರು ಕೈ ಹಾಕಿದ ಯೋಜನೆ  ಬ್ರಿಟಿಶ್ ಸರ್ಕಾರದ ಡಿಫೆನ್ಸ್ ಆಕ್ಟ್ ಅನ್ನು ವಿರೋಧಿಸಿ ‘ಅಸೆಂಬ್ಲಿಯಲ್ಲಿ ಬಾಂಬ್ ಹಾಕುವುದು,ಮತ್ತು ಪೊಲೀಸರಿಗೆ ಭಗತ್ ಸಿಂಗ್ ಶರಣಾಗುವುದು!’.ಭಗತ್ ಸಿಂಗ್ ಏಕೆ ಅಲ್ಲಿ ಬಾಂಬ್ ಹಾಕಬೇಕು ಮತ್ತೆ ಶರಣಾಗಬೇಕು ಎಂದು ಉಳಿದ ಕ್ರಾಂತಿಕಾರಿಗಳು ಕೇಳಿದ್ದಕ್ಕೆ “ಕಿವುಡರಿಗೆ ಕೇಳಿಸುವಂತೆ ಮಾಡಲು ಭಾರಿ ಸದ್ದನ್ನೇ ಮಾಡಬೇಕು.ಹಾಗೆ ಮುದುಡಿ ಮಲಗಿರುವ ದೇಶದ ಜನರನ್ನ ಕ್ರಾಂತಿಯ ಅವಿಸ್ಸಿನಿಂದ ಬಡಿದ್ದೆಬ್ಬಿಸಬೇಕು ಎಂದು ಭಗತ್ ಸಿಂಗ್ ಹೇಳಿದ್ದರು.

23ನೇ ವರ್ಷಕ್ಕೆ ಹುತಾತ್ಮರಾದ ವೀರಯೋಧ.
ಮಾರ್ಚ್ 23, 1931ರಂದು ಭಗತ್ ಸಿಂಗ್ ಮತ್ತು ಅವರ ಸಹಚರರಾದ ರಾಜಗುರು ಮತ್ತು ಸುಖದೇವ್ ಅವರನ್ನು ಗಲ್ಲಿಗೆರಿಸಲಾಯಿತು.
ಜೈ ಹಿಂದ್ 🇮🇳

✍ ಪ್ರೀತಮ್ ಹೆಬ್ಬಾರ್.